
2025ರ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಕೃಪೆ: ಪಿಟಿಐ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರಾರ್ಥಿಸಿದರು.
'ಈಗ ಚೆಂಡು ಆರ್‌ಸಿಬಿ ಅಂಗಳದಲ್ಲಿದೆ. ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರದಿಂದ ಷರತ್ತುಬದ್ಧ ಅನುಮತಿ ಲಭಿಸಿದೆ. ಸರ್ಕಾರದ ನಿರ್ದೇಶನಗಳಂತೆ ಫೆಬ್ರುವರಿ ಅಂತ್ಯದೊಳಗೆ ನವೀಕರಣ ಕಾರ್ಯಗಳನ್ನು ಪೂರ್ಣಗೊಳಿಸಿಕೊಡುತ್ತೇವೆ. ಆಗ ಷರತ್ತುರಹಿತ ಅನುಮತಿ ಪತ್ರ ಪಡೆಯುವ ವಿಶ್ವಾಸವಿದೆ. ಆದ್ದರಿಂದ ಹಾಲಿ ಚಾಂಪಿಯನ್ ಆರ್‌ಸಿಬಿಯು ಉದ್ಘಾಟನೆ ಸೇರಿದಂತೆ ಎಲ್ಲ ಏಳು ಪಂದ್ಯಗಳನ್ನೂ ಇಲ್ಲಿಯೇ ಆಡಲಿ’ ಎಂದು ಪ್ರಸಾದ್ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಹೇಳಿದರು.
‘ಸುಮಾರು 17 ವರ್ಷಗಳಿಂದ ಇದೇ ಮೈದಾನದಲ್ಲಿ ಆಡಿ ಬೆಳೆದಿರುವ ತಂಡ ಆರ್‌ಸಿಬಿ. ಬೆಂಗಳೂರಿನ ಅಭಿಮಾನಿಗಳಿಂದಲೇ ಅವರು ಬೆಳೆದಿರುವುದು. ಆದ್ದರಿಂದ ಇಲ್ಲಿಯೇ ತಮ್ಮ ಐಪಿಎಲ್ ಪಂದ್ಯಗಳನ್ನು ಆಡುವುದು ಅವರ ಜವಾಬ್ದಾರಿಯಾಗಿದೆ. ಇಲ್ಲಿ ಪಂದ್ಯಗಳ ಆಯೋಜನೆಗೆ ಅವರು (ಆರ್‌ಸಿಬಿ) ಹಿಂಜರಿಯುತ್ತಿರುವುದಕ್ಕೆ ಕಾರಣ ಗೊತ್ತಿಲ್ಲ. ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿಯು ಉದ್ಘಾಟನೆ ಪಂದ್ಯವೂ ಸೇರಿದಂತೆ ಎಲ್ಲ ಪಂದ್ಯಗಳನ್ನು ಇಲ್ಲಿಯೇ ಆಡಲಿ’ ಎಂದು ಹೇಳಿದರು.
‘ನಮ್ಮ ಸಮಿತಿಯು ಅಧಿಕಾರಕ್ಕೆ ಬಂದು 45 ದಿನಗಳು ಕಳೆದಿವೆ. ಈ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಹಲವು ಸುತ್ತುಗಳ ಮಾತುಕತೆಗಳನ್ನು ನಡೆಸಿದ್ದೇವೆ. ಸರ್ಕಾರದಿಂದ ಉತ್ತಮ ಸ್ಪಂದನೆ ಲಭಿಸಿದೆ. ಆರ್‌ಸಿಬಿ ಕೂಡ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ಇಲಾಖೆಗಳೊಂದಿಗೆ ಚರ್ಚಿಸಿ ಪಂದ್ಯಗಳ ಆಯೋಜನೆಗೆ ಪ್ರಯತ್ನಿಸಬೇಕು. ನಮ್ಮೊಂದಿಗೆ ಕೈಜೋಡಿಸಬೇಕು’ ಎಂದರು.
2025ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿದ ನಂತರ ನಡೆದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಅದಾದ ನಂತರ, ಇಲ್ಲಿ ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಅದನ್ನು, ಕರ್ನಾಟಕ ಸರ್ಕಾರವು ಇತ್ತೀಚೆಗೆ ತೆರವು ಮಾಡಿದೆ.
ಪ್ರವೇಶದ್ವಾರಗಳ ನವೀಕರಣ ಕಾಮಗಾರಿ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರ್ಘಟನೆ ನಡೆದಿತ್ತು. 11 ಅಭಿಮಾನಿಗಳು ಸಾವಿಗೀಡಾಗಿದ್ದರು. ಅದರ ನಂತರ ರಾಜ್ಯ ಸರ್ಕಾರ ನೇಮಕಮಾಡಿದ್ದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ಸಮಿತಿಯು ಪ್ರೇಕ್ಷಕರ ಸುರಕ್ಷತೆಗಾಗಿ ಕ್ರೀಡಾಂಗಣದಲ್ಲಿ ಕೆಲವು ಸುಧಾರಣಾ ಕ್ರಮಗಳನ್ನು ಸೂಚಿಸಿತ್ತು. ಅದರ ಪ್ರಕಾರ ಕ್ರೀಡಾಂಗಣದ ಪ್ರವೇಶದ್ವಾರಗಳಲ್ಲಿ ಬದಲಾವಣೆ ಕಾರ್ಯ ಆರಂಭವಾಗಿದೆ. ಅಗ್ನಿ ದುರಂತದ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಮತ್ತಿತರ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಕೆಲವು ದ್ವಾರಗಳನ್ನು ಅಗಲಗೊಳಿಸುವ ಕಾರ್ಯ ನಡೆಯುತ್ತಿದೆ. ಪ್ರೇಕ್ಷಕರ ಸರದಿ ಸಾಲುಗಳು ಫುಟ್‌ಪಾತ್ ಬದಲಿಗೆ ಕ್ರೀಡಾಂಗಣದೊಳಗಿನ ಆವರಣದಲ್ಲಿ ಇರುವಂತೆ ವ್ಯವಸ್ಥೆ ಮಾಡುವ ಕಾರ್ಯವೂ ನಡೆಯುತ್ತಿದೆ. ‘ಕಳೆದ 50 ವರ್ಷಗಳಲ್ಲಿ ಇಲ್ಲಿ ನಡೆದ ಯಾವುದೇ ಪಂದ್ಯದಲ್ಲಿಯೂ ಅವಘಡಗಳು ಸಂಭವಿಸಿಲ್ಲ. ಹೋದ ವರ್ಷ ನಡೆದ ಕಾಲ್ತುಳಿತ ಪ್ರಕರಣವೂ ಪಂದ್ಯದ ಸಂದರ್ಭದಲ್ಲಿ ಆಗಿದ್ದು ಅಲ್ಲ. ವಿಜಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿದ್ದು ದುರದೃಷ್ಟಕರ. ಆದರೂ ಪ್ರೇಕ್ಷಕರ ಸುರಕ್ಷತೆಗೆ ನಮ್ಮ ಆದ್ಯತೆ. ಆದ್ದರಿಂದ ಎಲ್ಲ ಕಾಮಗಾರಿಗಳನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ’ ಎಂದು ಸಂತೋಷ್ ಮೆನನ್ ಹೇಳಿದರು. –– ಕಾಗದರಹಿತ ಟಿಕೆಟ್ ಮುಂಬರುವ ದಿನಗಳಲ್ಲಿ ಡಿಜಿಟಲ್ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು. ಇದು ಕಾಗದರಹಿತ ವ್ಯವಸ್ಥೆಯಾಗಲಿದೆ. ಇವತ್ತು ಪ್ರತಿಯೊಬ್ಬರ ಬಳಿಯೂ ಮೊಬೈಲ್ ಫೋನ್ ಇರುವುದರಿಂದ ಡಿಜಿಟಲ್ ಟಿಕೆಟ್ ಪಡೆಯುವುದು ಕಷ್ಟವಲ್ಲ. ಗೇಟ್ ಬಳಿರುವ ಅಧಿಕೃತ ಡಿಜಿಟಲ್ ಸಲಕರಣೆ ಮೂಲಕ ಟಿಕೆಟ್ ಸ್ಕ್ಯಾನ್ ಮಾಡಿಕೊಂಡು ಒಳಬರುವ ವ್ಯವಸ್ಥೆಯಾಗಲಿದೆ. ಇದರಿಂದ ಕ್ರೀಡಾಂಗಣದ ಬಳಿ ಟಿಕೆಟ್ ಮಾರಾಟವಿರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಟಿಕೆಟ್ ಕೌಂಟರ್‌ಗಳೂ ಇರುವುದಿಲ್ಲ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
‘ಸ್ಪಷ್ಟತೆ’ ನಿರೀಕ್ಷೆಯಲ್ಲಿ ಆರ್‌ಸಿಬಿ ‘ಕರ್ನಾಟಕ ಸರ್ಕಾರದ ನಿರ್ಧಾರಗಳನ್ನು ನಾವು ಸ್ವಾಗತಿಸುತ್ತೇವೆ. ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ನಮಗೂ ಅಗಾಧ ಆಸೆ ಇದೆ. ಕೆಎಸ್‌ಸಿಎ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಷರತ್ತುಬದ್ಧ ಅನುಮತಿ ಪಡೆಯುವಲ್ಲಿ ಸಂಸ್ಥೆಯ ಪ್ರಯತ್ನಕ್ಕೆ ಅಭಿನಂದನೆಗಳು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿಯು ತಿಳಿಸಿದೆ. ವೆಂಕಟೇಶ್ ಪ್ರಸಾದ್ ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯೆಯಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಆರ್‌ಸಿಬಿ ‘ಅಭಿಮಾನಿಗಳ ಸುರಕ್ಷತೆಗಾಗಿ ಪರಸ್ಪರ ಎಲ್ಲರೊಡಗೂಡಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ. ಪ್ರಾಥಮಿಕ ಚರ್ಚೆಗಳನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಇನ್ನೂ ಕೆಲವು ಸಂಗತಿಗಳಲ್ಲಿ ಅಸ್ಪಷ್ಟತೆ ಇದೆ. ಅವುಗಳ ನಿವಾರಣೆಗೆ ಪ್ರಯತ್ನಿಸುತ್ತಿದ್ದೇವೆ. ತವರು ಅಭಿಮಾನಿಗಳ ಮುಂದೆ ಪಂದ್ಯಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ. ಇದೇ ಹೊತ್ತಿನಲ್ಲಿ ಪ್ರೇಕ್ಷಕರ ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮಗಳು ಮುಖ್ಯ’ ಎಂದು ಉಲ್ಲೇಖಿಸಿದೆ. ಆರ್‌ಸಿಬಿಯು ಕೆಲವು ದಿನಗಳ ಹಿಂದಷ್ಟೇ ಪುಣೆ ರಾಯಪುರ ಮತ್ತು ನವೀ ಮುಂಬೈನಲ್ಲಿ ಪಂದ್ಯಗಳ ಆಯೋಜನೆಗಾಗಿ ಕ್ರೀಡಾಂಗಣಗಳನ್ನು ಪರಿಶೀಲಿಸಿತ್ತು. ಅಲ್ಲಿಯ ಆಡಳಿತಗಳೊಂದಿಗೆ ಮಾತುಕತೆಯನ್ನೂ ನಡೆಸಿತ್ತು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅವಕಾಶ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಪಂದ್ಯಗಳನ್ನು ಆಯೋಜಿಸಲು ಈ ಷರತ್ತುಬದ್ಧ ಅನುಮೋದನೆಗೆ ಕಾರಣವಾದ ಮೂಲಸೌಕರ್ಯ ಕಾರ್ಯಗಳಲ್ಲಿ ಕೆಎಸ್ಸಿಎ ಪ್ರಯತ್ನಗಳನ್ನು ನಾವು ಗುರುತಿಸುತ್ತೇವೆ ಮತ್ತು ಹೆಚ್ಚು ಪ್ರಶಂಸಿಸುತ್ತೇವೆ. ನಮ್ಮ ಉತ್ಸಾಹಭರಿತ ಅಭಿಮಾನಿಗಳ ಮುಂದೆ ನಮ್ಮ ತವರು ಮೈದಾನದಲ್ಲಿ ಆಡುವುದು ನಮ್ಮ ಬಯಕೆಯಾಗಿದ್ದರೂ ಇಲ್ಲಿ ಪಂದ್ಯಗಳನ್ನು ಆಯೋಜಿಸಲು ಅನ್ವಯವಾಗುವ ಪರಿಸ್ಥಿತಿಗಳನ್ನು ಮತ್ತು ಅಭಿಮಾನಿಗಳ ಸುರಕ್ಷತಾ ಶಿಷ್ಟಾಚಾರಗಳನ್ನು ಪೂರೈಸಲು ತೆಗೆದುಕೊಳ್ಳುವ ಕ್ರಮಗಳನ್ನು ಮತ್ತಷ್ಟು ಅರ್ಥಮಾಡಿಕೊಳ್ಳುವ ನಮ್ಮ ಬದ್ಧತೆಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಬಯಸುತ್ತೇವೆ.
ಒಳಗೊಂಡಿರುವ ಎಲ್ಲಾ ಪಾಲುದಾರರು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ನೋಡುವುದು ನಮ್ಮ ಗುರಿಯಾಗಿದೆ. ಅಭಿಮಾನಿಗಳು ಆರ್ಸಿಬಿಯ ಹೃದಯ ಮತ್ತು ಆತ್ಮ ಎಂದು ನಾವು ಪದೇ ಪದೇ ಹೇಳಿದ್ದೇವೆ ನಾವು ಯಾವಾಗಲೂ ಅಭಿಮಾನಿಗಳ ಮೊದಲ ವಿಧಾನವನ್ನು ಹೊಂದಿದ್ದೇವೆ ಮತ್ತು ಅವರು ಉತ್ತಮ ಮತ್ತು ಸುರಕ್ಷಿತ ಅನುಭವವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ನಮ್ಮ ಪ್ರಾಥಮಿಕ ಸಂಭಾಷಣೆಗಳಿಂದ ಇನ್ನೂ ಕೆಲವು ಬೂದು ಪ್ರದೇಶಗಳನ್ನು ಪರಿಶೀಲಿಸಬೇಕಾಗಿದೆ ಮತ್ತು ತಂಡ ಮತ್ತು ನಮ್ಮ ಅಭಿಮಾನಿಗಳಿಗೆ ಜವಾಬ್ದಾರಿಯುತ ನಿರ್ಧಾರಕ್ಕೆ ಬರುವ ಮೊದಲು ನಾವು ಎಲ್ಲಾ ಪಾಲುದಾರರಿಂದ ಈ ನಿಯತಾಂಕಗಳನ್ನು ಮತ್ತು ಒಳಹರಿವುಗಳನ್ನು ಪರಿಗಣಿಸುತ್ತಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.