ADVERTISEMENT

ರಣಜಿ: ಕರ್ನಾಟಕಕ್ಕೆ ಅಲ್ಪ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 20:05 IST
Last Updated 29 ಜನವರಿ 2020, 20:05 IST
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್   

ನವದೆಹಲಿ: ಇನಿಂಗ್ಸ್‌ ಮುನ್ನಡೆಯ ಒತ್ತಡದಲ್ಲೇ ಆಡಿದಂತೆ ಕಂಡ ಕರ್ನಾಟಕ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಬುಧವಾರ ರೈಲ್ವೇಸ್‌ ಎದುರು ಪರದಾಡಿತು. ಆದರೆ ಮೂರನೇ ದಿನದಾಟದಲ್ಲಿ ಅಲ್ಪ ಮುನ್ನಡೆ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಯಿತು.

ಈ ಬಾರಿ ರೈಲ್ವೇಸ್‌ ತಂಡದ ನೀರಸ ಪ್ರದರ್ಶನದ ಜೊತೆಗೆ ಕರ್ನೇಲ್‌ ಸಿಂಗ್‌ ಕ್ರೀಡಾಂಗಣದಲ್ಲಿ ಮೊದಲ ದಿನದಾಟ ನೋಡಿದಾಗ ಕರ್ನಾಟಕ ಈ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯುವಂತೆ ಕಂಡಿತ್ತು. ಆದರೆ ಮೂರನೇ ದಿನ ಅಮಿತ್‌ ಮಿಶ್ರಾ (70ಕ್ಕೆ5) ಮತ್ತು ಹಿಮಾಂಶು ಸಂಗ್ವಾನ್‌ (47ಕ್ಕೆ3) ಅವರ ಬೌಲಿಂಗ್ ಎದುರು ತಿಣುಕಾಡಿತು.

ಮಂಗಳವಾರ 7 ವಿಕೆಟ್‌ಗೆ 160 ರನ್‌ ಗಳಿಸಿದ್ದ ರೈಲ್ವೇಸ್‌ ತಂಡವನ್ನು 182 ರನ್ನಿಗೆ ಆಲೌಟಾಯಿತು.ಪ್ರತೀಕ್‌ ಜೈನ್‌ 38 ರನ್ನಿಗೆ 5 ವಿಕೆಟ್‌ ಗಳಿಸಿದರೆ, ಮಿಥುನ್‌ ನಾಲ್ಕು ವಿಕೆಟ್‌ ಪಡೆದರು. ಕರ್ನಾಟಕ, ದಿನದ ಅಂತ್ಯಕ್ಕೆ 9 ವಿಕೆಟ್‌ಗೆ 199 ರನ್‌ ಗಳಿಸಿದೆ.ಮುನ್ನಡೆ 17 ರನ್‌. ಗುರುವಾರ ಪಂದ್ಯದ ಕೊನೆಯ ದಿನವಾಗಿದೆ.

ADVERTISEMENT

ದೇವದತ್ತ ಪಡಿಕ್ಕಲ್‌ (75 ಎಸೆತಗಳಲ್ಲಿ 5%) ಬೆಳಿಗ್ಗೆ ಅರ್ಧ ಶತಕ ಗಳಿಸಿದ ನಂತರ, ಮಧ್ಯಾಹ್ನ ಶರತ್‌ ಶ್ರೀನಿವಾಸ್‌ ಅರ್ಧ ಶತಕ (ಬ್ಯಾಟಿಂಗ್‌ 56, 164 ಎ, 5 ಬೌಂ) ಗಳಿಸಿದ್ದರಿಂದ ಕರ್ನಾಟಕ ಮುಖಭಂಗ ತಪ್ಪಿಸಿಕೊಂಡಿತು.

ಕೆ. ಗೌತಮ್‌ ಅವರ ಆಕ್ರಮಣಕಾರಿ ಆಟ ಕಳೆಗುಂದಿದ ದಿನದಾಟಕ್ಕೆ ಕೆಲಕಾಲ ಜೀವಕಳೆ ತಂದಿತು. 110 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಆಡಿದ ಗೌತಮ್‌ ಕೇವಲ 31 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌ ಒಳಗೊಂಡ 41 ರನ್‌ ಹೊಡೆದರು. ಶ್ರೀನಿವಾಸ್‌ ಜೊತೆ ಏಳನೆ ವಿಕೆಟ್‌ಗೆ ಗೌತಮ್‌ ಸೇರಿಸಿದ 64 ರನ್‌ಗಳಿಂದಾಗಿ ಕರ್ನಾಟಕದ ಮೇಲಿನ ಒತ್ತಡ ಒಂದಿಷ್ಟು ಕಡಿಮೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.