ADVERTISEMENT

IPL 2025: ಆರ್‌ಸಿಬಿಗೆ ತವರಿನಲ್ಲಿ ಜಯದ ಆಸೆ

ರಜತ್ ಬಳಗಕ್ಕೆ ಇಂದು ರಾಜಸ್ಥಾನ ರಾಯಲ್ಸ್ ಸವಾಲು; ರಿಯಾನ್ ಪರಾಗ್ ಬಳಗಕ್ಕೆ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಬಲ

ಗಿರೀಶ ದೊಡ್ಡಮನಿ
Published 24 ಏಪ್ರಿಲ್ 2025, 2:41 IST
Last Updated 24 ಏಪ್ರಿಲ್ 2025, 2:41 IST
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರ ದೇವದತ್ತ ಪಡಿಕಲ್ ಅಭ್ಯಾಸ ನಡೆಸಿದರು  –ಪ್ರಜಾವಾಣಿ ಚಿತ್ರ/ರಂಜು ಪಿ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರ ದೇವದತ್ತ ಪಡಿಕಲ್ ಅಭ್ಯಾಸ ನಡೆಸಿದರು  –ಪ್ರಜಾವಾಣಿ ಚಿತ್ರ/ರಂಜು ಪಿ   

ಬೆಂಗಳೂರು: ಕೆ.ಎಲ್. ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್ ಅವರು ಕೆಲ ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದವರು. ಈ ವರ್ಷ ಇವರೆಲ್ಲರೂ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ‘ತಿರುಮಂತ್ರ’ ಹಾಕಿ ಹೋಗಿದ್ದಾರೆ. ಈಗ ರಾಹುಲ್ ದ್ರಾವಿಡ್ ಸರದಿಯೇ?

ಹೌದು; ಕ್ರಿಕೆಟ್‌ಪ್ರಿಯರಲ್ಲಿ ಈಗ ಇಂತಹದೊಂದು ಚರ್ಚೆ ಗರಿಗೆದರಿದೆ. ಆರ್‌ಸಿಬಿ ತಂಡದ ಮೊದಲ ನಾಯಕರಾಗಿದ್ದ ದ್ರಾವಿಡ್ ಈಗ ರಾಜಸ್ಥಾನ ರಾಯಲ್ಸ್‌ಗೆ ಮುಖ್ಯ ಕೋಚ್ ಆಗಿದ್ದಾರೆ. ಅವರ ತಂಡವು ಗುರುವಾರ ಇಲ್ಲಿ ಆರ್‌ಸಿಬಿ ವಿರುದ್ಧ ಕಣಕ್ಕಿಳಿಯಲಿದೆ. ತಾವು ಬಾಲ್ಯದಿಂದಲೂ ಆಡಿ ಬೆಳೆದ ಕ್ರೀಡಾಂಗಣವನ್ನು ದ್ರಾವಿಡ್ ಚೆನ್ನಾಗಿ ಬಲ್ಲರು. ಗಾಯಗೊಂಡಿರುವ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಅವರು ರಾಯಲ್ಸ್ ತಂಡವನ್ನು ಮುನ್ನಡೆಸುವರು. ಈ ಬಳಗದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕೋಚ್ ದ್ರಾವಿಡ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಲಿದೆ. 

ಈ ಬಾರಿಯ ಟೂರ್ನಿಯಲ್ಲಿ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡವು ತವರಿನಂಗಳದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಸೋತಿದೆ. ಹೊರಗಿನ ತಾಣಗಳಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿದೆ. ಹೋದವಾರ ಇಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ  ನಡೆದಿದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಅದರಿಂದಾಗಿ 14–14 ಓವರ್‌ಗಳ ಪಂದ್ಯ ನಡೆದಿತ್ತು. ಪಂಜಾಬ್ ಗೆದ್ದಿತ್ತು. ಆ ತಂಡದಲ್ಲಿದ್ದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪರಿಣಾಮಕಾರಿ ಬೌಲಿಂಗ್ ಮಾಡಿದ್ದರು. ಆರ್‌ಸಿಬಿ ಬ್ಯಾಟರ್‌ಗಳು ಕುಸಿದಿದ್ದರು. ಟಿಮ್ ಡೇವಿಡ್ ಮಾತ್ರ ಮಿಂಚಿನ ಅರ್ಧಶತಕ ಹೊಡೆದು ಬೆಂಗಳೂರು ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದ್ದರು. ಆದರೆ ತಂಡಕ್ಕೆ ಜಯ ಸಾಧ್ಯವಾಗಿರಲಿಲ್ಲ. ನಂತರ ಪಂಜಾಬ್ ತಂಡವನ್ನು ಅವರದ್ದೇ ತವರು ಮುಲ್ಲನಪುರದಲ್ಲಿ ಸೋಲಿಸಿ ಬಂದಿರುವ ಬೆಂಗಳೂರು ಆತ್ಮವಿಶ್ವಾಸದಲ್ಲಿದೆ. 

ADVERTISEMENT

ಆ ಪಂದ್ಯದಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಇಲ್ಲಿಯೂ ತಮ್ಮ ಬ್ಯಾಟ್‌ ಝಳಪಿಸುವ ವಿಶ್ವಾಸದಲ್ಲಿದ್ದಾರೆ. ಬುಧವಾರ ನೆಟ್ಸ್‌ ಅಭ್ಯಾಸದಲ್ಲಿ ಒಂದರ ಹಿಂದೆ ಒಂದು ಸಿಕ್ಸರ್‌ ಬಾರಿಸಿದ ಅವರ ಏಕಾಗ್ರತೆ, ಪಾದಚಲನೆ ಮತ್ತು ಟೈಮಿಂಗ್ ನಿಖರವಾಗಿದ್ದವು. ಟೂರ್ನಿಯಲ್ಲಿ ಅವರು ಈಗಾಗಲೇ 4 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರು ಫಿಲ್ ಸಾಲ್ಟ್ ಜೊತೆಗೆ ಉತ್ತಮ ಆರಂಭ ನೀಡುವ ನಿರೀಕ್ಷೆ ಇದೆ. ‘ಸ್ಥಳೀಯ ಹೀರೊ’ ದೇವದತ್ತ ಪಡಿಕ್ಕಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ರಜತ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. 

ಜೋಶ್‌ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಸ್ಪಿನ್ನರ್ ಕೃಣಾಲ್ ಪಾಂಡ್ಯ ಹಾಗೂ ಸುಯಶ್ ಶರ್ಮಾ ಅವರು ಪರಿಣಾಮಕಾರಿ ದಾಳಿ ನಡೆಸಬಲ್ಲ ಬೌಲರ್‌ಗಳಾಗಿದ್ದಾರೆ. ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್, 14ರ ಪೋರ ವೈಭವ್ ಸೂರ್ಯವಂಶಿ, ನಿತೀಶ್ ರಾಣಾ ಹಾಗೂ ಧ್ರುವ ಜುರೇಲ್ ಅವರಂತಹ ಉತ್ತಮ ಬ್ಯಾಟರ್‌ಗಳು ಇದ್ದಾರೆ. ವೇಗಿ ಜೋಫ್ರಾ ಆರ್ಚರ್ ಕೂಡ ಇದ್ದಾರೆ. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ತಂಡವು ಎಂಟು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯಿಸಲು ಸಾಧ್ಯವಾಗಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ರಾಯಲ್ಸ್ ತಂಡವನ್ನು ಆರ್‌ಸಿಬಿ ಮಣಿಸಿತ್ತು. ಇದರಿಂದಾಗಿ ಮೇಲ್ನೋಟಕ್ಕೆ ರಾಜಸ್ಥಾನಕ್ಕಿಂತ ಬೆಂಗಳೂರು ತಂಡವೇ ಬಲಾಢ್ಯವಾಗಿ ಕಾಣುತ್ತಿದೆ. ಆದ್ದರಿಂದ ರಜತ್ ಬಳಗವು ತವರಿನಂಗಳದಲ್ಲಿ ಮೊದಲ ಗೆಲುವಿನ ರುಚಿ ಸವಿಯುವ ವಿಶ್ವಾಸದಲ್ಲಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್  ನೆರವು ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು  –ಪ್ರಜಾವಾಣಿ ಚಿತ್ರ/ರಂಜು ಪಿ
ಚಿನ್ನಸ್ವಾಮಿ ಕ್ರೀಡಾಂಣದ ಪಿಚ್‌ ಕ್ಯುರೇಟರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರರು ತಾವು ಆಡುವ ವಿಕೆಟ್‌ಗೆ ಹೊಂದಿಕೊಂಡು ಕೌಶಲ ತೋರಿಸಬೇಕು. ಇಲ್ಇಲಯ ಪಿಚ್ ತುಸು ಕ್ಲಿಷ್ಟವಾಗಿದ್ದು ಹೊಂದಿಕೊಂಡು ಆಡುವ ಪ್ರಯತ್ನದಲ್ಲಿದ್ದೇವೆ.
– ರಜತ್ ಪಾಟೀದಾರ್ ಆರ್‌ಸಿಬಿ ನಾಯಕ

ಮೂರು ವಾರಗಳಲ್ಲಿ ಚೇತರಿಸಿಕೊಳ್ಳುವೆ: ದ್ರಾವಿಡ್

‘ಇನ್ನು ಮೂರು ವಾರಗಳಲ್ಲಿ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳುವೆ.  ಹಂತಹಂತವಾಗಿ ನನ್ನ ಗಾಯ ವಾಸಿಯಾಗುತ್ತಿದೆ’ ಎಂದು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.  ಅವರು ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಡಿವಿಷನ್ ಕ್ರಿಕೆಟ್‌ನಲ್ಲಿ ಆಡುವಾಗ ಬಿದ್ದು ಗಾಯಗೊಂಡಿದ್ದ ದ್ರಾವಿಡ್ ಅವರ  ಕಾಲಿನ ಮೂಳೆ ಮುರಿದಿತ್ತು. ಅದರಿಂದಾಗಿ ಐಪಿಎಲ್ ಆರಂಭದಿಂದಲೂ ಗಾಲಿಕುರ್ಚಿಯ ಮೇಲೆ ಕುಳಿತುಕೊಂಡೇ ರಾಯಲ್ಸ್ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.  ಬುಧವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಗಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ‘ಈ ಸ್ಥಿತಿಯಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುವುದು ಕಠಿಣ ಸವಾಲೇನಲ್ಲ. ಏಕೆಂದರೆ; ನಾನು ಕ್ಯಾಚ್ ಪಡೆಯಬೇಕಿಲ್ಲ. ರನ್ ಸ್ಕೋರ್ ಮಾಡಬೇಕಿಲ್ಲ. ಕೋಚ್ ಆಗಿ ಮಾರ್ಗದರ್ಶನ ನೀಡಲು ಚುರುಕಾಗಿ ಯೋಚಿಸುವ ಮಿದುಳು ಮತ್ತು ಸೂಚನೆಗಳನ್ನು ನೀಡಲು ಬಾಯಿ ಚೆನ್ನಾಗಿರಬೇಕು. ಅವೆರಡೂ ಉತ್ತಮ ಸ್ಥಿತಿಯಲ್ಲಿವೆ’ ಎಂದು ಲಘುಹಾಸ್ಯದ ಧಾಟಿಯಲ್ಲಿ ಹೇಳಿದರು.  ‘ನಮ್ಮ ತಂಡವು ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಇಲ್ಲಿಂದ ಮುಂದಿನ ಎಲ್ಲ ಪಂದ್ಯಗಳಲ್ಲಿ ಜಯ ಅಗತ್ಯ. ಒಂದೇ ಒಂದು ಸೋಲು ಕೂಡ ದುಬಾರಿಯಾಗಬಹುದು. ಆದ್ದರಿಂದ ಗೆಲುವಿನ ಮೇಲೆ ನಮ್ಮ ಕಣ್ಣು’ ಎಂದೂ ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.