ADVERTISEMENT

ಕರ್ನಾಟಕದ ‘ವೇಗ’ಕ್ಕೆ ಮೂಗುದಾರ ಹಾಕಿದ ಮಜುಂದಾರ್

ರಣಜಿ ಟ್ರೋಫಿ ಕ್ರಿಕೆಟ್‌ ಸೆಮಿಫೈನಲ್‌ ಪಂದ್ಯ: ಬೌಲಿಂಗ್‌ನಲ್ಲಿ ಮಿಂಚಿದ ಅಭಿಮನ್ಯು ಮಿಥುನ್‌

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 19:45 IST
Last Updated 29 ಫೆಬ್ರುವರಿ 2020, 19:45 IST
ವಿಕೆಟ್ ಗಳಿಸಿದ ಅಭಿಮನ್ಯು ಮಿಥುನ್ ಸಂಭ್ರಮ  –ಪಿಟಿಐ ಚಿತ್ರ
ವಿಕೆಟ್ ಗಳಿಸಿದ ಅಭಿಮನ್ಯು ಮಿಥುನ್ ಸಂಭ್ರಮ  –ಪಿಟಿಐ ಚಿತ್ರ   
""

ಕೋಲ್ಕತ್ತ: ಈಡನ್‌ ಗಾರ್ಡನ್‌ನಲ್ಲಿ ಶನಿವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನ ಮೊದಲ ದಿನವೇ ಹಿಡಿತ ಸಾಧಿಸುವ ಅವಕಾಶ ಕರ್ನಾಟಕಕ್ಕೆ ಇತ್ತು. ಆದರೆ, ಕರುಣ್ ಬಳಗದ ಓಟಕ್ಕೆ ಬಂಗಾಳದ ಬ್ಯಾಟ್ಸ್‌ಮನ್ ಅನುಸ್ಟುಪ್ ಮಜುಂದಾರ್ ‘ಮೂಗುದಾರ’ ಹಾಕಿದರು.

ಹಸಿರು ಗರಿಕೆಗಳಿದ್ದ ಪಿಚ್‌ನಲ್ಲಿ ಕರ್ನಾಟಕದ ಮಧ್ಯಮವೇಗಿಗಳ ದಾಳಿಗೆ ಬಂಗಾಳ ತಂಡವು ಊಟದ ವಿರಾಮದ ವೇಳೆಗೆ 66 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಅನುಸ್ಟುಪ್ ಮಜುಂದಾರ್ (ಬ್ಯಾಟಿಂಗ್ 120; 173ಎಸೆತ, 18ಬೌಂಡರಿ, 1ಸಿಕ್ಸರ್) ಇನಿಂಗ್ಸ್‌ ದಿಕ್ಕನ್ನೇ ಬದಲಿಸಿಬಿಟ್ಟರು. ಅವರ ದಿಟ್ಟ ಹೋರಾಟದ ಫಲವಾಗಿ ಆತಿಥೇಯ ತಂಡವು ದಿನದಾಟದ ಅಂತ್ಯಕ್ಕೆ 82 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 275 ರನ್ ಗಳಿಸಿದೆ.

ಕ್ವಾರ್ಟರ್‌ಫೈನಲ್‌ನಲ್ಲಿಯೂ ಶತಕ ಬಾರಿಸಿ ಬಂಗಾಳ ತಂಡಕ್ಕೆ ಆಪದ್ಬಾಂಧವನಾಗಿದ್ದ ಮಜುಂದಾರ್ ಇಲ್ಲಿಯೂ ತಮ್ಮ ಸಾಮರ್ಥ್ಯ ಮೆರೆದರು. ಅವರು ಕ್ರೀಸ್‌ಗೆ ಬಂದಾಗ ನಾಯಕ ಅಭಿಮನ್ಯು ಈಶ್ವರನ್ ಮತ್ತು ಅನುಭವಿ ಮನೋಜ್ ತಿವಾರಿ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ತಿವಾರಿ ಔಟಾದ ನಂತರ ಬಂದ ಶ್ರೀವತ್ಸ ಗೋಸ್ವಾಮಿ ಕೂಡ ಸೊನ್ನೆ ಸುತ್ತಿದರು. ಈ ವೇಳೆ ಮಜುಂದಾರ್ ಶಾಬಾಜ್ ಅಹಮದ್ ಜೊತೆಗೆ ಏಳನೇ ವಿಕೆಟ್‌ಗೆ 72 ರನ್‌ಗಳನ್ನು ಸೇರಿಸಿದ್ದ ತಂಡದ ಬಲವರ್ಧನೆಗೆ ಕಾರಣವಾಯಿತು.

ADVERTISEMENT

ಈ ಜೊತೆಯಾಟವನ್ನು ಮುರಿಯಲು ಕರ್ನಾಟಕದ ಮೂವರು ಮಧ್ಯಮವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಅಪಾರ ಪರಿಶ್ರಮಪಟ್ಟರು. ಎಡಗೈ ಸ್ಪಿನ್ನರ್ ಜೆ.ಸುಚಿತ್ ಮತ್ತು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಇಬ್ಬರಿಗೂ ವಿಶ್ರಾಂತಿ ಕೊಟ್ಟಿದ್ದು ದುಬಾರಿಯಾಯಿತು.

ಕಡೆಗೂ 51ನೇ ಓವರ್‌ನಲ್ಲಿ ‘ಪೀಣ್ಯ ಎಕ್ಸ್‌ಪ್ರೆಸ್‌’ ಮಿಥುನ್, ಶಾಬಾಜ್ (35; 50ಎ, 7ಬೌಂ) ಅವರನ್ನು ಕ್ಲೀನ್‌ಬೌಲ್ಡ್‌ ಮಾಡುವಲ್ಲಿ ಯಶಸ್ವಿಯಾದರು. ಮಜುಂದಾರ್ ಜೊತೆಗೂಡಿದ ಆಕಾಶ್ ದೀಪ್ (44; 72ಎ, 3ಬೌಂ, 3ಸಿ) ಬೌಲರ್‌ಗಳನ್ನು ಬಹಳಷ್ಟು ಕಾಡಿದರು. ಇವರಿಬ್ಬರ ಶತಕದ ಜೊತೆಯಾಟದಲ್ಲಿ (107 ರನ್) ತಂಡವು 200 ರನ್‌ಗಳ ಗಡಿದಾಟಿತು. 62ನೇ ಓವರ್‌ನಲ್ಲಿ ಅಕಾಶ್‌ಗೆ ಲಭಿಸಿದ ಜೀವದಾನವೂ ಆತಿಥೇಯರಿಗೆ ವರದಾನವಾಯಿತು. 73ನೇ ಓವರ್‌ನಲ್ಲಿ ಗೌತಮ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಆಕಾಶದೀಪ್ ಬಿದ್ದಾಗ ಜೊತೆಯಾಟ ಮುರಿಯಿತು.

ಇನ್ನೊಂದು ಬದಿಯಲ್ಲಿ ದಿಟ್ಟ ಹೋರಾಟ ಮುಂದುವರಿಸಿದ 35 ವರ್ಷದ ಮಜುಂದಾರ್ 78ನೇ ಓವರ್‌ನಲ್ಲಿ ಶತಕ ಪೂರೈಸಿದರು. ದಿನದಾಟದ ಕೊನೆಯ ಹಂತದಲ್ಲಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಮುಖೇಶ್ ಕುಮಾರ್ ಔಟಾದರು. ಬಂಗಾಳ ಖಾತೆಯಲ್ಲಿ ಇನ್ನೊಂದು ವಿಕೆಟ್ ಉಳಿದಿದೆ.

ಸಮಯ ಕಳೆದಂತೆ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುತ್ತಿದೆ. ಇದರ ಲಾಭವನ್ನು ಕರ್ನಾಟಕ ತಂಡವು ಎರಡನೇ ದಿನ ಯಾವ ರೀತಿ ಪಡೆಯಲಿದೆ ಎಂಬ ಕುತೂಹಲ ಗರಿಗೆದರಿದೆ.

ಬಂಗಾಳಕ್ಕಾಗಿ ಆಡಲು ರೈಲ್ವೆ ನೌಕರಿ ಬಿಟ್ಟ ಮಜುಂದಾರ್
ಕೋಲ್ಕತ್ತ:
ತವರಿನ ರಾಜ್ಯ ಬಂಗಾಳದ ತಂಡಕ್ಕಾಗಿ ಆಡಲು ರೈಲ್ವೆ ಇಲಾಖೆಯ ನೌಕರಿಯನ್ನು ಬಿಟ್ಟು ಬಂದವರು ಅನುಸ್ಟುಪ್ ಮಜುಂದಾರ್.

ಅವರು ಈ ಬಾರಿ ಕ್ವಾರ್ಟರ್‌ಫೈನಲ್‌ನಲ್ಲಿ ಶತಕ ಬಾರಿಸಿ ಬಂಗಾಳ ತಂಡವು ನಾಲ್ಕರ ಘಟ್ಟಕ್ಕೆ ಬರಲು ಕಾರಣವಾದರು. ಇದೀಗ ಕರ್ನಾಟಕದ ಎದುರು ಸೆಮಿಯ ಮೊದಲ ಇನಿಂಗ್ಸ್‌ನಲ್ಲಿ ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇಲ್ಲಿಯೂ ಶತಕ ಬಾರಿಸಿದರು.

‘ಜೀವನದಲ್ಲಿ ಏನೇನು ಸಿಗುತ್ತೆ ಎನ್ನುವುದು ಗೊತ್ತಾಗುವುದಿಲ್ಲ. ನಾನು ಕ್ರಿಕೆಟ್‌ಗಾಗಿ ಉದ್ಯೋಗ ತ್ಯಜಿಸಿದೆ. ಆದರೆ, ಕ್ರಿಕೆಟ್‌ ಬಿಡುವ ಕುರಿತು ಯಾವಾಗಳು ಯೋಚಿಸಲೇ ಇಲ್ಲ. ಅನಿರೀಕ್ಷಿತಗಳ ಆಗರ ಕ್ರಿಕೆಟ್. ಒಂದೇ ಒಂದು ಎಸೆತದಲ್ಲಿ ನೀವು ಔಟಾಗಿಬಿಡಬಹುದು. ಆದರೆ, ಆ ಎಸೆತವನ್ನು ತಪ್ಪಿಸಿಕೊಂಡು ದೀರ್ಘ ಇನಿಂಗ್ಸ್‌ ಆಡಲು ಬೇಕಾದ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಬಹಳ ಕಠಿಣ ಶ್ರಮಪಟ್ಟಿದ್ದೇನೆ’ ಎಂದು ವಿವರಿಸಿದರು.

‘ನಾನು ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಪಂದ್ಯ ನೋಡುವಾಗ ಪ್ರತಿಯೊಬ್ಬ ಬೌಲರ್ ಅನ್ನು ಎದುರಿಸುವ ಬಗ್ಗೆ ಯೋಜನೆ ಹೆಣೆಯುತ್ತಿದ್ದೆ. ಆದರೆ, ಇವತ್ತಿನ ಯಶಸ್ಸಿಗೆ ಶಾಬಾಜ್ ಅಹಮದ್ ನೀಡಿದ ಬೆಂಬಲವೇ ಕಾರಣ. ಅವರೊಂದಿಗಿನ ಜೊತೆಯಾಟವೇ ಪ್ರಮುಖವಾದದ್ದು’ ಎಂದು ಹೇಳಿದರು.

ಶೆಲ್ಡನ್ ಜಾಕ್ಸನ್‌ ಹೋರಾಟ: ಸೌರಾಷ್ಟ್ರ ತಂಡ ಚೇತರಿಕೆ

ರಾಜ್‌ಕೋಟ್: ಅನುಭವಿ ಆಟಗಾರ ಶೆಲ್ಡನ್ ಜಾಕ್ಸನ್ (ಬ್ಯಾಟಿಂಗ್ 69; 132ಎಸೆತ, 9ಬೌಂಡರಿ, 2ಸಿಕ್ಸರ್) ಶನಿವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ಕುಸಿತಕ್ಕೆ ತಡೆಯೊಡ್ಡಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್‌ (ಅರ್ಜನ್ ನಾಗವಾಸ್ವಲ್ಲಾ 40ಕ್ಕೆ3) ಅವರ ದಾಳಿಗೆ ಸೌರಾಷ್ಟ್ರ ತಂಡವು ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಶೆಲ್ಡನ್ ಏಕಾಂಗಿ ಹೋರಾಟದ ಫಲವಾಗಿ ಸೌರಾಷ್ಟ್ರ ತಂಡವು ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 5ಕ್ಕೆ 217 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಸೌರಾಷ್ಟ್ರ: 90 ಓವರ್‌ಗಳಲ್ಲಿ 5ಕ್ಕೆ217 (ಹರ್ವಿಕ್ ದೇಸಾಯಿ 35, ಕಿಶನ್ ಪರಮಾರ್ 37, ಅವಿ ಬಾರೋಟ್ 27, ವಿಶ್ವರಾಜಸಿಂಹ ಜಡೇಜ 26, ಶೆಲ್ಡನ್ ಜಾಕ್ಸನ್ ಬ್ಯಾಟಿಂಗ್ 69, ಚಿರಾಗ್ ಜಾನಿ ಬ್ಯಾಟಿಂಗ್ 16, ಅರ್ಜನ್ ನಾಗವಾಸ್ವಲ್ಲಾ 40ಕ್ಕೆ3, ಅಕ್ಷರ್ ಪಟೇಲ್ 47ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.