ADVERTISEMENT

IPL 2025 | LSG vs RCB: ಆರ್‌ಸಿಬಿಗೆ ಪ್ಲೇಆಫ್‌ ಸ್ಥಾನದ ಗುರಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 0:28 IST
Last Updated 9 ಮೇ 2025, 0:28 IST
ರಜತ್ ಪಾಟೀದಾರ್
ರಜತ್ ಪಾಟೀದಾರ್   

ಲಖನೌ: ಈ ಬಾರಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಶುಕ್ರವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಬೆಂಗಳೂರು ತಂಡವು ಪರದಾಡುತ್ತಿರುವ ರಿಷಭ್ ಪಂತ್‌ ಪಡೆಯ ವಿರುದ್ಧ ಈ ಪಂದ್ಯ ಗೆದ್ದು ಪ್ಲೇಆಫ್‌ಗೆ ಸ್ಥಾನ ಖಚಿತಪಡಿಸುವ ವಿಶ್ವಾಸದಲ್ಲಿದೆ.

ಈ ಪಂದ್ಯ ಗೆದ್ದರಷ್ಟೇ ಲಖನೌ ತಂಡಕ್ಕೆ ಪ್ಲೇ ಆಫ್‌ ಆಸೆ ಜೀವಂತವಾಗಿ ಉಳಿಯಬಹುದು. ಮೆಗಾ ಹರಾಜಿನಲ್ಲಿ ದಾಖಲೆ ಮೊತ್ತ ಪಡೆದ ನಾಯಕ ರಿಷಭ್ ಪಂತ್‌ ಅವರು ಅದಕ್ಕೆ ನ್ಯಾಯವನ್ನೇ ಒದಗಿಸಿಲ್ಲ. ಲೀಗ್‌ ಅಂತಿಮ ಹಂತದತ್ತ ಕಾಲಿಟ್ಟರೂ, ಅವರು ವಿಫಲರಾಗುತ್ತಿರುವ ಪರಿಣಾಮ, ತಂಡವೂ ಸಂಕಷ್ಟದಲ್ಲಿದೆ. ತಂಡವು ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕು ಸೋತಿದ್ದು, ಉಳಿದ ಮೂರು ಗೆದ್ದರೂ ತಂಡ 16 ಅಂಕ ಮಾತ್ರ ಗಳಿಸಬಹುದು. 

ಲಖನೌ ತಂಡದ ಪರದಾಟ ಒಂದೆಡೆಯಾದರೆ, ರಜತ್ ಪಾಟೀದಾರ್ ಪಡೆ ಕೊನೆಯ ಆರು ಪಂದ್ಯಗಳಲ್ಲಿ ಐದನ್ನು ಗೆದ್ದು ಆತ್ಮವಿಶ್ವಾಸದಲ್ಲಿದೆ. ತಂಡ ಇನ್ನೊಂದು ಗೆದ್ದರೂ ಪ್ಲೇಆಫ್‌ ಸ್ಥಾನ ಖಚಿತವಾಗಲಿದೆ. 18 ಅಂಕ ಗಳಿಸುವ ತಂಡ ಪ್ಲೇ ಆಫ್‌ ದೃಷ್ಟಿಯಿಂದ ಸುರಕ್ಷಿತ ಸ್ಥಿತಿಯಲ್ಲಿರುತ್ತದೆ.

ADVERTISEMENT

ರಿಷಭ್‌ ಪಂತ್‌ಗೆ ಈ ಐಪಿಎಲ್‌ ನಿರಾಶಾದಾಯಕವಾಗಿದೆ. ಈ ಆಕರ್ಷಕ ಬ್ಯಾಟರ್‌ ಕೀಪರ್‌ 99.92 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದು ಅವರ ನೀರಸ ನಿರ್ವಹಣೆಗೆ ಕನ್ನಡಿಯಾಗಿದೆ. ಈ ತಂಡ ಮೊದಲ ಮೂವರು ಆಟಗಾರರ ಕೊಡುಗೆಯನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಮಿಚೆಲ್‌ ಮಾರ್ಷ್‌, ಏಡನ್‌ ಮರ್ಕರಂ ಮತ್ತು ನಿಕೋಲಸ್‌ ಪೂರನ್ ಮಾತ್ರ ಈ ತಂಡದಲ್ಲಿ ಯಶಸ್ಸು ಕಂಡಿದ್ದಾರೆ. ಪೂರನ್ ಮೊದಲ ಕೆಲವು ಪಂದ್ಯಗಳಲ್ಲಿ ಅಮೋಘ ಆಟವಾಡಿದ್ದರು. ನಂತರ ಅದೇ ಲಹರಿಯಲ್ಲಿ ಮುಂದುವರಿದಿಲ್ಲ.

ಬೌಲಿಂಗ್ ವಿಭಾಗದಲ್ಲೂ ತಂಡ ಸುಧಾರಿತ ಪ್ರದರ್ಶನ ನೀಡಬೇಕಾಗಿದೆ. ಪುನರಾಮನ ಮಾಡಿರುವ ಎಕ್ಸ್‌ಪ್ರೆಸ್‌ ವೇಗಿ ಮಯಂಕ್ ಯಾದವ್‌ ಅವರು ಮೊದಲಿನ ರೀತಿ ಅಪಾಯ ಒಡ್ಡುತ್ತಿಲ್ಲ. ತಂಡದ ಫೀಲ್ಡಿಂಗ್–ಕ್ಯಾಚಿಂಗ್ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ.

ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಈ ಐಪಿಎಲ್‌ನಲ್ಲಿ ಉತ್ಸಾಹದ ಪ್ರದರ್ಶನ ನೀಡಿದೆ. ತಾರಾ ಆಟಗಾರ ವಿರಾಟ್‌ ಕೊಹ್ಲಿ ಅಮೋಘ ಲಯದಲ್ಲಿದ್ದಾರೆ. 11 ಇನಿಂಗ್ಸ್‌ಗಳಲ್ಲಿ ಏಳು ಬಾರಿ ಅರ್ಧ ಶತಕ ಬಾರಿಸಿದ್ದಾರೆ. ಅವರು ಉತ್ತಮ ಆರಂಭ ನೀಡುತ್ತಿರುವ ಕಾರಣ ರಜತ್‌ ಪಾಟೀದಾರ್ ಮತ್ತು ರೊಮಾರಿಯೊ ಷೆಫರ್ಡ್‌ ಅವರಿಗೆ ಬಾಹುಬಲ ತೋರಲು ಅವಕಾಶವಾಗುತ್ತಿದೆ.

ಕೆಲವು ಪಂದ್ಯಗಳಲ್ಲಿ ಯಶಸ್ಸು ಕಂಡಿದ್ದ ದೇವದತ್ತ ಪಡಿಕ್ಕಲ್‌ ಬದಲು ಮತ್ತೊಬ್ಬ ಕನ್ನಡಿಗ ಆಟಗಾರ ಮುಯಂಕ್ ಅಗರವಾಲ್ ತಂಡವನ್ನು ಸೇರಿಕೊಂಡಿದ್ದಾರೆ.

ಅವಳಿ ಸ್ಪಿನ್ನರ್‌ಗಳಾದ ಕೃಣಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಅವರು ಪರಿಣಾಮಕಾರಿ ಎನಿಸಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜೋಶ್‌ ಹೇಜಲ್‌ವುಡ್ ಮತ್ತು ಯಶ್ ದಯಾಳ್ ಒತ್ತಡದಲ್ಲೂ ಬಿಗಿಯಾಗಿ ಬೌಲಿಂಗ್ ಮಾಡಿದ್ದಾರೆ.

ತವರಿನಿಂದಾಚೆ ಅಜೇಯವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದಂಡಯಾತ್ರೆಯನ್ನು ತಡೆದು ನಿಲ್ಲಿಸಲು ಎಲ್‌ಎಸ್‌ಜಿ ಸದ್ಯದ ‍ಪರಿಸ್ಥಿತಿಯಲ್ಲಿ ಕಠಿಣವಾಗಬಹುದು. ಅದು ವಿಶೇಷ ಪ್ರಯತ್ನದೊಡನೆ ಕಣಕ್ಕಿಳಿಯಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.