ADVERTISEMENT

ಟ್ವೆಂಟಿ–20 ವಿಶ್ವಕಪ್ ತಂಡದಲ್ಲಿ ರಿಚಾ

ಹರ್ಮನ್‌ಪ್ರೀತ್ ಕೌರ್ ನಾಯಕತ್ವ; ತ್ರಿಕೋನ ಸರಣಿಗೆ ನುಶತ್ ಪರ್ವೀನ್‌

ಪಿಟಿಐ
Published 12 ಜನವರಿ 2020, 19:45 IST
Last Updated 12 ಜನವರಿ 2020, 19:45 IST
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್   

ಮುಂಬೈ : ಬಂಗಾಳದ ಬ್ಯಾಟ್ಸ್‌ವುಮನ್ ರಿಚಾ ಘೋಷ್ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿರುವ ತಂಡವನ್ನು ಭಾನುವಾರ ಆಯ್ಕೆ ಮಾಡಲಾಗಿದ್ದು 15 ಮಂದಿಯ ಬಳಗದಲ್ಲಿ ರಿಚಾ ಘೋಷ್ ಒಬ್ಬರೇ ಹೊಸಬರು. ಹರಿಯಾಣದ 15 ವರ್ಷದ ಶಾಲಾ ವಿದ್ಯಾರ್ಥಿನಿ ಶಫಾಲಿ ವರ್ಮಾ ಇದೇ ಮೊದಲ ಬಾರಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕಳೆದ ಬಾರಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದರಿಂದ ಅವರಿಗೆ ಈ ಅವಕಾಶ ಲಭಿಸಿದೆ.

ಇತ್ತೀಚೆಗೆ ನಡೆದಿದ್ದ ಮಹಿಳೆಯರ ಚಾಲೆಂಜರ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ರಿಚಾ ಘೋಷ್ ಅಮೋಘ ಆಟ ಆಡಿದ್ದರು. 26 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಒಳಗೊಂಡ 36 ರನ್ ಗಳಿಸಿದ್ದರು.

ADVERTISEMENT

’ಒಂದು ವರ್ಷದ ಅವಧಿಯಲ್ಲಿ ಭಾರತ ತಂಡದಲ್ಲಿ ಆರು ಮಂದಿ ಹೊಸಬರಿಗೆ ಸ್ಥಾನ ನೀಡಲಾಗಿದೆ. ಈ ಹಿಂದೆ ಒಂದೇ ತಂಡವನ್ನು ತಿಂಗಳುಗಟ್ಟಲೆ ಆಡಿಸಲಾಗುತ್ತಿತ್ತು. ಆದರೆ 2017ರ ಏಕದಿನ ವಿಶ್ವಕಪ್ ನಂತರ ಪರಿಸ್ಥಿತಿ ಬದಲಾಗಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥೆ ಹೇಮಲತಾ ಕಲಾ ಹೇಳಿದರು.

ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡ: ವಿಶ್ವಕಪ್‌ ಟೂರ್ನಿಗೂ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ 16 ಮಂದಿಯ ಭಾರತ ತಂಡವನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ವಿಶ್ವಕಪ್‌ಗೆ ಆಯ್ಕೆ ಮಾಡಿದ ತಂಡದೊಂದಿಗೆ ನುಶತ್ ಪರ್ವೀನ್‌ಗೆ ಈ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್ ಒಳಗೊಂಡಿರುವ ತ್ರಿಕೋನ ಸರಣಿಯ ಜನವರಿ 31ರಂದು ಆರಂಭವಾಗಲಿದೆ.

ವಿಶ್ವಕಪ್‌ಗೂ ಮೊದಲು ತ್ರಿಕೋನ ಸರಣಿಯಲ್ಲಿ ಆಡುವುದರಿಂದ ತಂಡಕ್ಕೆ ಅನುಕೂಲ ಆಗಲಿದೆ ಎಂದು ಹರ್ಮನ್‌ಪ್ರೀತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ ತಂಡ: ಹರ್ಮನ್‌ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್‌, ಹರ್ಲೀನ್‌ ಡಿಯೋಲ್, ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್‌, ತಾನಿಯಾ ಭಾಟಿಯಾ, ಪೂನಂ ಯಾದವ್‌, ರಾಧಾ ಯಾದವ್‌, ರಾಜೇಶ್ವರಿ ಗಾಯಕವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್‌, ಅರುಂಧತಿ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.