ADVERTISEMENT

ಯೋ ಯೋ ಟೆಸ್ಟ್‌ ರೋಹಿತ್ ಪಾಸ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 17:50 IST
Last Updated 20 ಜೂನ್ 2018, 17:50 IST
ರೋಹಿತ್ ಶರ್ಮಾ ಅವರು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ಚಿತ್ರ.
ರೋಹಿತ್ ಶರ್ಮಾ ಅವರು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ಚಿತ್ರ.   

ಬೆಂಗಳೂರು: ಹೋದ ನಾಲ್ಕು ದಿನಗಳಿಂದ ಕುತೂಹಲ ಕೆರಳಿಸಿದ್ದ ರೋಹಿತ್ ಶರ್ಮಾ ಯೋ ಯೋ ಟೆಸ್ಟ್‌ ಪ್ರಹಸನಕ್ಕೆ ಬುಧವಾರ ತೆರೆ ಬಿದ್ದಿದೆ.ಫಿಟ್‌ನೆಸ್‌ ಪರೀಕ್ಷೆಗೆ ನಿಗದಿಪಡಿಸಲಾಗಿದ್ದ 16.1 ಪಾಯಿಂಟ್ಸ್‌ ಅರ್ಹತಾಮಟ್ಟವನ್ನು ಮುಟ್ಟುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇದರಿಂದಾಗಿ ಅವರು ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಸರಣಿ ಆಡಲು ಪ್ರವಾಸಕ್ಕೆ ತೆರಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಇದರಿಂದಾಗಿ ಅಜಿಂಕ್ಯ ರಹಾನೆ ಅವರು ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ತಪ್ಪಿಸಿಕೊಂಡಂತಾಗಿದೆ.

ಮಧ್ಯಾಹ್ನ ಇಲ್ಲಿಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ನಡೆದ ಟೆಸ್ಟ್‌ನ ನಂತರ ಅವರು ಈ ವಿಷಯವನ್ನು ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ.

ADVERTISEMENT

ಜೂನ್ 15ರಂದು ಇಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ, ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿ ಮತ್ತಿತರ ಆಟಗಾರರ ಪರೀಕ್ಷೆ ನಡೆದಿತ್ತು. ಅದರಲ್ಲಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಅನುತ್ತೀರ್ಣರಾಗಿದ್ದರು.

ವೈಯಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ರೋಹಿತ್ ಶರ್ಮಾ ಟೆಸ್ಟ್‌ನಲ್ಲಿ ಭಾಗಿಯಾಗಿರಲಿಲ್ಲ. ಅವರು ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದರು. 17ರಂದು ಅವರು ಟೆಸ್ಟ್‌ಗೆ ಹಾಜರಾಗಬೇಕಿತ್ತು. ಆವತ್ತು ಕೂಡ ಅವರು ಪರೀಕ್ಷೆಗೆ ಹಾಜರಾಗಿರಲಿಲ್ಲ.

2019ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಆದ್ದರಿಂದ ಅಲ್ಲಿಯ ಪಿಚ್‌ಗಳು, ಹವಾಗುಣಗಳನ್ನು ಅರಿಯಲು ಭಾರತ ತಂಡಕ್ಕೆ ಈ ಪ್ರವಾಸವು ಮಹತ್ವದೆನಿಸಿದೆ.

ತಂಡವು ಜೂನ್ 26ರಿಂದ ಐರ್ಲೆಂಡ್ ಎದುರು ಟ್ವೆಂಟಿ –20 ಸರಣಿ ಆಡಲಿದೆ. ನಂತರ ಇಂಗ್ಲೆಂಡ್ ತಂಡದ ಎದುರು ಟ್ವೆಂಟಿ–20, ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಆಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.