ರವಿಚಂದ್ರನ್ ಅಶ್ವಿನ್
ಪಿಟಿಐ ಚಿತ್ರ
ರವಿಚಂದ್ರನ್ ಅಶ್ವಿನ್ ಕಳೆದ ಹದಿನಾಲ್ಕು ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಗಳದ್ದು ಒಂದು ತೂಕವಾದರೆ, ತಮ್ಮ ನೇರ ನಡೆ, ನುಡಿ, ಶಿಸ್ತು, ಸಮಯಪ್ರಜ್ಞೆ ಮತ್ತು ಬುದ್ಧಿಮತ್ತೆಯ ಮೂಲಕ ಬೀರಿದ ಪ್ರಭಾವದ್ದು ಮತ್ತೊಂದು ತೂಕ. ಆದ್ದರಿಂದಲೇ ಅಶ್ವಿನ್ ಅವರನ್ನು ಕೇವಲ ಆಫ್‌ಸ್ಪಿನ್– ಅಲ್‌ರೌಂಡರ್ ಆಗಿ ನೋಡಲಾಗದು. ಅವರ ವಿದಾಯದ ಕ್ಷಣವನ್ನು ಕೂಡ ಸಹಜ ನಿರ್ಧಾರವೆಂದು ಪರಿಗಣಿಸಲಾಗದು.
ರವಿಚಂದ್ರನ್ ಅಶ್ವಿನ್ ಅವರು ತಮ್ಮ ಬತ್ತಳಿಕೆಯ ಪ್ರಮುಖ ಅಸ್ತ್ರ ಕೇರಂ ಬಾಲ್ ಮೂಲಕ ಘಟಾನುಘಟಿ ಬ್ಯಾಟರ್‌ಗಳಿಗೆ ಆಘಾತ ನೀಡಿದ ಮಾದರಿಯಲ್ಲಿಯೇ ಬಾರ್ಡರ್–ಗಾವಸ್ಕರ್ ಸರಣಿಯ ಮಧ್ಯದಲ್ಲಿಯೇ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಗಾಬಾ ಕ್ರೀಡಾಂಗಣದಲ್ಲಿ ಇನ್ನೂ ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ಮುಗಿದಿರಲಿಲ್ಲ. ಟಿ.ವಿ. ಪರದೆಯ ಮೇಲೆ ಬಂದ ಒಂದು ದೃಶ್ಯ ಸಂಚಲನ ಮೂಡಿಸಿತು. ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ಪಕ್ಕದಲ್ಲಿದ್ದ ಅಶ್ವಿನ್ ಅವರನ್ನು ಆಲಂಗಿಸಿಕೊಂಡು ಹಾರೈಸಿದ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು.
ತಮಿಳುನಾಡಿನ 38 ವರ್ಷದ ಆಲ್‌ರೌಂಡರ್ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರಬಹುದು ಎಂಬ ಅನುಮಾ ನವು ಸ್ವಲ್ಪ ಹೊತ್ತಿನ ನಂತರ ನಿಜವಾ ಯಿತು. ಪಂದ್ಯದ ನಂತರ ಸುದ್ದಿಗೋಷ್ಠಿಗೆ ಬಂದ ನಾಯಕ ರೋಹಿತ್ ಅವರೊಂದಿಗೆ ಅಶ್ವಿನ್ ಕೂಡ ಇದ್ದರು. ತಮ್ಮ ನಿರ್ಧಾರವನ್ನು ಚುಟುಕಾಗಿ ಸುದ್ದಿಗಾರರಿಗೆ ತಿಳಿಸಿದ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಹೊರಟರು. ಕ್ಯಾಮೆರಾಗಳ ಫ್ಲ್ಯಾಷ್ ಬೆಳಕಲ್ಲಿ ಅಶ್ವಿನ್ ಕಣ್ಣಂಚಿನಲ್ಲಿ ಜಿನುಗಿದ್ದ ಪಸೆ ಮಿಂಚಿತು.
ಚೆನ್ನೈನ ರೈಲ್ವೆ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ರವಿಚಂದ್ರನ್ ಮತ್ತು ಚಿತ್ರಾ ದಂಪತಿಯ ಮಗ ಅಶ್ವಿನ್, ಭಾರತದ ಅತಿ ಹೆಚ್ಚು ವಿಕೆಟ್ ಗಳಿಸಿದ ಎರಡನೇ ಬೌಲರ್ ಹಾಗೂ ದೊಡ್ಡ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿದ್ದು ರೋಚಕ ಕತೆ. ಮಧ್ಯಮವರ್ಗದ ಕುಟುಂಬದ ಹುಡುಗ ಅಶ್ವಿನ್ ಬಾಲ್ಯದಲ್ಲಿ ಕೆಲವು ಆರೋಗ್ಯ ತೊಂದರೆಗಳಿಂದ ಬಳಲಿದ್ದರು. ಚೈಲ್ಡ್ ಟ್ಯೂಬರ್‌ಕ್ಯುಲೊಸಿಸ್ ಅವರನ್ನು ಕಾಡಿತ್ತು. ಹೆಚ್ಚು ಊಟ ಮಾಡಲು, ಪ್ರಯಾಣ ಮಾಡಲು ಆಗುತ್ತಿರಲಿಲ್ಲ. ವಾಂತಿ, ಕೆಮ್ಮು, ಸುಸ್ತು ಸತತವಾಗಿ ಕಾಡುತ್ತಿತ್ತು. ತಂದೆ, ತಾಯಿ ಬಹಳಷ್ಟು ನಿಗಾ ವಹಿಸಿ, ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ಅಂತಹ ಸೂಕ್ಷ್ಮ ಆರೋಗ್ಯ ಸ್ಥಿತಿಯಿಂದ ಮೇಲೆದ್ದು ಬಂದು ಕ್ರಿಕೆಟಿಗನಾಗಲು ತಂದೆಯೇ ಪ್ರೇರಣೆಯಾದರು. ಕ್ಲಬ್ ಮಟ್ಟದಲ್ಲಿ ವೇಗದ ಬೌಲರ್ ಆಗಿದ್ದ ರವಿಚಂದ್ರನ್ ಅವರು ಬೈಕ್ ಮೇಲೆ ಮಗನನ್ನು ಕೂರಿಸಿಕೊಂಡು ಚೆಪಾಕ್ ಕ್ರೀಡಾಂಗಣಕ್ಕೆ ಪಂದ್ಯ ನೋಡಲು ಕರೆದುಕೊಂಡು ಹೋಗುತ್ತಿದ್ದರು.
‘1993ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ನಡೆದಿದ್ದ ಪಂದ್ಯಕ್ಕೆ ಅಪ್ಪ ಕರೆದೊಯ್ದಿದ್ದರು. ಟೆರೆಸ್ ಟಿಕೆಟ್ ಸಿಕ್ಕಿತ್ತು. ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಅವರ ಆಟವನ್ನು ಮೊದಲ ಬಾರಿಗೆ ನೋಡಿದ್ದೆ. ಭಾರತ ತಂಡ ಗೆದ್ದಿತ್ತು. ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಮಜಾನೇ ಬೇರೆ. ಅವತ್ತು ಅಪ್ಪ ಕಾಮೆಂಟ್ರಿ ಬಾಕ್ಸ್‌ಗೂ ಕರೆದೊಯ್ದು ಸುನಿಲ್ ಗಾವಸ್ಕರ್ ಅವರಿಂದ ಹಸ್ತಾಕ್ಷರ ಕೊಡಿಸಿದ್ದರು’ ಎಂದು ಅಶ್ವಿನ್ ತಮ್ಮ ಪುಸ್ತಕ ‘ಐ ಹ್ಯಾವ್ ದಿ ಸ್ಟ್ರೀಟ್ಸ್ ಎ ಕುಟ್ಟಿ ಕ್ರಿಕೆಟ್ ಸ್ಟೋರಿ’ಯಲ್ಲಿ ಬರೆದಿದ್ದಾರೆ.
ಅದಾಗಿ 18 ವರ್ಷಗಳ ನಂತರ ಸಚಿನ್, ಧೋನಿಯೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಮಟ್ಟಕ್ಕೆ ಅಶ್ವಿನ್ ಬೆಳೆದರು. 2011ರಲ್ಲಿ ಧೋನಿ ನಾಯಕತ್ವದ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಕಳೆದ 14 ವರ್ಷಗಳಲ್ಲಿ ಅದೆಷ್ಟೋ ಬಾರಿ ಸುನಿಲ್ ಗಾವಸ್ಕರ್ ಅವರು ಅಶ್ವಿನ್ ಹಲವು ಬಾರಿ ಸಂದರ್ಶನ ಮಾಡಿದ್ದಾರೆ.
ಹರ್ಭಜನ್‌ರನ್ನು ಮೀರಿ ಬೆಳೆದ ಆ್ಯಷ್: ಹರ್ಭಜನ್ ಸಿಂಗ್ ನಂತರ ಅವರ ಸ್ಥಾನವನ್ನು ತುಂಬುವ ಬೌಲರ್ ಹುಡು ಕಾಟದಲ್ಲಿ ಆಯ್ಕೆದಾರರು ಇದ್ದರು. ಆಗ ಕಣ್ಣಿಗೆ ಬಿದ್ದಿದ್ದು ಅಶ್ವಿನ್. ತಮಿಳುನಾಡು ತಂಡ ವನ್ನು ಪ್ರತಿನಿಧಿಸುತ್ತಿದ್ದ ಅಶ್ವಿನ್ ದೇಶಿ ಕ್ರಿಕೆಟ್‌ನಲ್ಲಿ ಹೆಜ್ಜೆಗುರುತು ಮೂಡಿಸುತ್ತಿದ್ದರು. 2010–11ರಲ್ಲಿ ಭಾರತ ತಂಡಕ್ಕೆ ಸೇರುವ ಅವಕಾಶ ಒದಗಿಬಂದಿತು. ಧೋನಿ ನಾಯಕತ್ವದ ತಂಡದಲ್ಲಿ ಸಚಿನ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಜಹೀರ್ ಖಾನ್, ರಾಹುಲ್ ದ್ರಾವಿಡ್ ಅವರಂತಹ ಘಟಾನುಘಟಿಗಳು ಇದ್ದರು.
ಈ ಖ್ಯಾತನಾಮರ ಸಾಮಿಪ್ಯದಿಂದ ಬಹಳಷ್ಟು ವಿಷಯ ಕಲಿತರು. 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡ ದಲ್ಲಿ ಅಶ್ವಿನ್ ಇದ್ದರು. ನಾಯಕ ಧೋನಿ ಮತ್ತು ಕೋಚ್ ಗ್ಯಾರಿ ಕರ್ಸ್ಟನ್ ಅವರ ಮನಸ್ಸು ಗೆದ್ದ ಅಶ್ವಿನ್ ಅದೇ ವರ್ಷ ವೆಸ್ಟ್ ಇಂಡೀಸ್ ಎದುರು ಪದಾರ್ಪಣೆ ಮಾಡಿದರು. ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಗಳಿಸಿ, ಪಂದ್ಯಶ್ರೇಷ್ಠ ಗೌರವ ಗಿಟ್ಟಿಸಿದರು. 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿಯೂ ಇದ್ದರು.
ಕೇರಂ ಬಾಲ್ ಪ್ರಯೋಗದಲ್ಲಿ ಪರಿಣತರಾದ ಅಶ್ವಿನ್ ಚುರುಕಾದ ಬುದ್ಧಿಮತ್ತೆಯಿಂದಲೂ ಗಮನ ಸೆಳೆದರು. ಅವರು ಬೌಲಿಂಗ್ ಅನ್ನು ಕೇವಲ ಆಟ ಅಥವಾ ಕಲೆಯನ್ನಾಗಿ ನೋಡಲಿಲ್ಲ. ಅದನ್ನು ಭೌತವಿಜ್ಞಾನವೆಂದು ಪರಿಗಣಿಸಿದರು. ಬೌಲಿಂಗ್ ಬಗ್ಗೆ ಮಾತನಾಡುವಾಗಲೆಲ್ಲ ಭೌತವಿಜ್ಞಾನದ ಪದಗಳ ಹೋಲಿಕೆಯೊಂದಿಗೆ ಮಾತನಾಡುತ್ತಿದ್ದರು. ಆ ಮೂಲಕ ಹೊಸ ಆಯಾಮ, ತಂತ್ರಗಳನ್ನು ಶೋಧಿಸಿದ್ದು ಅವರ ಹೆಚ್ಚುಗಾರಿಕೆ. ಇದರಿಂದಾಗಿ ಅವರು ಹರಭಜನ್ ಸಿಂಗ್ ಅವರ ದಾಖಲೆಗಳನ್ನೂ ಮೀರಿ ಮುನ್ನುಗ್ಗಿದ್ದರು. ಆಫ್‌ಸ್ಪಿನ್ ಬೌಲಿಂಗ್ ಕಲೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದರು. ಅವರನ್ನೂ ಮೀರಿಸುವ ಆಫ್‌ಸ್ಪಿನ್ನರ್ ಬರುವರೇ ಎಂಬ ಪ್ರಶ್ನೆ ಉಳಿದಿದೆ.
ವಿವಾದಗಳಿಗೆ ಅಳುಕದ ವ್ಯಕ್ತಿತ್ವ
ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ ನೇರ, ನಿಷ್ಠುರ ನುಡಿಗಳನ್ನು ನುಡಿದು ವಿವಾದ ಮೈಮೇಲೆಳೆದುಕೊಂಡ ಘಟನೆಗಳು ಬಹಳಷ್ಟಿವೆ. ಆದರೆ ಅವರು ಯಾವುದೇ ಕಾರಣಕ್ಕೂ ತಮ್ಮ ಹೇಳಿಕೆಗಳಿಂದ ಹಿಂದೆ ಸರಿಯದೇ ವಿವಾದ ಅಥವಾ ಚರ್ಚೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಛಾತಿ ತೋರಿಸಿದವರು.
ಅದರಲ್ಲಿ ಪ್ರಮುಖವಾಗಿ ಮಂಕಡಿಂಗ್ ಕೂಡ ಒಂದು. ನಾನ್‌ಸ್ಟ್ರೈಕರ್ ಬ್ಯಾಟರ್ ಅನ್ನು ಬೌಲರ್ ರನ್ ಔಟ್ ಮಾಡುವುದನ್ನು ‘ನ್ಯಾಯ ಸಮ್ಮತ ವಲ್ಲದ ಆಟ’ದ ನಿಯಮದಡಿಯಲ್ಲಿ ನೋಡಲಾಗುತ್ತಿತ್ತು. ದಶಕದ ಹಿಂದೆ ‘ಮಂಕಡಿಂಗ್’ ಎನ್ನಲಾಗುತ್ತಿತ್ತು. ಆದರೆ ಅನ್ನು ಈಚೆಗೆ ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬದಲಾಯಿಸಿದೆ. ಅದನ್ನು ರನೌಟ್ ಎಂದು ‘ನಿಯಮಬದ್ಧ’ಗೊಳಿಸಿತು.
2019ರಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಆಗ ಪಂಜಾಬ್ ಕಿಂಗ್ಸ್‌ನಲ್ಲಿದ್ದ ಅಶ್ವಿನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದ್ದರು. ಆಗ ಭುಗಿಲೆದ್ದ ಚರ್ಚೆ ಹಲವು ಆಯಾಮಗಳಲ್ಲಿ ನಡೆದಿತ್ತು. ಇಂಗ್ಲೆಂಡ್‌ನ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಅಶ್ವಿನ್ ಮೇಲೆ ಟೀಕೆಗಳ ಮಳೆಯನ್ನೇ ಸುರಿಸಿದ್ದರು. ಆದರೆ ಅಶ್ವಿನ್ ಗಟ್ಟಿಯಾಗಿ ನಿಂತರು. ಟೀಕೆಗಳನ್ನು ಎದುರಿಸಿದರು. ಕಡೆಗೂ ಎಂಸಿಸಿ ಮಣಿಯಿತು.
ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಆರ್. ಅಶ್ವಿನ್
ಅಶ್ವಿನ್ ನಿವೃತ್ತಿ ಕುರಿತು ಯಾರು ಏನಂದರು?
ನಾನು ನಿಮ್ಮೊಂದಿಗೆ 14 ವರ್ಷಗಳ ಕಾಲ ಆಡಿದ್ದೇನೆ. ಇಂದು ನೀವು ನಿವೃತ್ತಿ ಘೋಷಿಸಿದಾಗ ತುಸು ಭಾವುಕನಾದೆ. ನಿಮ್ಮೊಂದಿಗೆ ಆಟದಲ್ಲಿ ಕಳೆದ ಕ್ಷಣಗಳು ಸ್ಮೃತಿಪಟಲದ ಮುಂದೆ ಹಾದುಹೋದವು.–ವಿರಾಟ್ ಕೊಹ್ಲಿ, ಭಾರತ ತಂಡದ ಆಟಗಾರ
ಪ್ರಯೋಗ ಮತ್ತು ವಿಕಸನಕ್ಕೆ ಎಂದಿಗೂ ಭಯಪಡದಿರುವುದು ನಿಜವಾದ ಶ್ರೇಷ್ಠತೆ ಎಂದು ನಿಮ್ಮ ಪ್ರಯಾಣವು ತೋರಿಸುತ್ತದೆ. ನಿಮ್ಮ ಪರಂಪರೆಯು ಎಲ್ಲರಿಗೂ ಸ್ಫೂರ್ತಿಯಾಗಿದೆ.–ಸಚಿನ್ ತೆಂಡೂಲ್ಕರ್, ಕ್ರಿಕೆಟ್ ದಿಗ್ಗಜ
ಯುವ ಬೌಲರ್ ಆಗಿ ಕ್ರಿಕೆಟ್ ಜೀವನ ಆರಂಭಿಸಿದ ಅಶ್ವಿನ್ ಅವರು ಆಧುನಿಕ ಕ್ರಿಕೆಟ್‌ವರೆಗೂ ದಿಗ್ಗಜರಾಗಿ ಬೆಳೆದ ಹಾದಿಯನ್ನು ಗಮನಿಸಿದರೆ ವರ್ಣನಾತೀತ.–ಗೌತಮ್ ಗಂಭೀರ್, ಭಾರತ ತಂಡದ ಮುಖ್ಯ ಕೋಚ್
ಭಾರತ ಕ್ರಿಕೆಟ್‌ನ ಅತ್ಯದ್ಭುತ ಮ್ಯಾಚ್ ವಿನ್ನರ್, ಚೆಂಡಿನ ಮಾಂತ್ರಿಕ ಹಾಗೂ ಆಟದ ಕುರಿತು ಚಾಣಾಕ್ಷ ಚಿಂತಕ ಅಶ್ವಿನ್. ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಕುರಿತು ಹೆಮ್ಮೆ ಇದೆ.–ಜಯ್ ಶಾ, ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.