ADVERTISEMENT

ಆರ್‌ಸಿಬಿ ಕನಸಿಗೆ ಅಡ್ಡಿಯಾದ ‘ಕನ್ನಡಿಗ’

ಪಾರ್ಥಿವ್ ಪಟೇಲ್ ಅರ್ಧಶತಕ ವ್ಯರ್ಥ; ರಾಜಸ್ಥಾನ್ ರಾಯಲ್ಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:31 IST
Last Updated 2 ಏಪ್ರಿಲ್ 2019, 19:31 IST
ವಿರಾಟ್‌ ಕೊಹ್ಲಿ ವಿಕೆಟ್‌ ಉರುಳಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಶ್ರೇಯಸ್‌ ಗೋಪಾಲ್‌ (ಮಧ್ಯ) ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಪಿಟಿಐ ಚಿತ್ರ
ವಿರಾಟ್‌ ಕೊಹ್ಲಿ ವಿಕೆಟ್‌ ಉರುಳಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಶ್ರೇಯಸ್‌ ಗೋಪಾಲ್‌ (ಮಧ್ಯ) ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಪಿಟಿಐ ಚಿತ್ರ   

ಜೈಪುರ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಗೆಲುವಿನ ಕನಸಿಗೆ ‘ಬೆಂಗಳೂರಿನ ಹುಡುಗ’ ಶ್ರೇಯಸ್ ಗೋಪಾಲ್ ಅಡ್ಡಗಾಲು ಹಾಕಿದರು.

ಸವಾಯಿ ಮಾನಸಿಂಗ್‌ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್ (12ಕ್ಕೆ3) ಮತ್ತು ಜೋಸ್ ಬಟ್ಲರ್ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್‌ ತಂಡವು ಏಳು ವಿಕೆಟ್‌ಗಳಿಂದ ಗೆದ್ದಿತು.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿಯು ಸತತ ನಾಲ್ಕನೇ ಪಂದ್ಯ ದಲ್ಲಿಯೂ ಸೋತಿತು. ಅಜಿಂಕ್ಯ ರಹಾನೆ ಬಳಗವು ಮೊದಲ ಜಯ ಗಳಿಸಿತು.

ADVERTISEMENT

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿಯು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 158 ರನ್‌ ಗಳಿಸಿತು. ಅದಕ್ಕುತ್ತರವಾಗಿ ರಾಜಸ್ಥಾನ್ ತಂಡವು 19.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 ರನ್‌ ಗಳಿಸಿತು.

ರಾಜಸ್ಥಾನ್ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ರಹಾನೆ ಕ್ಯಾಚ್‌ ಅನ್ನು ಕೊಹ್ಲಿ ನೆಲಕ್ಕೆ ಚೆಲ್ಲಿದ್ದು ತುಟ್ಟಿಯಾಯಿತು. ರಹಾನೆ ಮತ್ತು ಬಟ್ಲರ್ ಮೊದಲ ವಿಕೆಟ್‌ಗೆ 60 ರನ್ (7.4 ಓವರ್‌ಗಳಲ್ಲಿ) ಕಲೆಹಾಕಿದರು.

ಎಂಟನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಚಾಹಲ್, ರಹಾನೆಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ಬಟ್ಲರ್ (58 ರನ್), ಸ್ಟೀವನ್ ಸ್ಮಿತ್ (38 ರನ್) ಮತ್ತು ರಾಹುಲ್ ತ್ರಿಪಾಠಿ (ಔಟಾಗದೆ 34) ಜವಾಬ್ದಾರಿಯುತ ಆಟ ಆಡಿ ಆತಿಥೇಯ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಆರ್‌ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 49 ರನ್‌ ಸೇರಿಸಿದರು. ಕೊಹ್ಲಿ ತಮ್ಮ ನೈಜ ಆಟವಾಡದೇ ತಾಳ್ಮೆಯಿಂದ ಲಯ ಕಂಡುಕೊಳ್ಳಲು ಪ್ರಯತ್ನಿಸಿದರು. ಇನಿಂಗ್ಸ್‌ನ ಮೊದಲ ಓವರ್‌ನಿಂದಲೇ ಸ್ಪಿನ್ನರ್‌ಗಳಿಗೆ ಬೌಲಿಂಗ್ ಕೊಟ್ಟ ರಹಾನೆ ನಿರ್ಣಯ ಫಲ ನೀಡಿತು. ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಏಳನೇ ಓವರ್‌ ನಲ್ಲಿ ವಿರಾಟ್, ವಿಕೆಟ್ ಕಿತ್ತು ಕುಣಿದು ಕುಪ್ಪಳಿಸಿದರು.

ತಂಡದ ಇನ್ನೊಬ್ಬ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್‌ (13; 9ಎಸೆತ, 2ಬೌಂಡರಿ) ಅವರನ್ನು ಒಂಬತ್ತನೇ ಓವರ್‌ನಲ್ಲಿ ಕ್ಯಾಚ್ ಮಾಡಿದ ಶ್ರೇಯಸ್ ಸಂತಸಕ್ಕೆ ಪಾರವೇ ಇರಲಿಲ್ಲ.

11ನೇ ಓವರ್‌ನಲ್ಲಿ ಶ್ರೇಯಸ್ ಹಾಕಿದ ಎಸೆತವನ್ನು ಸಿಕ್ಸರ್‌ಗೆ ಎತ್ತಲು ಪ್ರಯತ್ನಿಸಿದ ಶಿಮ್ರೊನ್ ಹೆಟ್ಮೆಯರ್ (1 ರನ್) ಜೋಸ್ ಬಟ್ಲರ್‌ಗೆ
ಕ್ಯಾಚ್ ಕೊಟ್ಟರು.

ಪಾರ್ಥಿವ್ ಮಿಂಚು: ಇದೆಲ್ಲದರ ನಡುವೆಯೂ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ (67; 41ಎಸೆತ, 9ಬೌಂಡರಿ, 1ಸಿಕ್ಸರ್) ದಿಟ್ಟತನದಿಂದ ಆಡಿದರು. ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಮಾರ್ಕಸ್‌ ಸ್ಟೊಯಿನಿಸ್ ಆವರೊಂದಿಗೆ 53 ರನ್‌ಗಳನ್ನು ಕಲೆಹಾಕಿದರು. 18ನೇ ಓವರ್‌ನಲ್ಲಿ ಪಾರ್ಥಿವ್, ವೇಗಿ ಜೋಫ್ರಾ ಆರ್ಚರ್ ಎಸೆತವನ್ನು ಬೌಂಡರಿಗೆ ಕಳಿಸುವ ಭರದಲ್ಲಿ ಅಜಿಂಕ್ಯ ರಹಾನೆ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.