ADVERTISEMENT

ಇತಿಹಾಸ ಬರೆದ ಕ್ರಿಕೆಟಿಗರಿಗೆ ಕೆಂಪುಹಾಸಿನ ಸ್ವಾಗತ

ಮುಂಬೈನಲ್ಲಿ ಅಜಿಂಕ್ಯ ರಹಾನೆಗೆ ಹೂಮಳೆಗರೆದ ಜನರು

ಪಿಟಿಐ
Published 21 ಜನವರಿ 2021, 13:58 IST
Last Updated 21 ಜನವರಿ 2021, 13:58 IST
ಮುಂಬೈನಲ್ಲಿರುವ ತಮ್ಮ ಮನೆಗೆ ಮರಳುವ ಹಾದಿಯಲ್ಲಿ ಅಜಿಂಕ್ಯ ರಹಾನೆಗೆ ಜನರು ಅದ್ದೂರಿ ಸ್ವಾಗತ ನೀಡಿದರು. ಪತ್ನಿ ಮತ್ತು ಮಗಳು ಇದ್ದಾರೆ  –ಪಿಟಿಐ ಚಿತ್ರ
ಮುಂಬೈನಲ್ಲಿರುವ ತಮ್ಮ ಮನೆಗೆ ಮರಳುವ ಹಾದಿಯಲ್ಲಿ ಅಜಿಂಕ್ಯ ರಹಾನೆಗೆ ಜನರು ಅದ್ದೂರಿ ಸ್ವಾಗತ ನೀಡಿದರು. ಪತ್ನಿ ಮತ್ತು ಮಗಳು ಇದ್ದಾರೆ –ಪಿಟಿಐ ಚಿತ್ರ   

ಮುಂಬೈ/ನವದೆಹಲಿ: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ಗುರುವಾರ ತವರಿಗೆ ಮರಳಿದ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರಿಗೆ ಅಲ್ಲಿ ಸೇರಿದ್ದ ಜನರು ಜೈಕಾರ ಹಾಕಿದರು. ಮರಾಠಿಯಲ್ಲಿ ಆಲಾ ರೇ ಆಲಾ ಅಜಿಂಕ್ಯ ಆಲಾ (ಬಂದ ಬಂದ ಅಜಿಂಕ್ಯ ಬಂದಾ) ಎಂದು ಹರ್ಷೋದ್ಘಾರ ಮಾಡಿದರು. ಡೋಲ್ ಥಾಶಾದ ಸದ್ದು ಪ್ರತಿಧ್ವನಿಸಿತು. ಅಜಿಂಕ್ಯ ಮತ್ತು ಅವರೊಂದಿಗೆ ಬಂದ ಮುಂಬೈ ಆಟಗಾರರಾದ ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್, ಪೃಥ್ವಿ ಶಾ ಮತ್ತು ಕೋಚ್ ರವಿಶಾಸ್ತ್ರಿಯವರ ಮೇಲೆ ಜನರು ಹೂಮಳೆಗರೆದರು.

ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಅಧ್ಯಕ್ಷ ವಿಜಯ್ ಪಾಟೀಲ ಮತ್ತು ಅಪೆಕ್ಸ್‌ ಕೌನ್ಸಿಲ್ ಸದಸ್ಯರಾದ ಅಜಿಂಕ್ಯ ನಾಯಕ್, ಅಮಿತ್ ದಾನಿ ಮತ್ತು ಉಮೇಶ್ ಕಾನ್ವಿಲ್ಕರ್ ಆಟಗಾರರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಹಾನೆ ಕೇಕ್ ಕತ್ತರಿಸಿದರು.

ADVERTISEMENT

ಮುಂಬೈನ ಮಾತುಂಗಾದಲ್ಲಿರುವ ತಮ್ಮ ಮನೆಗೆ ತೆರಳಿದ ರಹಾನೆಗೆ ಆ ಪ್ರದೇಶದ ನಿವಾಸಿಗಳು ಅದ್ದೂರಿ ಸ್ವಾಗತ ನೀಡಿದರು. ರಹಾನೆ ಮನೆಯಿರುವ ವಸತಿ ಸಮುಚ್ಛಯದ ನಿವಾಸಿಗಳು ಹೂವಿನ ಪಕಳೆಗಳ ಅಭಿಷೇಕ ಮಾಡಿದರು. ಹಬ್ಬದ ವಾತಾವರಣವೇ ಅಲ್ಲಿತ್ತು. ಜನರು ಮತ್ತು ವಿಡಿಯೊಗ್ರಾಫರ್‌ಗಳು ಈ ಎಲ್ಲ ಸಂಭ್ರಮವನ್ನು ತಮ್ಮ ಮೊಬೈಲ್ ಮತ್ತು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಮುಗಿಬಿದ್ದರು. ಎಲ್ಲರತ್ತ ನಗುನಗುತ್ತಲೇ ಕೈಬೀಸುತ್ತ ರಹಾನೆ ತಮ್ಮ ಮನೆಗೆ ತೆರಳಿದರು. ಆದರೂ ಸಂಜೆಯವರೆಗೂ ಇಡೀ ಪ್ರದೇಶದಲ್ಲಿ ಡೋಲ್, ನಗಾರಿಗಳ ಸದ್ದು, ಜನರ ಕೇಕೆಗಳು ಪ್ರತಿಧ್ವನಿಸಿದವು.

ಬೆಂಗಳೂರಿನಲ್ಲಿಳಿದ ನಟರಾಜನ್: ನೆಟ್ ಬೌಲರ್ ಆಗಿ ತೆರಳಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮೂರು ಮಾದರಿಗಳಿಗೂ ಪದಾರ್ಪಣೆ ಮಾಡಿದ ಟಿ. ನಟರಾಜನ್ ಬೆಂಗಳೂರಿಗೆ ಬಂದು ತಲುಪಿದರು. ನಂತರ ತಮಿಳುನಾಡಿನ ಸೇಲಂ ಸಮೀಪದ ತಮ್ಮ ಗ್ರಾಮಕ್ಕೆ ತೆರಳಿದರು.

ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಇನ್ನೂ ದುಬೈನಲ್ಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರು ಚೆನ್ನೈ ತಲುಪಲಿದ್ದಾರೆ.

ದೆಹಲಿಗೆ ಪಂತ್: ಬ್ರಿಸ್ಬೇನ್ ಟೆಸ್ಟ್‌ ವಿಜಯದ ರೂವಾರಿ ರಿಷಭ್ ಪಂತ್ ತಮ್ಮ ತವರೂರು ದೆಹಲಿಗೆ ಬೆಳಿಗ್ಗೆ ಬಂದಿಳಿದರು. ವೃದ್ಧಿಮಾನ್ ಸಹಾ ಕೋಲ್ಕತ್ತಕ್ಕೆ ಮತ್ತು ಮೊಹಮ್ಮದ್ ಸಿರಾಜ್ ಹೈದರಾಬಾದ್‌ ತಲುಪಿದರು.

ಅಕ್ಟೋಬರ್‌ ತಿಂಗಳಿನಲ್ಲಿ ಯುಎಇಯಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ನಂತರ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ಏಕದಿನ, ಟಿ20 ಮತ್ತು ಟೆಸ್ಟ್‌ ಸರಣಿಗಳಲ್ಲಿ ಆಡಿದ್ದರು. ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ತಂಡವು ಸೋತಿತ್ತು. ಅದರ ನಂತರ ಪಿತೃತ್ವ ರಜೆ ಪಡೆದ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದರು. ಅಜಿಂಕ್ಯ ರಹಾನೆ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಗಾಯಾಳುಗಳ ಸಮಸ್ಯೆಯ ನಡುವೆಯೂ ತಂಡವು ಐತಿಹಾಸಿಕ ವಿಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.