
ಆರ್‌ಸಿಬಿ ತಂಡದ ಸ್ಮೃತಿ ಮಂದಾನ ಮತ್ತು ಶ್ರೇಯಾಂಕಾ ಪಾಟೀಲ
ವಡೋದರ: ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಲೀಗ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ವಿರುದ್ಧ ಗುರುವಾರ ನಡೆಯುವ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿರುವ ಆರ್‌ಸಿಬಿ ತಂಡ ಆ ಮೂಲಕ ಫೈನಲ್ ಸ್ಥಾನವನ್ನೂ ಕಾದಿರಿಸಲು ಯತ್ನಿಸಲಿದೆ.
ಪ್ಲೇ ಆಫ್‌ಗೆ ಸ್ಥಾನ ಖಚಿತಪಡಿಸಿರುವ ಏಕೈಕ ತಂಡವೆನಿಸಿರುವ ಬೆಂಗಳೂರಿನ ತಂಡಕ್ಕೆ, ವಾರಿಯರ್ಸ್ ವಿರುದ್ಧದ ಗೆಲುವು ಅಗ್ರಸ್ಥಾನ ಖಚಿತಪಡಿಸಲಿದೆ. ಸ್ಮೃತಿ ಮಂದಾನ ಸಾರಥ್ಯದ ತಂಡ ಏಳು ಪಂದ್ಯಗಳಲ್ಲಿ 5 ಗೆದ್ದ 10 ಅಂಕ ಗಳಿಸಿದೆ.
ಪ್ಲೇಆಫ್ ಸ್ಥಾನ ಪಡೆಯಬೇಕಾದರೆ ವಾರಿಯರ್ಸ್ ತಂಡ ಉಳಿದೆರಡೂ ಪಂದ್ಯ ಗೆಲ್ಲಲೇಬೇಕಾಗಿದೆ. ಈ ಒತ್ತಡದ ಜೊತೆಗೆ ಗಾಯಾಳುಗಳ ಸಮಸ್ಯೆ ತಂಡವನ್ನು ಬಾಧಿಸುತ್ತಿದೆ. ತಂಡದ ಯಶಸ್ವಿ ಬ್ಯಾಟರ್ ಫೋಬಿ ಲಿಚ್‌ಫೀಲ್ಡ್ (243 ರನ್) ಅವರು ಗಾಯಾಳಾಗಿದ್ದಾರೆ. ಅವರ ಬದಲು ಆಮಿ ಜೋನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಸತತ ಐದು ಪಂದ್ಯಗಳನ್ನು ಗೆದ್ದು ಯಶಸ್ಸಿನ ಓಟದಲ್ಲಿದ್ದ ಮಂದಾನ ಬಳಗಕ್ಕೆ ಎರಡು ಸೋಲುಗಳಿಂದ ತಡೆ ಬಿದ್ದಿದೆ. ಇನ್ನೊಂದು ಪಂದ್ಯ ಗೆದ್ದರೆ ನೇರ ಫೈನಲ್ ತಲುಪುವ ಅವಕಾಶವಿದ್ದು, ಅದಕ್ಕಾಗಿ ಲೀಗ್‌ನ ಕೊನೆಯ ಪಂದ್ಯಕ್ಕೆ ಕಾಯಬೇಕಾಗಿದೆ. ಬ್ಯಾಟರ್‌ಗಳ ವೈಫಲ್ಯದಿಂದ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಎದುರು ಏಳು ವಿಕೆಟ್‌ಗಳಿಂದ ಸೋಲು ಕಾಣಬೇಕಾಯಿತು. 2024 ಸಾಲಿನ ವಿಜೇತ ತಂಡ ನಂತರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲನುಭವಿಸುವ ಮೊದಲು ಹೋರಾಟ ತೋರಿತು. ರಿಚಾ ಘೋಷ್ ಅವರ 90 ರನ್‌ಗಳು (50 ಎಸೆತ) ಸೋಲಿನಲ್ಲೂ ಬೆಳ್ಳಿ ರೇಖೆಯಾಯಿತು.
ಲಾರೆನ್ ಬೆಲ್ (11 ವಿಕೆಟ್) ಆರ್‌ಸಿಬಿಯ ಯಶಸ್ವಿ ಬೌಲರ್ ಎನಿಸಿದ್ದಾರೆ. ಅವರಿಗೆ ಸಯಾಲಿ ಸತ್ಘರೆ (8) ಮತ್ತು ನದಿನ್ ಡಿ ಕ್ಲರ್ಕ್ (11 ವಿಕೆಟ್) ಬೆಂಬಲ ನೀಡಿದ್ದಾರೆ.
ವಾರಿಯರ್ಸ್‌ಗೆ ಈ ಪಂದ್ಯ ಮಾಡು–ಮಡಿ ರೀತಿಯದ್ದಾಗಿದೆ. ಎರಡು ಪಂದ್ಯ ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಿಲ್ಲ. ಅದು ಇತರ ತಂಡಗಳ ಮರ್ಜಿಯನ್ನು ಅವಲಂಬಿಸಿದೆ. ಆರು ಪಂದ್ಯಗಳಲ್ಲಿ ಎರಡು ಮಾತ್ರ ಗೆದ್ದು 4 ಅಂಕ ಗಳಿಸಿರುವ ವಾರಿಯರ್ಸ್‌ನ ನೆಟ್ ರನ್‌ರೇಟ್ (–0.769) ಕೂಡ ಕಳಪೆಯಾಗಿದೆ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.