ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಸರಣಿ: ಎರಡು ಟೆಸ್ಟ್‌ಗಳಿಗೆ ರೋಹಿತ್, ಇಶಾಂತ್‌ ಲಭ್ಯ ಇಲ್ಲ

ಉಳಿದ ಎರಡು ಪಂದ್ಯಗಳಿಗೂ ಅನುಮಾನ

ಪಿಟಿಐ
Published 24 ನವೆಂಬರ್ 2020, 15:41 IST
Last Updated 24 ನವೆಂಬರ್ 2020, 15:41 IST
ರೋಹಿತ್‌ ಶರ್ಮಾ–ಪಿಟಿಐ ಚಿತ್ರ
ರೋಹಿತ್‌ ಶರ್ಮಾ–ಪಿಟಿಐ ಚಿತ್ರ   

ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಹಾಗೂ ವೇಗಿ ಇಶಾಂತ್‌ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಲಭ್ಯ ಇರುವುದಿಲ್ಲ. ಗಾಯದಿಂದ ಬಳಲುತ್ತಿರುವ ಇಬ್ಬರೂ ಫಿಟ್‌ ಆಗಲು ಕನಿಷ್ಠ ಒಂದು ತಿಂಗಳ ಅಗತ್ಯವಿರುವುದರಿಂದ, ಉಳಿದ ಎರಡು ಪಂದ್ಯಗಳಲ್ಲೂ ಅವರು ಆಡುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಇಬ್ಬರೂ ಆಟಗಾರರು ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಶುಕ್ರವಾರದಿಂದ ನಡೆಯಲಿರುವ ಏಕದಿನ ಸರಣಿಯಿಂದ ಈಗಾಗಲೇ ಅವರು ಹೊರಗುಳಿದಿದ್ದಾರೆ.

ರೋಹಿತ್‌ ಹಾಗೂ ಇಶಾಂತ್‌ ಡಿಸೆಂಬರ್ 17ರಿಂದ ನಡೆಯುವ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿರುವ ಕೋವಿಡ್‌–19 ತಡೆ ಕ್ವಾರಂಟೈನ್‌ ನಿಯಮಗಳ ಹಿನ್ನೆಲೆಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.

ADVERTISEMENT

‘ರೋಹಿತ್‌ ಹಾಗೂ ಇಶಾಂತ್‌ ಸಂಪೂರ್ಣ ಫಿಟ್‌ ಆಗಲು ಕನಿಷ್ಠ ಮೂರರಿಂದ ನಾಲ್ಕು ವಾರಗಳು ಬೇಕು ಎಂದು ಎನ್‌ಸಿಎ ವರದಿ ನೀಡಿದೆ‘ ಎಂದು ಬಿಸಿಸಿಐಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನಾನು ಹ್ಯಾಮ್‌ಸ್ಟ್ರಿಂಗ್‌ ಗಾಯದಿಂದ ಚೇತರಿಸಿಕೊಂಡಿದ್ದೇನೆ. ದೈಹಿಕ ಫಿಟ್‌ನೆಸ್‌ ಕಾಯ್ದುಕೊಳ್ಳಲು ಎನ್‌ಸಿಎಗೆ ಬಂದಿದ್ದೇನೆ‘ ಎಂದು ರೋಹಿತ್‌ ಅವರು ಕಳೆದ ವಾರ ಹೇಳಿದ್ದರು.

ಇಶಾಂತ್‌ ಅವರು ಭುಜದ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

‘ಇಬ್ಬರೂ ಆಟಗಾರರು ಸದ್ಯ ಆಸ್ಟ್ರೇಲಿಯಾಕ್ಕೆ ತೆರಳಿದರೂ ಕಠಿಣ ಕ್ವಾರಂಟೈನ್‌ ನಿಯಮಗಳಿಗೆ ಒಳಪಡಬೇಕಾಗುತ್ತದೆ. ಅಂದರೆ 14 ದಿನಗಳ ಅವಧಿಯಲ್ಲಿ ಯಾವುದೇ ತರಬೇತಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ಅವರ ಅಭ್ಯಾಸಕ್ಕೆ ಅನುವು ಮಾಡಿಕೊಡಲು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಅಲ್ಲಿಯ ಸರ್ಕಾರದ ಮನವೊಲಿಸಬೇಕಾಗುತ್ತದೆ‘ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.