ಕೆ.ಎಲ್. ರಾಹುಲ್
ಬೆಂಗಳೂರು: ಈ ಬಾರಿಯ ರಣಜಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೇರಲು ನಿರ್ಣಾಯಕವೆನಿಸಿರುವ ಹರಿಯಾಣ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡಿದೆ. ರಾಷ್ಟ್ರೀಯ ತಂಡದಲ್ಲಿ ಆಡುವ ಪ್ರಮುಖ ಬ್ಯಾಟರ್ ಕೆ.ಎಲ್. ರಾಹುಲ್ ಕಣಕ್ಕಿಳಿದಿರುವುದು, ಕರ್ನಾಟಕದ ಬ್ಯಾಟಿಂಗ್ ಬಲ ಹೆಚ್ಚಿಸಿದೆ.
'ಸಿ' ಗುಂಪಿನಲ್ಲಿರುವ ಉಭಯ ತಂಡಗಳಿಗೆ ಗುಂಪು ಹಂತದಲ್ಲಿ ಇದು ಅಂತಿಮ ಪಂದ್ಯವಾಗಿದೆ. ಎರಡೂ ತಂಡಗಳು ಆಡಿರುವ ತಲಾ ಆರು ಪಂದ್ಯಗಳಲ್ಲಿ ಒಂದರಲ್ಲೂ ಸೋಲು ಕಂಡಿಲ್ಲ. ಹರಿಯಾಣ ತಲಾ ಮೂರು ಜಯ ಹಾಗೂ ಡ್ರಾನೊಂದಿಗೆ 26 ಪಾಯಿಂಟ್ ಹೊಂದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಎರಡರಲ್ಲಿ ಜಯ ಹಾಗೂ 4 ಡ್ರಾ ಸಾಧಿಸಿ 19 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಗುಂಪಿನಲ್ಲಿ ಅಂತಿಮ ಸ್ಥಾನದಲ್ಲಿರುವ ಬಿಹಾರದೊಂದಿಗೆ ಸೆಣಸುತ್ತಿರುವ ಕೇರಳ, 21 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಪಾಲಿಗೆ ಹರಿಯಾಣ ಎದುರಿನ ಪಂದ್ಯ ಮಹತ್ವದ್ದಾಗಿದೆ. ಇಲ್ಲಿ ಗೆದ್ದರೂ, ಕೇರಳ–ಬಿಹಾರ ಪಂದ್ಯದ ಫಲಿತಾಂಶವೂ ಮುಖ್ಯವಾಗಲಿದೆ.
ಇನಿಂಗ್ಸ್ ಆರಂಭಿಸಿರುವ ಕರ್ನಾಟಕ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ. ನಾಯಕ ಮಯಂಕ್ ಅಗರವಾಲ್ (5), ಅನೀಶ್ ಕೆ.ವಿ. (7) ಕ್ರೀಸ್‌ನಲ್ಲಿದ್ದಾರೆ.
ಈ ಋತುವಿನಲ್ಲಿ ರಾಜ್ಯ ತಂಡದ ಪರ ಪದಾರ್ಪಣೆ ಮಾಡಿರುವ ಬ್ಯಾಟರ್ ಸ್ಮರಣ್ ರವಿಚಂದ್ರನ್, ವಿಕೆಟ್‌ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್, ಎಡಗೈ ವೇಗಿ ಅಭಿಷೇಕ್ ಶೆಟ್ಟಿ, ಬೌಲಿಂಗ್ ಆಲ್‌ರೌಂಡರ್ ಯಶೋವರ್ಧನ್ ಪರಂತಾಪ್ ಉತ್ತಮ ಆಟವಾಡಿದ್ದಾರೆ.
ಅನುಭವಿಗಳಾದ ಅಗರವಾಲ್, ಮಧ್ಯಮವೇಗಿ ವಿ.ಕೌಶಿಕ್, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರೂ ಉತ್ತಮ ಲಯದಲ್ಲಿದ್ದಾರೆ. ಇವರೊಂದಿಗೆ ಈಗ ರಾಹುಲ್ ಕೂಡ ಸೇರಿಕೊಂಡಿರುವುದು ಮತ್ತಷ್ಟು ಬಲ ಹೆಚ್ಚಿಸಿದೆ. ಗಾಯದಿಂದ ಚೇತರಿಸಿ ಕೊಂಡಿರುವ ವೇಗಿ ವಿದ್ವತ್ ಕಾವೇರಪ್ಪ ಕೂಡ ತಂಡ ಹನ್ನೊಂದರ ಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.