ADVERTISEMENT

‘ವಿಶ್ವಕಪ್ ಗೆಲುವಿಗಿಂತಲೂ ಹೆಚ್ಚು ಸಂತಸ ತಂದಿದೆ’: ರವಿಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 20:11 IST
Last Updated 7 ಜನವರಿ 2019, 20:11 IST
 ರವಿಶಾಸ್ತ್ರಿ
ರವಿಶಾಸ್ತ್ರಿ   

ಸಿಡ್ನಿ: ‘ಈ ಗೆಲುವು ನನಗೆ ಬಹಳ ತೃಪ್ತಿ ತಂದಿದೆ. 1983ರ ವಿಶ್ವಕಪ್ ಮತ್ತು 1985ರ ವಿಶ್ವ ಚಾಂಪಿಯನ್‌ಷಿಪ್‌ ಗೆಲು ವಿನಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮಹತ್ವದ ಸಾಧನೆ ಇದಾಗಿದೆ. ಏಕೆಂದರೆ ಟೆಸ್ಟ್ ಮಾದರಿಯು ನಿಜವಾದ ಕ್ರಿಕೆಟ್ ಆಗಿದೆ. ಅಲ್ಲದೆ ಇದು ಅತ್ಯಂತ ಕ್ಲಿಷ್ಟ ಮಾದರಿಯೂ ಆಗಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಸೋಮವಾರ ಮಾತನಾಡಿದ ಅವರು, ‘ಹಳೆಯದು ಇತಿಹಾಸ. ಭವಿಷ್ಯ ನಿಗೂಢ. ಆದರೆ ವರ್ತಮಾನವೇ ಸತ್ಯ. ಭಾರತವು 71 ವರ್ಷಗಳ ನಂತರ ಈ ಸಾಧನೆಯನ್ನು ಮಾಡಿದೆ. ಅದಕ್ಕಾಗಿ ತಂಡದ ನಾಯಕನಿಗೆ ನಾನು ಸಲ್ಯೂಟ್ ಮಾಡುತ್ತೇನೆ. ವಿರಾಟ್ ತಮ್ಮ ಕೆಲಸದಲ್ಲಿ ಶೇ 100ರಷ್ಟು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುತ್ತಾರೆ. ಟೆಸ್ಟ್ ಕ್ರಿಕೆಟ್‌ ಅನ್ನು ಅವರಷ್ಟು ಗಂಭೀರವಾಗಿ ಬೇರೆ ಯಾವ ದೇಶದ ನಾಯಕರೂ ತೆಗೆದು ಕೊಂಡಿದ್ದನ್ನು ನಾನು ನೋಡಿಲ್ಲ’ ಎಂದರು.

ಭಾರತದ ತಪ್ಪೇನು?: ಆಸ್ಟ್ರೇಲಿಯಾ ತಂಡವು ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳದಿದ್ದರೆ ಭಾರತದ ತಪ್ಪೇನು ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಪ್ರಶ್ನಿಸಿದ್ದಾರೆ.

ADVERTISEMENT

‘ಇಬ್ಬರೂ ಆಟಗಾರರಿಗೆ ಸಣ್ಣ ಅವಧಿಯಲ್ಲಿ ಶಿಕ್ಷೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ನೀಡಬಹುದಿತ್ತು. ಆದರೆ, ಒಂದು ವರ್ಷದ ನಿಷೇಧ ಹೇರಿದೆ. ಒಂದು ರೀತಿಯಲ್ಲಿ ಇದು ಒಳ್ಳೆಯದೇ. ಏಕೆಂದರೆ, ಉಳಿದ ಎಲ್ಲರಿಗೂ ಇದು ಪಾಠವಾಗಲಿದೆ’ ಎಂದಿದ್ದಾರೆ.

ನನ್ನ ಮಹಾಸಾಧನೆ: ‘ನನ್ನ ಜೀವನದಲ್ಲಿ ಅತ್ಯಂತ ದೊಡ್ಡ ಸಾಧನೆ ಇದು. 2011ರಲ್ಲಿ ವಿಶ್ವಕಪ್‌ ಗೆದ್ದಾಗಿನಕ್ಕಿಂತಲೂ ಈಗ ಹೆಚ್ಚು ಸಂತಸ ತಂದಿದೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.

‘ಆಸ್ಟ್ರೇಲಿಯಾ ಆಟಗಾರರನ್ನು ಎದುರಿಸುವುದು ಎಷ್ಟು ಕಷ್ಟ ಎಂಬ ಅನುಭವ ನನಗಿದೆ. ಆ ಒಂದು ದೃಷ್ಟಿಕೋನದಿಂದ ಈ ಸಾಧನೆ ಸಂತೃಪ್ತಿ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.