ADVERTISEMENT

ರೋ–ಕೊ ಭವಿಷ್ಯ: ಸಂದೇಹಕ್ಕೆ ‘ತಿಲಾಂಜಲಿ’

ಪಿಟಿಐ
Published 1 ಡಿಸೆಂಬರ್ 2025, 16:17 IST
Last Updated 1 ಡಿಸೆಂಬರ್ 2025, 16:17 IST
   

ಬೆಂಗಳೂರು: ರೋಹಿತ್‌ ಶರ್ಮಾ ಅವರು ಭಾನುವಾರ ರಾಂಚಿಯಲ್ಲಿ ಏಕದಿನ ಪಂದ್ಯಗಳಲ್ಲಿ 60ನೇ ಅರ್ಧಶತಕ ಬಾರಿಸಿದ ವೇಳೆ ವಿರಾಟ್‌ ಕೊಹ್ಲಿ ಅವರು ಡ್ರೆಸಿಂಗ್ ರೂಮ್‌ನತ್ತ ಸಿಟ್ಟಿನ ನೋಟ ಬೀರಿದರು. ವಿರಾಟ್‌ 52ನೇ ಏಕದಿನ ಶತಕ ಬಾರಿಸಿದಾಗ, ರೋಹಿತ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಪ್ಪಾಳೆ ತಟ್ಟಿ ಹಿಂದಿ ಭಾಷೆಯಲ್ಲಿ ಆ ಸಂದರ್ಭಕ್ಕೆ ನಾನಾ ಅರ್ಥ ಬರುವ ಮಾತನ್ನು ಹರಿಬಿಟ್ಟರು.

ಎರಡು ಮಾದರಿಗಳಿಂದ ನಿವೃತ್ತರಾದ ಮೇಲೆ ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಅನುಮಾನಿಸುವವರಿಗೆ ಈ ಇಬ್ಬರು ಅನುಭವಿಗಳ ಪ್ರತಿಕ್ರಿಯೆ ಸಂದೇಶದಂತಿತ್ತು.

ಈ ಹಿಂದೆ ತಮ್ಮ ಕ್ರೀಡಾಜೀವನದುದ್ದಕ್ಕೂ ಈ ಅನುಭವಿ ತಾರೆಗಳ ವೈಯಕ್ತಿಕ ಸಂಬಂಧ ತಂಡದ ಸಹ ಆಟಗಾರರ ಜೊತೆ ಇರುವುದಕ್ಕಿಂತ ಹೆಚ್ಚಿಗೆ ಇರಲಿಲ್ಲ. ಈಗ ಇವರು ಒಬ್ಬರಿಗೊಬ್ಬರು ಅರ್ಥಪೂರ್ಣ ಬೆಂಬಲ ನೀಡುತ್ತಿದ್ದಾರೆ.

ADVERTISEMENT

ರೋಹಿತ್ ಎಂದಿನಂತೆ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ವಯಸ್ಸಾಗುತ್ತಿದ್ದರೂ ಕೊಹ್ಲಿ ಅವರು ಸಂದರ್ಭಕ್ಕೆ ಹೊಂದಿಕೊಂಡು ಆಡುವ ಸರಾಗ ಆಟವು ಸ್ವಲ್ಪವೂ ಕಳೆಗುಂದಿಲ್ಲ.

ಕೊಹ್ಲಿ ಮತ್ತು ರೋಹಿತ್ ಅವರಿಬ್ಬರೂ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಅವರ ವಯಸ್ಸು ಕ್ರಮವಾಗಿ 37 ಮತ್ತು 38. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್‌ಗೆ ಅವರಿಬ್ಬರೂ ಪ್ರಸ್ತುತವಾಗಲಿದ್ದಾರೆಯೇ? ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು, ಮುಖ್ಯ ಕೋಚ್‌, ಮುಖ್ಯ ಆಯ್ಕೆಗಾರ ಅವರನ್ನು ಒಳಗೊಂಡ ಸಭೆ ನಡೆಯಲಿದೆ ಎನ್ನುವ ವರದಿಗಳ ಮಧ್ಯೆಯೇ ತಂಡದ ಮಾಜಿ ನಾಯಕರು ಅಮೋಘವಾಗಿ ಆಡಿದ್ದಾರೆ.

ಇತ್ತೀಚಿನ ಪಂದ್ಯಗಳಲ್ಲಿ ಅವರ ಆಟದ ಪ್ರದರ್ಶನ ಸದ್ಯೋಭವಿಷ್ಯದಲ್ಲಿ ಅವರ ಏಕದಿನ ಭವಿಷ್ಯದ ಪ್ರಶ್ನೆಗಳಿಗೆ ತೆರೆಹಾಡಿದಂತಿದೆ. ರೋಹಿತ್ ಕೊನೆಯ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 0, 73, 121 (ಅಜೇಯ) ಮತ್ತು 57 ರನ್ ಬಾರಿಸಿದ್ದಾರೆ. ಕೊಹ್ಲಿ, 0,0, 74 (ಅಜೇಯ) ಮತ್ತು 135 ರನ್ ಹೊಡೆದಿದ್ದಾರೆ. ರೋಹಿತ್ ಎಂದಿನ ರೀತಿಯಲ್ಲಿ ಆಕ್ರಮಣಕಾರಿಯಾಗಿದ್ದರೆ, ಕೊಹ್ಲಿ ಹಳೆಯ ಲಯದಲ್ಲೇ  ರನ್ ಹರಿಸುತ್ತಿದ್ದಾರೆ. ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಇರುವ ಅನುಮಾನಗಳನ್ನೆಲ್ಲಾ ಬದಿಗೆ ಸರಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ 17 ರನ್‌ಗಳಿಂದ ಗೆದ್ದ ನಂತರ ತಂಡದ ಸಹಾಯಕ ಕೋಚ್ ಸಿತಾಂಶು ಕೊಟಕ್ ಅವರ ಮಾತಿನಲ್ಲೂ ಇಂಥದ್ದೇ ಧ್ವನಿ ಕಾಣಿಸಿತು. ‘ಇಂಥ ಮಾತುಗಳು ನಮಗೆ ಏಕೆ ಅಗತ್ಯವಿದೆಯೋ ಅರ್ಥವಾಗುತ್ತಿಲ್ಲ. ಅವರು (ಕೊಹ್ಲಿ) ಚೆನ್ನಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಅವರ ಭವಿಷ್ಯದ ಬಗ್ಗೆ ಮಾತನಾಡುವ ಅಗತ್ಯವೇನಿದೆ? ಅವರ ಆಡುವ ರೀತಿ ನೋಡಿದರೆ, ಅವರ ಫಿಟ್ನೆಸ್ ನೋಡಿದರೆ... ಯಾವುದೇ ರೀತಿಯ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ತಂಡದ ಚಿಂತಕರ ಚಾವಡಿ 2027ರ ವಿಶ್ವಕಪ್‌ನಷ್ಟು ದೂರ ಈಗ ಯೋಚಿಸುತ್ತಿಲ್ಲ. ರೋಹಿತ್ ಮತ್ತು ಕೊಹ್ಲಿ ಅವರ ಸುತ್ತ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಬ್ಯಾಟಿಂಗ್ ಕೋಚ್ ಸಹ ಆಗಿರುವ ಕೊಟಕ್ ಹೇಳಿದ್ದಾರೆ.

‘ಇಂಥ ವಿಷಯಗಳು (ಭವಿಷ್ಯದ ಚರ್ಚೆ) ನಡೆಯಲೇಬಾರದಿತ್ತು. ಅವರಿಬ್ಬರೂ ಅಮೋಘ ಆಟಗಾರರು. ಉತ್ತಮವಾಗಿ ಆಡುತ್ತಿದ್ದಾರೆ. ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. 2027ರ ವಿಶ್ವಕಪ್‌ ಬಗ್ಗೆ ಮಾತನಾಡುತ್ತೇವೆ ಎಂಬ ಯೋಚನೆಯನ್ನೂ ಮಾಡಿಲ್ಲ’ ಎಂದಿದ್ದಾರೆ.

ಕೊಟಕ್ ಹೇಳಿಕೆಗಳು ಸತ್ಯಕ್ಕೆ ಹತ್ತಿರವಾಗಿಯೇ ಇದೆ. ಸದ್ಯ ತಂಡದ ಚಿತ್ತ ಭಾರತ ಮತ್ತು ಶ್ರೀಲಂಕಾದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನತ್ತ ನೆಟ್ಟಿದೆ. ಅದಕ್ಕೆ ಮೊದಲು ಭಾರತದ ಮುಂದೆ ಐದು ಏಕದಿನ ಪಂದ್ಯಗಳು ಇವೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಮತ್ತು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳು. ಜುಲೈನಲ್ಲಿ ತಂಡವು ಇಂಗ್ಲೆಂಡ್ ವಿರುದ್ಧ 50 ಓವರುಗಳ ಮೂರು ಪಂದ್ಯಗಳನ್ನು ಆಡಲಿದೆ.

ಸದ್ಯಕ್ಕಂತೂ ಕೊಹ್ಲಿ, ರೋಹಿತ್‌ ಅವರ ಆಯ್ಕೆಯ ಬಗೆಗಿನ ಚರ್ಚೆಗಳು ಬದಿಗೆಸರಿದಿವೆ. ವಿಶೇಷವಾಗಿ ಇತ್ತೀಚಿನ ಪಂದ್ಯಗಳಲ್ಲಿ ಅವರು ಆಡಿದ ರೀತಿಯಿಂದ. ಆಟದಲ್ಲಾಗಲಿ, ವೃತ್ತಿಪರತೆಯಲ್ಲಾಗಲಿ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.