ADVERTISEMENT

ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ರಾಬರ್ಟ್ಸ್‌ ರಾಜೀನಾಮೆ

ಪಿಟಿಐ
Published 16 ಜೂನ್ 2020, 6:55 IST
Last Updated 16 ಜೂನ್ 2020, 6:55 IST
ಕೆವಿನ್ ರಾಬರ್ಟ್ಸ್‌
ಕೆವಿನ್ ರಾಬರ್ಟ್ಸ್‌   

ಮೆಲ್ಬರ್ನ್: ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್ ರಾಬರ್ಟ್ಸ್‌ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ.

ಲೈವ್ ಸ್ಟ್ರೀಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಸ್ಥ ಇಯರ್ಲ್ ಎಡ್ಡಿಂಗ್ಸ್‌, ’ಸಿಎ ಮಂಡಳಿಯು ರಾಬರ್ಟ್ಸ್‌ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿದೆ. ನಿಕ್ ಹಾಕ್ಲೆ ಅವರನ್ನು ತತ್‌ಕ್ಷಣದಿಂದ ಹಂಗಾಮಿಯಾಗಿ ನೇಮಕ ಮಾಡಲಾಗಿದೆ‘ ಎಂದರು.

ADVERTISEMENT

’ಬೇರೆಲ್ಲ ರಾಷ್ಟ್ರೀಯ ಕ್ರೀಡೆಗಳಂತೆ ಕ್ರಿಕೆಟ್ ಕೂಡ ಕಠಿಣ ಸಮಯವನ್ನು ಎದುರಿಉತ್ತಿದೆ. ಹಲವಾರು ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಕೋವಿಡ್ –19 ದಾಳಿಯಿಂದಾಗಿ ಬಹಳಷ್ಟು ತೊಂದರೆಗಳು, ಸವಾಲುಗಳು ಎದುರಾಗಿವೆ‘ ಎಂದು ಎಡ್ಡಿಂಗ್ಸ್‌ ಹೇಳಿದ್ದಾರೆ.

’2018ರಲ್ಲಿ ತಮ್ಮ ಸ್ಥಾನ ವಹಿಸಿಕೊಂಡ ನಂತರ ಕೆವಿನ್ ರಾಬರ್ಟ್ಸ್‌ ಅವರು ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಹೋದ ಕೆಲವು ತಿಂಗಳುಗಳಿಂದ ಕ್ಲಿಷ್ಟ ಸಂದರ್ಭಗಳನ್ನು ಎದುರಿಸುವಲ್ಲಿ ಅವರು ಬಹಳಷ್ಟು ಶ್ರಮಪಟ್ಟಿದ್ದಾರೆ. ತತ್ವ ಸಿದ್ಧಾಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ವ್ಯಕ್ತಿ ರಾಬರ್ಟ್ಸ್‌, ಕ್ರಿಕೆಟ್‌ನ ಹಿತಕ್ಕಾಗಿ ಉತ್ತಮ ಕಾಣಿಕೆ ನೀಡಿದ್ದಾರೆ. ಅವರ ಭವಿಷ್ಯವು ಚೆನ್ನಾಗಿರಲಿ‘ ಎಂದು ಹಾರೈಸಿದರು.

ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ರಾಬರ್ಟ್ಸ್‌, ’ನಾನು ಅತ್ಯಂತ ಪ್ರೀತಿಸುವ ಕ್ರಿಕೆಟ್ ಆಟದ ಆಡಳಿತದ ಮುಖ್ಯ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಿದ್ದು ಸಂತಸ ತಂದಿದೆ. ಇಲ್ಲಿಯವರೆಗೆ ಮಾಡಿರುವ ಸಾಧನೆಗಳು ತೃಪ್ತಿ ತಂದಿವೆ. ಕ್ರಿಕೆಟ್ ಸಮುದಾಯದೊಂದಿಗೆ ಜೀವನಪೂರ್ತಿ ಸಂಪರ್ಕದಿಂದರಲು ಈ ಕಾರ್ಯಗಳು ಕಾರಣವಾಗಿವೆ‘ ಎಂದು ರಾಬರ್ಟ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.