ರಿಷಭ್ ಪಂತ್
-ಪಿಟಿಐ ಚಿತ್ರ
ಮ್ಯಾಂಚೆಸ್ಟರ್: ಕಾಲ್ಬೆರಳು ಮುರಿತಕ್ಕೆ ಒಳಗಾಗಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಬುಧವಾರ ಬ್ಯಾಟಿಂಗ್ ಮಾಡುವಾಗ 27 ವರ್ಷದ ರಿಷಭ್ ಪಂತ್ ಅವರು ಗಾಯಗೊಂಡು ನಿವೃತ್ತಿಯಾಗಿದ್ದರು.
48 ಎಸೆತಗಳಲ್ಲಿ 37 ರನ್ ಗಳಿಸಿದ ರಿಷಭ್ ಅವರು ಕ್ರಿಸ್ ವೋಕ್ಸ್ ಹಾಕಿದ ಯಾರ್ಕರ್ ಎಸೆತದಲ್ಲಿ ಗಾಯಗೊಂಡಿದ್ದರು. ವೇಗವಾಗಿ ಸಾಗಿಬಂದ ಚೆಂಡನ್ನು ರಿವರ್ಸ್ ಸ್ವೀಪ್ ಮಾಡಲು ಪಂತ್ ಪ್ರಯತ್ನಿಸಿದ್ದರು. ಆದರೆ, ಚೆಂಡು ಅವರ ಬಲ ಅಂಗಾಲಿಗೆ ಬಡಿದಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ಪಂತ್‌ಗೆ ಫಿಸಿಯೊ ಪ್ರಥಮ ಚಿಕಿತ್ಸೆ ನೀಡಿದ್ದರು. ಆದರೆ, ಪೆಟ್ಟು ಬಿದ್ದ ಜಾಗದಲ್ಲಿ ಊತ ಹೆಚ್ಚಿತು. ರಕ್ತಸ್ರಾವ ಕೂಡ ಆಗುತ್ತಿತ್ತು. ಆದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಗಾಲ್ಫ್ ಕಾರ್ಟ್ ವಾಹನದಲ್ಲಿ ಕೂರಿಸಿಕೊಂಡು ಡ್ರೆಸಿಂಗ್ ರೂಮ್‌ಗೆ ಕರೆದೊಯ್ಯಲಾಗಿತ್ತು.
‘ಪಂತ್ ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಸ್ಕ್ಯಾನ್ ವರದಿ ಲಭ್ಯವಾಗಿದ್ದು, ಪಂತ್ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಪಂತ್ ಬದಲಿಗೆ ಇಶಾನ್ ಕಿಶನ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಪಂತ್ ಅವರು ವಿಕೆಟ್ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದರು. ಧ್ರುವ್ ಜುರೇಲ್ ಅವರು ಕೀಪಿಂಗ್ ನಿರ್ವಹಿಸಿದ್ದರು. ಸದ್ಯ ಪಂತ್ ಸರಣಿಯಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಇತ್ತೀಚೆಗೆ ನಾಟಿಂಗ್‌ಹ್ಯಾಮ್‌ಶೈರ್ ಪರ ಎರಡು ಕೌಂಟಿ ಪಂದ್ಯಗಳನ್ನು ಆಡಿದ್ದ 26 ವರ್ಷದ ಇಶಾನ್ ಕಿಶನ್, ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ‘ಎ’ ತಂಡದ ಭಾಗವಾಗಿದ್ದರು.
ಸದ್ಯ ತಂಡದಲ್ಲಿರುವ ಮತ್ತೊಬ್ಬ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರನ್ನು ಪ್ರಸ್ತುತ ಪಂದ್ಯಕ್ಕೆ ಆಯ್ಕೆ ಮಾಡಿಲ್ಲ.
ಟೀಂ ಇಂಡಿಯಾಗೆ ಗಾಯದ ಸಮಸ್ಯೆ
ಎಡ ಮೊಣಕಾಲಿನ ನೋವಿನಿಂದಾಗಿ ಭಾರತದ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಗಾಯಾಳಾಗಿದ್ದು ನಾಲ್ಕನೇ ಟೆಸ್ಟ್ ಆಯ್ಕೆಗೆ ಲಭ್ಯರಿಲ್ಲ.
ನಿತೀಶ್ ಕುಮಾರ್ ಎರಡು ಮತ್ತು ಮೂರನೇ ಟೆಸ್ಟ್‌ನಲ್ಲಿ ಆಡಿದ್ದರು. ಈಚೆಗೆ ಜಿಮ್‌ನಲ್ಲಿ ಅಭ್ಯಾಸದ ವೇಳೆ ಅವರು ಗಾಯಗೊಂಡಿದ್ದರು. ಸ್ಕ್ಯಾನ್ ನಂತರ ಬಲಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು) ಹಾನಿಯಾಗಿರುವುದು ಪತ್ತೆಯಾಗಿದ್ದು, ಅವರು ತವರಿಗೆ ಮರಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿತ್ತು.
ಕಳೆದ ವಾರ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಅರ್ಷದೀಪ್ ಸಿಂಗ್ ಅವರ ಎಡಗೈ ಹೆಬ್ಬೆರಳಿಗೆ ನೋವು ಕಾಣಿಸಿಕೊಂಡಿತ್ತು. ಅವರು ಪ್ರವಾಸದಲ್ಲಿ ಇದುವರೆಗೆ ಒಂದೂ ಟೆಸ್ಟ್ ಆಡಿಲ್ಲ. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೈಕೆಯ ಮೇಲೆ ನಿಗಾ ಇಟ್ಟಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.