ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಉಪನಾಯಕರಾಗಿರುವ ಶುಭಮನ್ ಗಿಲ್ ಅವರಿಗೆ ಕರ್ನಾಟಕದ ಬೌಲರ್‌ಗಳು ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಮತ್ತು ಗಿಲ್ ಪ್ರತಿನಿಧಿಸಲಿರುವ ಪಂಜಾಬ್ ಮುಖಾಮುಖಿಯಾಗಲಿವೆ. ಈಚೆಗೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿ ಟೀಕೆಗಳಿಗೆ ಗುರಿಯಾಗಿರುವ ಗಿಲ್ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಛಲದಲ್ಲಿದ್ದಾರೆ. ಭಾರತ ತಂಡದ ಆಟಗಾರರು ಬಿಡುವು ಲಭಿಸಿದಾಗ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವುದನ್ನು ಕಡ್ಡಾಯ ಮಾಡಿದೆ. ಆದ್ದರಿಂದ ಗಿಲ್, ರಣಜಿ ಟೂರ್ನಿಯಲ್ಲಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.
ಇದೆಲ್ಲದರೊದಿಗೆ ಮಯಂಕ್ ಪಡೆಗೆ ನಾಕೌಟ್ ಪ್ರವೇಶಿಸಲು ಇರುವ ಸಣ್ಣ ಅವಕಾಶವನ್ನು ಬಳಸಿಕೊಳ್ಳುವ ಕಠಿಣ ಸವಾಲು ಕೂಡ ಇದೆ. ಮೊದಲ ಹಂತದಲ್ಲಿ ಕರ್ನಾಟಕ ತಂಡವು 5 ಪಂದ್ಯಗಳಿಂದ 12 ಅಂಕ ಗಳಿಸಿ, ನಾಲ್ಕನೇ ಸ್ಥಾನದಲ್ಲಿದೆ. ಪಂಜಾಬ್ ತಂಡವು 11 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಕ್ವಾರ್ಟರ್‌ಫೈನಲ್ ಪ್ರವೇಶಿಸಬೇಕಾದರೆ ಉತ್ತಮ ರನ್ ರೇಟ್‌ನೊಂದಿಗೆ ಎರಡೂ ಪಂದ್ಯಗಳನ್ನು ಗೆದ್ದು ಪೂರ್ಣ ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕು. ವಿಜಯ್ ಹಜಾರೆ ಟೂರ್ನಿಯ ತಂಡಸ್ಫೂರ್ತಿಯೊಂದಿಗೆ ಆಡಿ ಪ್ರಶಸ್ತಿ ಗೆದ್ದಿದೆ. ಅದೇ ರೀತಿ ಇಲ್ಲಿಯೂ ಆಡಿದರೆ ಜಯ ಸಾಧ್ಯವಾಗಬಹುದು.
ಉಳಿದಿರುವ ಎರಡೂ ಪಂದ್ಯಗಳೂ ಬೆಂಗಳೂರಿನಲ್ಲಿಯೇ ನಡೆಯಲಿರುವುದು ಕರ್ನಾಟಕಕ್ಕೆ ಒಳ್ಳೆಯ ಸಂಗತಿ. ಪಂಜಾಬ್ ತಂಡದಲ್ಲಿ ಅಬ್ಬರದ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರಿಲ್ಲ. ಅವರು ಭಾರತ ಟಿ20 ತಂಡದಲ್ಲಿ ಆಡಲು ತೆರಳಿದ್ದಾರೆ. ಇದು ಪಂಜಾಬ್ ಬಲವನ್ನು ಸ್ವಲ್ಪ ಕುಂದಿಸಿರುವುದು ಸುಳ್ಳಲ್ಲ. ಏಕದಿನ ಮಾದರಿಯ ದೇಶಿ ಟೂರ್ನಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿರುವ ಮಯಂಕ್, ಶತಕಗಳನ್ನು ಸಿಡಿಸಿ ಉತ್ತಮ ಲಯದಲ್ಲಿರುವ ದೇವದತ್ತ ಪಡಿಕ್ಕಲ್, ಕೆ.ಎಲ್. ಶ್ರೀಜಿತ್, ಸ್ಮರಣ್ ರವಿಚಂದ್ರ, ಮಧ್ಯಮಕ್ರಮಾಂಕದ ಶಕ್ತಿಯಾಗಿರುವ ಅಭಿನವ್ ಮನೋಹರ್ ಅವರು ತಮ್ಮ ಲಯವನ್ನು ಇಲ್ಲಿಯೂ ಮುಂದುವರಿಸಿದರೆ ತಂಡಕ್ಕೆ ಬಲ ಹೆಚ್ಚಲಿದೆ.
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ನಲ್ಲಿ ಆಡಿ ಗಮನ ಸೆಳೆದಿದ್ದ ವೇಗಿ ಪ್ರಸಿದ್ಧಕೃಷ್ಣ, ರಣಜಿ ಟೂರ್ನಿಯ ಮೊದಲಾರ್ಧದಲ್ಲಿ ಉತ್ತಮವಾಗಿ ಆಡಿದ್ದ ವಾಸುಕಿ ಕೌಶಿಕ್ ಅವರ ಮೇಲೆ ವಿಶ್ವಾಸವಿಡಬಹುದು. ವಿದ್ಯಾಧರ್ ಪಾಟೀಲ, ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಅವರಲ್ಲಿ ಒಬ್ಬರಿಗೆ ಸ್ಥಾನ ಲಭಿಸಬಹುದು. ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್ ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಅಟಗಾರರು.
ಈ ಪಂದ್ಯವು ಪಂಜಾಬ್ ತಂಡಕ್ಕೂ ಮುಖ್ಯವಾಗಿದೆ. ಆತಿಥೇಯರಿಗೆ ಕಠಿಣ ಪೈಪೋಟಿಯೊಡ್ಡಲೂ ಸಿದ್ಧವಾಗಿದೆ. ಗಿಲ್ ಅವರೊಂದಿಗೆ ಅನ್ಮೋಲ್‌ಪ್ರೀತ್ ಸಿಂಗ್, ಜಸ್ಕರಣ್‌ವೀರ್ ಪಾಲ್, ಸಲಿಲ್ ಅರೋರಾ, ಸನ್ವೀರ್ ಸಿಂಗ್ ಅವರ ಬ್ಯಾಟಿಂಗ್ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ. ಬೌಲಿಂಗ್ ವಿಭಾಗವು ಬಲ್ತೇಜ್ ಸಿಂಗ್ ಹಾಗೂ ಗುರ್ನೂರ್ ಬ್ರಾರ್ ಅವರ ಮೇಲೆಯೇ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಚಿನ್ನಸ್ವಾಮಿ ಅಂಗಳದ ಸ್ಪರ್ಧಾತ್ಮಕ ಪಿಚ್‌ನಲ್ಲಿ ಈ ಬೌಲರ್‌ಗಳು ಯಶಸ್ವಿಯಾಗುವರೇ ಎಂಬ ಕುತೂಹಲ ಈಗ ಮನೆ ಮಾಡಿದೆ.
ಪಂದ್ಯ ಆರಂಭ: ಬೆಳಿಗ್ಗೆ 9.30
ರಣಜಿ ಕಣದಲ್ಲಿ ರೋಹಿತ್, ರಿಷಭ್
ರಣಜಿ ಟೂರ್ನಿಯ ಎರಡನೇ ಹಂತದ ಪಂದ್ಯಗಳಲ್ಲಿ ಖ್ಯಾತನಾಮ ಅಟಗಾರರು ಕಣಕ್ಕಿಳಿಯುತ್ತಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದಲ್ಲಿ ಆಡುತ್ತಿದ್ದಾರೆ. ಇನ್ನೊಂದೆಡೆ ರಿಷಭ್ ಪಂತ್ ದೆಹಲಿ ತಂಡದಲ್ಲಿ ಹಾಗೂ ಶುಭಮನ್ ಗಿಲ್ ಪಂಜಾಬ್ ತಂಡದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಮುಂಬೈ ತಂಡದಲ್ಲಿ ರೋಹಿತ್ ಅವರೊಂದಿಗೆ ಭಾರತ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್ ಕೂಡ ರಣಜಿ ಪಂದ್ಯ ಆಡುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರು ಕುತ್ತಿಗೆ ನೋವಿನ ಕಾರಣ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಜ.30ರಿಂದ ಆರಂಭವಾಗುವ ರಣಜಿ ಪಂದ್ಯದಲ್ಲಿ ಆಡುವುದಾಗಿ ಹೇಳಿದ್ದಾರೆ. ಕರ್ನಾಟಕದ ಕೆ.ಎಲ್. ರಾಹುಲ್ ಕೂಡ ಗಾಯದ ಸಮಸ್ಯೆಯಿಂದ ಆಡುತ್ತಿಲ್ಲ. ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಕಣಕ್ಕಿಳಿಯುತ್ತಿದ್ದಾರೆ. ಈಚೆಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ವಿದರ್ಭ ತಂಡದ ಕರುಣ್ ನಾಯರ್ ಅವರು ಇಲ್ಲಿಯೂ ತಮ್ಮ ರನ್ ಬೇಟೆ ಮುಂದುವರಿಸುವ ಛಲದಲ್ಲಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.