ವಿರಾಟ್ ಕೊಹ್ಲಿ
(ಪ್ರಜಾವಾಣಿ ಚಿತ್ರ)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ವೇಳೆ ಉಂಟಾದ ಕಾಲ್ತುಳಿತ ದುರಂತದ ಬಗ್ಗೆ ತಂಡದ ತಾರೆ ವಿರಾಟ್ ಕೊಹ್ಲಿ ಭಾವುಕ ಸಂದೇಶವನ್ನು ಹಂಚಿದ್ದಾರೆ.
'ಸಂತೋಷದಾಯಕ ಕ್ಷಣವು ದುರಂತವಾಗಿ ಬದಲಾಯಿತು' ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೊಹ್ಲಿ ಸಂದೇಶವನ್ನು ಆರ್‌ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4ರಂದು ಘಟನೆ ನಡೆದಿತ್ತು. ಆರ್‌ಸಿಬಿ ವಿಜಯೋತ್ಸವ ಆಚರಿಸಲು ಪ್ರದೇಶದಲ್ಲಿ ಸುಮಾರು 2.5 ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು.
'ಜೂನ್ 4ರಂದು ನಡೆದ ಹೃದಯ ವಿದ್ರಾವಕ ಘಟನೆಗೆ ಬದುಕು ನಿಜವಾಗಿಯೂ ನಿಮ್ಮನ್ನು ಸಿದ್ಧಪಡಿಸಿರುವುದಿಲ್ಲ. ಯಾವ ಕ್ಷಣ ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದಾಯಕವಾಗಿರಬೇಕಿತ್ತೋ ಅದು ದುರಂತಮಯವಾಗಿ ಪರಿಣಮಿಸಿತ್ತು' ಎಂದು ಕೊಹ್ಲಿ ಹೇಳಿದ್ದಾರೆ.
'ಈ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ಹಾಗೂ ಗಾಯಗೊಂಡ ಅಭಿಮಾನಿಗಳ ಬಗ್ಗೆ ನಾವು ಸದಾ ಕಾಳಜಿ ಹೊಂದಿರುತ್ತೇವೆ. ಅವರಿಗಾಗಿ ಪ್ರಾರ್ಥಿಸುತ್ತೇವೆ. ನಿಮಗಾದ ನಷ್ಟವು ನಮ್ಮ ಜೀವನದ ಭಾಗವೂ ಆಗಿದೆ. ನಾವೆಲ್ಲರೂ ಒಟ್ಟಾಗಿ ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಕಾಲ್ತುಳಿತದ ದುರಂತ ಬಳಿಕ ಕೊಹ್ಲಿ ಅವರಿಂದ ದಾಖಲಾದ ಮೊದಲ ವಿಸ್ತೃತ ಹೇಳಿಕೆ ಇದಾಗಿದೆ. ಕೊಹ್ಲಿ ಪ್ರತಿಕ್ರಿಯೆ ನೀಡದಿರುವ ಬಗ್ಗೆ ವ್ಯಾಪಕ ಟೀಕೆಗಳು ಬಂದಿದ್ದವು.
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹25 ಲಕ್ಷ ಪರಿಹಾರ ಮೊತ್ತ ಘೋಷಿಸಿತ್ತು. ಅಲ್ಲದೆ 'ಆರ್‌ಸಿಬಿ ಕೇರ್ಸ್' ಎಂಬ ಫೌಂಡೇಶನ್ ಸ್ಥಾಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.