ರಿಷಭ್ ಪಂತ್
ರಾಯಿಟರ್ಸ್ ಚಿತ್ರ
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನದಾಟದ ವೇಳೆ ಗಾಯಗೊಂಡು ಪೆವಿಲಿಯನ್ ಸೇರಿದ್ದ ರಿಷಭ್ ಪಂತ್, ಎರಡನೇ ದಿನ ಕ್ರೀಸ್‌ಗೆ ಮರಳಿದರು.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಹಾಗೂ ಶಾರ್ದೂಲ್ ಠಾಕೂರ್ ಕ್ರೀಸ್‌ನಲ್ಲಿದ್ದರು. ನೆನ್ನೆ ಗಳಿಸಿದ್ದ ಮೊತ್ತಕ್ಕೆ 1 ರನ್ ಸೇರಿಸಿ ಜಡೇಜ (20 ರನ್) ಔಟಾದರು. ಶಾರ್ದೂಲ್ (40 ರನ್) ಊಟದ ವಿರಾಮಕ್ಕೆ ಸ್ವಲ್ಪ ಹೊತ್ತಿಗೂ ಮುನ್ನ ವಿಕೆಟ್ ಒಪ್ಪಿಸಿದರು.
ಹೀಗಾಗಿ, ಪಂತ್ ಕ್ರೀಸ್‌ಗೆ ಮರಳಬೇಕಾಯಿತು. ಅವರು ಅರ್ಧಶತಕ (54 ರನ್) ಗಳಿಸಿ ಔಟಾಗಿದ್ದಾರೆ.
ಸದ್ಯ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 350 ರನ್ ಗಳಿಸಿದೆ. ಇನ್ನೂ ಖಾತೆ ತೆರೆಯದ ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದಾರೆ.
ಪಂತ್, ಬುಧವಾರ 48 ಎಸೆತಗಳಲ್ಲಿ 37 ರನ್ ಗಳಿಸಿದ್ದರು.
ಕ್ರಿಸ್ ವೋಕ್ಸ್ ಹಾಕಿದ ಯಾರ್ಕರ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿ, ಗಾಯಗೊಂಡಿದ್ದರು. ಚೆಂಡು ಅವರ ಬಲ ಅಂಗಾಲಿಗೆ ಬಡಿದಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ಅವರಿಗೆ, ಪ್ರಥಮ ಚಿಕಿತ್ಸೆ ನೀಡಿದರೂ ಆಟ ಮುಂದುವರಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಪೆಟ್ಟು ಬಿದ್ದ ಜಾಗದಲ್ಲಿ ಬಾವು ಹೆಚ್ಚಿತ್ತು. ರಕ್ತಸ್ರಾವ ಕೂಡ ಆಗುತ್ತಿತ್ತು.
ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಅವರು ವಿಕೆಟ್‌ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದರು. ಧ್ರುವ್ ಜುರೇಲ್ ಅವರು ಕೀಪಿಂಗ್ ನಿರ್ವಹಿಸಿದ್ದರು.
ತೀವ್ರ ಪೆಟ್ಟಿನ ನಡುವೆಯೂ ಕ್ರೀಸ್‌ಗೆ ಮರಳಿರುವ ಪಂತ್ ಎದೆಗಾರಿಕೆಗೆ ಕ್ರಿಕೆಟ್ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿನ ಪ್ರೇಕ್ಷಕರು ಕರತಾಡನದ ಮೂಲಕ ಸ್ವಾಗತಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ. ಪಂತ್ ಅವರ ಚಿತ್ರವನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಇಂಗ್ಲೆಂಡ್ ತಂಡವೂ ಬೆನ್ನುತಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.