ADVERTISEMENT

ರಣಜಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಬಲಿಷ್ಠ ತಂಡಗಳು; ಕರ್ನಾಟಕದ ಎದುರಾಳಿ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2023, 10:54 IST
Last Updated 4 ಫೆಬ್ರುವರಿ 2023, 10:54 IST
ಸೆಮಿಫೈನಲ್ ತಲುಪಿದ ಕರ್ನಾಟಕ ತಂಡ
ಸೆಮಿಫೈನಲ್ ತಲುಪಿದ ಕರ್ನಾಟಕ ತಂಡ   

ಬೆಂಗಳೂರು: ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯಗಳು ಇಂದು ಮುಕ್ತಾಯವಾಗಿವೆ. ಕರ್ನಾಟಕ, ಮಧ್ಯಪ್ರದೇಶ, ಬಂಗಾಳ ಹಾಗೂ ಸೌರಾಷ್ಟ್ರ ತಂಡಗಳು ಸೆಮಿಫೈನಲ್‌ ಸುತ್ತಿಗೆ ಲಗ್ಗೆ ಇಟ್ಟಿವೆ.

ಜನವರಿ 31ರಿಂದ ಫೆಬ್ರುವರಿ 4ರ ವರೆಗೆ ಆಯೋಜನೆಗೊಂಡಿದ್ದ ಕ್ವಾರ್ಟರ್‌ಫೈನಲ್‌ ಸುತ್ತಿನ ಮೂರು ಪಂದ್ಯಗಳು ಕೇವಲ ನಾಲ್ಕೇ ದಿನಗಳಲ್ಲಿ ಮುಕ್ತಾಯವಾಗಿದ್ದವು.

ಜಾರ್ಖಂಡ್‌ ವಿರುದ್ಧ ಕೋಲ್ಕತ್ತದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಂಗಾಳ ತಂಡ 9 ವಿಕೆಟ್‌ ಅಂತರದ ಗೆಲುವು ಕಂಡಿತ್ತು. ಆಂಧ್ರ ಪ್ರದೇಶ ವಿರುದ್ಧ ಇಂದೋರ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ಮಧ್ಯ ಪ್ರದೇಶ 5 ವಿಕೆಟ್‌ಗಳಿಂದ ಜಯಿಸಿತ್ತು. ನಾಲ್ಕನೇ ಪಂದ್ಯದಲ್ಲಿ ಮಯಂಕ್‌ ಅಗರವಾಲ್‌ ನೇತೃತ್ವದ ಕರ್ನಾಟಕ ಪಡೆ ಉತ್ತರಾಖಂಡ ವಿರುದ್ಧ 281ರನ್ ಅಂತರದ ಬೃಹತ್‌ ವಿಜಯ ಸಾಧಿಸಿತ್ತು. ಈ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು.

ADVERTISEMENT

ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಕ್ವಾರ್ಟರ್‌ಫೈನಲ್‌ ಪಂದ್ಯ ಇಂದು ಮುಕ್ತಾಯವಾಗಿದೆ. ಸೌರಾಷ್ಟ್ರ ಹಾಗೂ ಪಂಜಾಬ್‌ ತಂಡಗಳು ಕೊನೆವರೆಗೂ ಹೋರಾಟ ನಡೆಸಿದವು. ಅಂತಿಮವಾಗಿ ಸೌರಾಷ್ಟ್ರ 71 ರನ್‌ ಅಂತರದ ಜಯದ ನಗೆ ಬೀರಿದೆ. ಇದರೊಂದಿಗೆ ಸೆಮಿಫೈನಲ್‌ಗೆ ಟಿಕೆಟ್‌ ಗಿಟ್ಟಿಸಿದೆ.

ಯಾರಿಗೆ ಯಾರು ಎದುರಾಳಿ?
ಮೊದಲ ಹಾಗೂ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಬಂಗಾಳ ಮತ್ತು ಮಧ್ಯ ಪ್ರದೇಶ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಕಾದಾಡಲಿವೆ. ಈ ಪಂದ್ಯವು ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಉಳಿದಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಸೆಮಿಫೈನಲ್‌ ಹಣಾಹಣಿಯಲ್ಲಿ ತವರು ತಂಡ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲೊಡ್ಡಲಿದೆ. ಈ ಎರಡೂ ಪಂದ್ಯಗಳು ಫೆಬ್ರುವರಿ 8 ರಂದು ಆರಂಭವಾಗಲಿವೆ.

ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೆಬ್ರುವರಿ 16 ರಂದು ಆರಂಭವಾಗುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಗುಂಪು ಹಂತದಲ್ಲಿ ತಂಡಗಳ ಪ್ರದರ್ಶನ

ತಂಡ ಆಡಿದ ಪಂದ್ಯಗಳು ಗೆಲುವು ಸೋಲು ಡ್ರಾ ಗಳಿಸಿದ ಅಂಕಗಳು
ಕರ್ನಾಟಕ 7 4 0 3 35
ಮಧ್ಯ ಪ್ರದೇಶ 7 5 1 1 33
ಬಂಗಾಳ 7 4 1 2 32
ಸೌರಾಷ್ಟ್ರ 7 3 2 2 26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.