ADVERTISEMENT

ಜಡೇಜ ಅಲಭ್ಯತೆಯಿಂದ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಲಿದೆ: ಮಹೇಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2022, 12:43 IST
Last Updated 17 ಸೆಪ್ಟೆಂಬರ್ 2022, 12:43 IST
ರವೀಂದ್ರ ಜಡೇಜ (ಪಿಟಿಐ ಚಿತ್ರ)
ರವೀಂದ್ರ ಜಡೇಜ (ಪಿಟಿಐ ಚಿತ್ರ)   

ದುಬೈ: ಗಾಯಗೊಂಡಿರುವ ಆಲ್ರೌಂಡರ್‌ ರವೀಂದ್ರ ಜಡೇಜ ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಅಲಭ್ಯರಾಗಿರುವುದು ಭಾರತ ತಂಡಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಲಿದೆ ಎಂದು ಶ್ರೀಲಂಕಾ ದಿಗ್ಗಜ ಕ್ರಿಕೆಟಿಗ ಮಹೇಲ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯಟಿ20 ವಿಶ್ವಕಪ್‌ ಟೂರ್ನಿಯುಅಕ್ಟೋಬರ್‌–ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇತ್ತೀಚೆಗೆ ಮುಕ್ತಾಯವಾದಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿ ವೇಳೆ ಗಾಯಗೊಂಡಿದ್ದ ರವೀಂದ್ರ ಜಡೇಜ, ಸದ್ಯ ಬಿಸಿಸಿಐವಿಶ್ವಕಪ್‌ಗೆಪ್ರಕಟಿಸಿರುವ 15 ಸದಸ್ಯರ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಹೇಲ, 'ಇದು ಸವಾಲಿನ ವಿಚಾರ. ಅವರು (ಭಾರತ ತಂಡ) ಜಡೇಜರನ್ನು ಐದನೇ ಕ್ರಮಾಂಕಕ್ಕೆ ಸಜ್ಜುಗೊಳಿಸಿದ್ದರು. ಅವರು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಜಡೇಜ ಮತ್ತು ಹಾರ್ದಿಕ್‌ ಪಾಂಡ್ಯ ತಂಡದ ಆಲ್ರೌಂಡ್‌ ಆಯ್ಕೆಗಳಾಗಿದ್ದರು. ಇದು ಭಾರತದ ಬ್ಯಾಟಿಂಗ್‌ ವಿಭಾಗಕ್ಕೆ ಮತ್ತಷ್ಟು ಸಮತೋಲನ ತಂದುಕೊಟ್ಟಿತ್ತು' ಎಂದಿದ್ದಾರೆ.

ADVERTISEMENT

'ಜಡೇಜ ಗಾಯಗೊಂಡಿರುವುದು ಭಾರತ ತಂಡಕ್ಕೆ ಕಠಿಣವಾಗಬಲ್ಲದು. ತಂಡದಲ್ಲಿ ಎಡಗೈ ಬ್ಯಾಟರ್‌ ಇಲ್ಲದಿರುವುದು ಕಳವಳದ ಸಂಗತಿ. ಅದಕ್ಕಾಗಿ ಭಾರತವು ದಿನೇಶ್ ಕಾರ್ತಿಕ್‌ ಅವರನ್ನು ಹೊರಗಿಟ್ಟು, ಆಡುವ ಹನ್ನೊಂದರ ಬಳಗಕ್ಕೆ ರಿಷಭ್‌ ಪಂತ್‌ ಅವರನ್ನು ಕರೆತರಬಹುದು. ವಿಶ್ವಕಪ್‌ಗೆ ತೆರಳುವುದಕ್ಕೂ ಮುನ್ನ ಈ ವಿಚಾರವನ್ನು ಸರಿಪಡಿಸಿಕೊಳ್ಳಬೇಕಿದೆ. ಆದಾಗ್ಯೂ ಜಡೇಜ ಇಲ್ಲದಿರುವುದು ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದೆ' ಎಂದಿದ್ದಾರೆ.

ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಚುಟುಕುಸರಣಿಯಲ್ಲಿ ಆಡಲಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್‌ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು:ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಾಹರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.