ADVERTISEMENT

ಅಮ್ಮನಿಗೆ ಅಚ್ಚರಿ ನೀಡಲು ಹೊರಟಿದ್ದ ರಿಷಭ್ ಪಂತ್‌; ಅಪಘಾತಕ್ಕೆ ಕಾರಣ ಏನು?

ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಅಪಘಾತ

ಪಿಟಿಐ
Published 31 ಡಿಸೆಂಬರ್ 2022, 4:51 IST
Last Updated 31 ಡಿಸೆಂಬರ್ 2022, 4:51 IST
ರಿಷಭ್‌ ಪಂತ್‌ ಅವರ ಕಾರು ಸುಟ್ಟು ಹೋಗಿರುವುದು (ಒಳಚಿತ್ರದಲ್ಲಿ ರಿಷಭ್‌ ಪಂತ್) –ಪಿಟಿಐ ಚಿತ್ರಗಳು
ರಿಷಭ್‌ ಪಂತ್‌ ಅವರ ಕಾರು ಸುಟ್ಟು ಹೋಗಿರುವುದು (ಒಳಚಿತ್ರದಲ್ಲಿ ರಿಷಭ್‌ ಪಂತ್) –ಪಿಟಿಐ ಚಿತ್ರಗಳು   

ನವದೆಹಲಿ/ ಡೆಹ್ರಾಡೂನ್‌: ಹೊಸ ವರ್ಷಾಚರಣೆ ಮನೆಗೆ ಬಂದು ಅಮ್ಮನಿಗೆ ಅಚ್ಚರಿ ಉಂಟುಮಾಡಲು ಬಯಸಿದ್ದ ರಿಷಭ್‌ ಪಂತ್‌ ಅವರ ಪ್ರಯಾಣ ಅಪಘಾತದಲ್ಲಿ ಕೊನೆಗೊಂಡಿದೆ.

ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್‌, ತಮ್ಮ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ರೂರ್ಕಿಯಲ್ಲಿರುವ ಮನೆಗೆ ಪ್ರಯಾಣಿಸುತ್ತಿದ್ದರು. ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತ ಭೀಕರವಾಗಿದ್ದರೂ, ಅವರು ಗಂಭೀರ ಗಾಯ ದಿಂದ ಅದೃಷ್ಟವಶಾತ್‌ ಪಾರಾಗಿದ್ದಾರೆ.

‘ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರಿಗೆ ಪ್ರಜ್ಞೆಯಿತ್ತು. ನನ್ನಲ್ಲಿ ಚೆನ್ನಾಗಿಯೇ ಮಾತನಾಡಿದ್ದಾರೆ. ಅಮ್ಮನಿಗೆ ಅಚ್ಚರಿ ಉಂಟುಮಾಡಲು ಹೊರಟ್ಟಿದ್ದಾಗಿ ಹೇಳಿದ್ದಾರೆ‘ ಎಂದು ಅವರಿಗೆ ಮೊದಲು ಚಿಕಿತ್ಸೆ ನೀಡಿದ ಸಕ್ಷಮ್‌ ಆಸ್ಪತ್ರೆಯ ಡಾ. ಸುಶೀಲ್‌ ನಗರ್‌ ತಿಳಿಸಿದರು.

ADVERTISEMENT

ಪಂತ್‌ ಅವರನ್ನು ಮೊದಲು ರೂರ್ಕಿ ಬಳಿಯ ಸಕ್ಷಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಡೆಹ್ರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.

‘ಕಾಲು ಅಥವಾ ಕೈಯ ಮೂಳೆಗೆ ಯಾವುದೇ ಏಟಾಗಿಲ್ಲ ಎಂಬುದು ಎಕ್ಸ್‌ರೇ ವರದಿಯಲ್ಲಿ ತಿಳಿದುಬಂದಿದೆ. ಬಲಗಾಲಿನ ಮಂಡಿಯ ಲಿಗಮೆಂಟ್‌ (ಅಸ್ಥಿರಜ್ಜು) ಹರಿದಿರುವುದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಆದರೆ ಗಾಯದ ಗಂಭೀರತೆ ಎಷ್ಟು ಎಂಬುದು ಎಂಆರ್‌ಐ ಸ್ಕ್ಯಾನಿಂಗ್‌ ಬಳಿಕವೇ ತಿಳಿಯಲಿದೆ’ ಎಂದು ಹೇಳಿದ್ದಾರೆ.

ಲಿಗಮೆಂಟ್‌ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡರಿಂದ ಆರು ತಿಂಗಳುಗಳು ಬೇಕು. ಆದ್ದರಿಂದ ಪಂತ್‌ ಅವರು ಪೂರ್ಣ ಫಿಟ್‌ನೆಸ್‌ ಮರಳಿ ಪಡೆಯಲು ಕೆಲವು ತಿಂಗಳುಗಳು ಬೇಕಾಗಬಹುದು. ರಿಷಭ್‌ ಅವರ ಬೆನ್ನಿನ ಚರ್ಮ ಕಿತ್ತುಬಂದಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಬಗ್ಗೆ ಪ್ರತಿಕ್ರಿಯಿಸಿದ ಡಾ.ನಗರ್‌, ‘ಅದು ಬೆಂಕಿಯಿಂದ ಆಗಿರುವ ಸುಟ್ಟ ಗಾಯ ಅಲ್ಲ. ಕಾರಿನ ಗಾಜು ಒಡೆದು ಹೊರಗೆ ಬರುವ ಭರದಲ್ಲಿ ಅವರ ಬೆನ್ನು ರಸ್ತೆಗೆ ಉಜ್ಜಿದ್ದರಿಂದ ಚರ್ಮ ಕಿತ್ತುಬಂದಿದೆ’ ಎಂದು ಹೇಳಿದರು.

ತೂಕಡಿಸಿದ್ದೇ ಕಾರಣ: ಪಂತ್‌ ತೂಕಡಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಅಲ್ಪ ನಿದ್ದೆಗೆ ಜಾರಿದಾಗ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿ ಅವರು ಒಬ್ಬರೇ ಇದ್ದರು.

ಎಲ್ಲ ನೆರವು: ರಿಷಭ್‌ಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಬಿಸಿಸಿಐ ಹೇಳಿದೆ. ‘ರಿಷಭ್‌ ಅವರ ಕುಟುಂಬದ ಸದಸ್ಯರು ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆ ಬಿಸಿಸಿಐ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದೆ’ ಎಂದು ಮಂಡಳಿಯ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.