ADVERTISEMENT

ಕೋವಿಡ್ ಹೆಚ್ಚಳ: ಭಾರತದಲ್ಲಿ ಐಪಿಎಲ್‌ ಮುಂದುವರಿಕೆ ಸಾಧ್ಯವೇ ಇಲ್ಲ –ಸೌರವ್ ಗಂಗೂಲಿ

ರಾಯಿಟರ್ಸ್
Published 10 ಮೇ 2021, 15:17 IST
Last Updated 10 ಮೇ 2021, 15:17 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ: ಕೋವಿಡ್ ಸೋಂಕು ಏರುಗತಿಯಲ್ಲೇ ಸಾಗುತ್ತಿರುವುದರಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಭಾರತದಲ್ಲಿ ಮುಂದುವರಿಸಲು ಸಾಧ್ಯವೇ ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಬಯೊಬಬಲ್‌ನಲ್ಲಿದ್ದ ಆಟಗಾರರಲ್ಲೂ ಸೋಂಕು ಕಾಣಿಸಿಕೊಂಡ ಕಾರಣ ಐಪಿಎಲ್‌ ಟೂರ್ನಿಯನ್ನು ಕಳೆದ ವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿತ್ತು. ಒಟ್ಟು 60 ಪಂದ್ಯಗಳ ಪೈಕಿ 29 ಪಂದ್ಯಗಳು ಮಾತ್ರ ಈ ವರೆಗೆ ನಡೆದಿವೆ.

ಆಂಗ್ಲ ಕ್ರೀಡಾ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಟೂರ್ನಿಯನ್ನು ಎಲ್ಲಿ, ಹೇಗೆ ಮುಂದುವರಿಸಬೇಕು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಇಂಗ್ಲೆಂಡ್‌ನಲ್ಲಿ ಜೂನ್ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ವರೆಗಂತೂ ಟೂರ್ನಿಯನ್ನು ಪುನರಾರಂಭಿಸಲು ಸಾಧ್ಯವೇ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘14 ದಿನಗಳ ಕ್ವಾರಂಟೈನ್ ಸೇರಿದಂತೆ ಟೂರ್ನಿ ಆಯೋಜಿಸಲು ಅನೇಕ ತೊಡಕುಗಳಿವೆ. ಭಾರತದಲ್ಲಿ ಕಠಿಣ ಕ್ವಾರಂಟೈನ್ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ಟೂರ್ನಿ ಮುಂದುವರಿಸುವುದು ಕೂಡ ಕಷ್ಟ’ ಎಂದು ಗಂಗೂಲಿ ವಿವರಿಸಿದ್ದಾರೆ.

ಕಳೆದ ಬಾರಿ ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಕೂಡ ಆಟಗಾರರು ಬಯೊಬಬಲ್‌ನಲ್ಲಿದ್ದರು. ’ಬಬಲ್‌ ಬದುಕು ದುಷ್ಕರ. ಅದನ್ನು ನಿರ್ವಹಿಸುವುದು ಆಟಗಾರರಿಗೂ ಕಷ್ಟಸಾಧ್ಯ. ಕಳೆದ ಸೆಪ್ಟೆಂಬರ್‌ನಿಂದ ಜಗತ್ತಿನ ಬಹುತೇಕ ಆಟಗಾರರು ಬಯೊಬಬಲ್‌ನಲ್ಲಿದ್ದಾರೆ. ಅದಕ್ಕೆ ಬೇರೆ ಪರ್ಯಾಯವಿಲ್ಲ. ಸದ್ಯ ಬಯೊಬಬಲ್ ವ್ಯವಸ್ಥೆ ಇಲ್ಲದೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ’ ಎಂದು ಹೇಳಿರುವ ಗಂಗೂಲಿ ‘ಮನೆಯೊಳಗೆ ಕುಳಿತುಕೊಳ್ಳುವುದಕ್ಕಿಂತ ಕ್ರೀಡಾಂಗಣಕ್ಕೆ ಇಳಿಯುವುದು ಒಂದು ರೀತಿಯಲ್ಲಿ ಒಳ್ಳೆಯದೇ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಮುಂದಿನ ತಿಂಗಳಲ್ಲಿ ಇಂಗ್ಲೆಂಡ್‌ಗೆ ತೆರಳಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಸೇರಿದಂತೆ ಒಟ್ಟು ಆರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ನಡುವೆ ಶ್ರೀಲಂಕಾ ‍ಪ್ರವಾಸವನ್ನೂ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.