ADVERTISEMENT

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ ‘ಶ್ರೇಯ’

ಗೆಲುವಿಗಾಗಿ ದೇವದತ್ತ ಬಳಗದ ಹೋರಾಟ; ನಾಕೌಟ್ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:21 IST
Last Updated 31 ಜನವರಿ 2026, 15:21 IST
ಶ್ರೇಯಸ್ ಗೋಪಾಲ್ 
ಶ್ರೇಯಸ್ ಗೋಪಾಲ್    

ಮೊಹಾಲಿ: ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ‘ಆಪದ್ಭಾಂಧವ’ನಾದರು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ಎದುರು ಕರ್ನಾಟಕ ತಂಡವು 7 ರನ್‌ಗಳ ಮಹತ್ವದ ಮುನ್ನಡೆ ಗಳಿಸಲು ಶ್ರೇಯಸ್ ಬ್ಯಾಟಿಂಗ್ ಕಾರಣವಾಯಿತು.

ಈ ಸಲದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪಲು ಈಗ ನಡೆಯುತ್ತಿರುವ ಪಂಜಾಬ್ ಎದುರಿನ ಪಂದ್ಯದಲ್ಲಿ ಜಯಿಸುವುದು ಕರ್ನಾಟಕ ತಂಡಕ್ಕೆ ಅಗತ್ಯವಾಗಿದೆ. ಆದ್ದರಿಂದ ಕೊನೆಯ ದಿನವಾದ ಭಾನುವಾರ ಪಂಜಾಬ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬೇಕು. ನಂತರ ಗುರಿ ಬೆನ್ನಟ್ಟಿ ಗೆಲ್ಲಬೇಕು. ಆದರೆ ಶನಿವಾರ ದಿನದಾಟದ ಆಂತ್ಯಕ್ಕೆ ಪಂಜಾಬ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 45 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 119 ರನ್ ಗಳಿಸಿದೆ. ಒಟ್ಟು 112 ರನ್‌ಗಳ ಮುನ್ನಡೆ ಸಾಧಿಸಿದೆ. ನಾಯಕ ಉದಯ್ ಸಹರನ್ (ಬ್ಯಾಟಿಂಗ್ 63; 110ಎ) ಮತ್ತು ಅನ್ಮೋಲ್‌ಪ್ರೀತ್ ಸಿಂಗ್ (ಬ್ಯಾಟಿಂಗ್ 6) ಕ್ರೀಸ್‌ನಲ್ಲಿದ್ದಾರೆ. 

ಬಿ ಗುಂಪಿನಲ್ಲಿ 28 ಅಂಕ ಗಳಿಸಿರುವ ಮಧ್ಯಪ್ರದೇಶವು ಅಗ್ರಸ್ಥಾನದೊಂದಿಗೆ ಈಗಾಗಲೇ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಎರಡನೇ ಸ್ಥಾನದಲ್ಲಿ ಸೌರಾಷ್ಟ್ರ (25 ಅಂಕ) ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರ (24 ಅಂಕ) ಇದ್ದಾರೆ. ಆದ್ದರಿಂದ 21 ಅಂಕ ಗಳಿಸಿರುವ ಕರ್ನಾಟಕವು ಪಂಜಾಬ್ ವಿರುದ್ಧ ಗೆದ್ದರೆ 6 ಅಂಕಗಳು ಲಭಿಸುತ್ತವೆ. ಆಗ 27 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ನಾಕೌಟ್ ಪ್ರವೇಶಿಸುವುದು ಸುಲಭವಾಗಲಿದೆ. ಒಂದೊಮ್ಮೆ ಪಂದ್ಯ ಡ್ರಾ ಆದರೆ ಕರ್ನಾಟಕಕ್ಕೆ ಕೇವಲ 3 ಅಂಕ ದೊರೆಯಲಿದ್ದು, ನಾಕೌಟ್ ಪ್ರವೇಶ ಸಾಧ್ಯವಾಗುವುದಿಲ್ಲ. ಆದ್ದರಿಂದ ಗೆಲ್ಲಲೇಬೇಕಾದ ಒತ್ತಡ ದೇವದತ್ತ ಪಡಿಕ್ಕಲ್ ಬಳಗದ ಮುಂದಿದೆ. 

ADVERTISEMENT

ಶ್ರೇಯಸ್ ಹೋರಾಟ: ಪಂಜಾಬ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 309 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಕರ್ನಾಟಕ ತಂಡವು 110.2 ಓವರ್‌ಗಳಲ್ಲಿ 316 ರನ್ ಗಳಿಸಿತು. ಶ್ರೇಯಸ್ ಗೋಪಾಲ್ (77; 195ಎ, 4X6) ಅವರ ದಿಟ್ಟ ಆಟದಿಂದ ಮುನ್ನಡೆ ಸಾಧ್ಯವಾಯಿತು. 

ಶುಕ್ರವಾರದ ದಿನದಾಟದ ಅಂತ್ಯಕ್ಕೆ ಕರ್ನಾಟಕವು 6ಕ್ಕೆ255 ರನ್ ಗಳಿಸಿತ್ತು. ಮುನ್ನಡೆ ಸಾಧಿಸಲು 54 ರನ್‌ಗಳ ಅಗತ್ಯವಿತ್ತು. 

ಕ್ರೀಸ್‌ನಲ್ಲಿದ್ದ ಶ್ರೇಯಸ್  ಗೋಪಾಲ್ ಹಾಗೂ ವಿದ್ಯಾಧರ್ ಪಾಟೀಲ ಅವರು ಶನಿವಾರ ಆಟ ಮುಂದುವರಿಸಿದರು. 11 ರನ್‌ಗಳು ಸೇರುವಷ್ಟರಲ್ಲಿ ಎರಡು ವಿಕೆಟ್‌ಗಳು ಪತನವಾದವು. ವಿದ್ಯಾಧರ್ (34 ರನ್) ಮತ್ತು ಶಿಖರ್ ಶೆಟ್ಟಿ (1 ರನ್) ಪೆವಿಲಿಯನ್ ಸೇರಿದರು. ಇದರಿಂದಾಗಿ ಹಿನ್ನಡೆಯ ಭೀತಿ ಎದುರಾಗಿತ್ತು.  

ಈ ಹಂತದಲ್ಲಿ ಶ್ರೇಯಸ್ ಜೊತೆಗೂಡಿದ ಮೊಹ್ಸಿನ್ ಖಾನ್ (10; 34ಎ, 6X1) ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 26 ರನ್ ಸೇರಿಸಿದರು. ಇದರಿಂದಾಗಿ ತಂಡವು ಮುನ್ನಡೆ ಸಾಧಿಸಿತು. ಶ್ರೇಯಸ್ ತಂಡವನ್ನು ಹಿನ್ನಡೆಯ ಆತಂಕದಿಂದ ಪಾರುಮಾಡಿದರು. ಅವರು ಅನ್ಮೋಲ್‌ಜೀತ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಸುಖದೀಪ್‌ಗೆ ಕ್ಯಾಚಿತ್ತರು. 

ಮಂಜಿನಿಂದಾಗಿ ಆರಂಭ ವಿಳಂಬ

ಕರ್ನಾಟಕ ಮತ್ತು ಪಂಜಾಬ್ ನಡುವಣ ಪಂದ್ಯದ ಮೂರನೇ ದಿನದಾಟವು ದಟ್ಟ ಮಂಜಿನಿಂದಾಗಿ  ಶನಿವಾರ ಬೆಳಿಗ್ಗೆ ತಡವಾಗಿ ಆರಂಭವಾಯಿತು. ಬೆಳಗಿನ ಅವಧಿಯಲ್ಲಿ ಆಟವೇ ನಡೆಯಲಿಲ್ಲ.  ಅದರಿಂದಾಗಿ 11.30ಕ್ಕೆ ಊಟದ ವಿರಾಮ ನೀಡಲಾಯಿತು. ಮಧ್ಯಾಹ್ನ 12.10ಕ್ಕೆ ಆಟ ಆರಂಭವಾಯಿತು. ಭಾನುವಾರವೂ ಇಂತಹದ ವಾತಾವರಣ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಂಜಾಬ್: 92 ಓವರ್‌ಗಳಲ್ಲಿ 309.  ಕರ್ನಾಟಕ: 110.2 ಓವರ್‌ಗಳಲ್ಲಿ 316 (ಶ್ರೇಯಸ್ ಗೋಪಾಲ್ 77, ವಿದ್ಯಾಧರ್ ಪಾಟೀಲ 34, ಶಿಖರ್ ಶೆಟ್ಟಿ 1, ಮೊಹ್ಸಿನ್ ಖಾನ್ 10, ಪ್ರಸಿದ್ಧಕೃಷ್ಣ ಔಟಾಗದೇ 3,ಸುಖದೀಪ್ ಭಜ್ವಾ 42ಕ್ಕೆ3, ಹರಪ್ರೀತ್ ಬ್ರಾರ್ 125ಕ್ಕೆ4, ಅನ್ಮೋಲ್‌ಜೀತ್ ಸಿಂಗ್ 62ಕ್ಕೆ2) ಎರಡನೇ ಇನಿಂಗ್ಸ್: ಪಂಜಾಬ್: 45 ಓವರ್‌ಗಳಲ್ಲಿ 3ಕ್ಕೆ119 (ಅಭಿಜಿತ್ ಗಾರ್ಗ್ 33, ಉದಯ ಸಹರನ್ ಬ್ಯಾಟಿಂಗ್ 63, ಅನ್ಮೋಲ್‌ಪ್ರೀತ್ ಸಿಂಗ್ ಬ್ಯಾಟಿಂಗ್ 6, ಶಿಖರ್ ಶೆಟ್ಟಿ 43ಕ್ಕೆ1, ಶ್ರೇಯಸ್ ಗೋಪಾಲ್ 25ಕ್ಕೆ1, ಮೊಹ್ಸಿನ್ ಖಾನ್ 29ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.