ADVERTISEMENT

ವಾಂಖೆಡೆ ಕ್ರೀಡಾಂಗಣದ ಸ್ಟ್ಯಾಂಡ್‌ಗೆ ರೋಹಿತ್ ಹೆಸರು

ಪಿಟಿಐ
Published 16 ಮೇ 2025, 15:33 IST
Last Updated 16 ಮೇ 2025, 15:33 IST
ವಾಂಖೆಡೆ ಕ್ರೀಡಾಂಗಣದ ಸ್ಟ್ಯಾಂಡ್‌ ಒಂದಕ್ಕೆ ಶುಕ್ರವಾರ ರೋಹಿತ್ ಶರ್ಮಾ ಅವರು ಇಡಲಾಯಿತು.
ವಾಂಖೆಡೆ ಕ್ರೀಡಾಂಗಣದ ಸ್ಟ್ಯಾಂಡ್‌ ಒಂದಕ್ಕೆ ಶುಕ್ರವಾರ ರೋಹಿತ್ ಶರ್ಮಾ ಅವರು ಇಡಲಾಯಿತು.   

ಮುಂಬೈ: ಇಲ್ಲಿನ ಹೆಗ್ಗುರುತಾದ ವಾಂಖೆಡೆ ಕ್ರೀಡಾಂಗಣದ ಒಂದು ಸ್ಟ್ಯಾಂಡ್‌ಗೆ ಶುಕ್ರವಾರ ದಿಗ್ಗಜ ಆಟಗಾರ ರೋಹಿತ್ ಶರ್ಮಾ ಅವರ ಹೆಸರಿಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೋಹಿತ್, ತಮ್ಮ ಹೆಸರಿನ ಸ್ಟ್ಯಾಂಡ್‌ ಇರುವ ಕ್ರೀಡಾಂಗಣದಲ್ಲಿ ಭಾರತ ತಂಡದ ಜರ್ಸಿ ಧರಿಸಿ ಏಕದಿನ ಪಂದ್ಯ ಆಡುವುದು ವಿಶೇಷ ಅನುಭವ ಎನಿಸಲಿದೆ ಎಂದು ಹೇಳಿದ್ದಾರೆ.

ಮುಂಬೈ ಕ್ರಿಕೆಟ್‌ ಸಂಸ್ಥೆ ಶುಕ್ರವಾರ ಮೂರು ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಿದೆ. ಇನ್ನೆರಡು ಸ್ಟ್ಯಾಂಡ್‌ಗಳಿಗೆ ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಶರದ್‌ ಪವಾರ್ ಅವರ ಹೆಸರುಗಳನ್ನು ಇಡಲಾಗಿದೆ.

‘ಇಂಥ (ಸ್ಟ್ಯಾಂಡ್‌ಗೆ ಹೆಸರು ಇಡುವ) ಕಾರ್ಯಕ್ರಮವನ್ನು ಕನಸುಮನಸಿನಲ್ಲೂ ಎಣಿಸಿರಲಿಲ್ಲ. ನಾವು ಸಾಕಷ್ಟು ಮೈಲಿಗಲ್ಲುಗಳನ್ನು ಸಾಧಿಸಲು ಯತ್ನಿಸುತ್ತೇವೆ. ಆದರೆ ಇಂಥ ಕಾರ್ಯಕ್ರಮ ವಿಶೇಷವಾದುದು. ವಾಂಖೆಡೆ ಕ್ರೀಡಾಂಗಣ ಕ್ರಿಕೆಟ್‌ನ ಹೆಗ್ಗುರುತು. ಬಹಳಷ್ಟು ಸ್ಮರಣೀಯ ಕ್ಷಣಗಳು ಇಲ್ಲಿ ಸೃಷ್ಟಿಯಾಗಿವೆ’ ಎಂದು ರೋಹಿತ್ ಪ್ರತಿಕ್ರಿಯಿಸಿದರು. ಮೇ 7ರಂದು ರೋಹಿತ್ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ADVERTISEMENT

‘ಆಟದ ದಿಗ್ಗಜರ ಜೊತೆ ಮತ್ತು ವಿಶ್ವದ ಉತ್ತಮ ರಾಜಕೀಯ ನಾಯಕನ ಜೊತೆ ನನ್ನ ಹೆಸರೂ ಇಲ್ಲಿ ಇದ್ದು, ನನ್ನ ಭಾವನೆ ವ್ಯಕ್ತಪಡಿಸಲಾಗದು. ಇದಕ್ಕೆ ತುಂಬಾ ಆಭಾರಿಯಾಗಿದ್ದೇನೆ’ ಎಂದು ಅವರು ಹೇಳಿದರು.

‘ಈವರೆಗಿನ ವೃತ್ತಿ ಜೀವನದಲ್ಲಿ ತಮಗಾಗಿ ಮಾಡಿದ ತ್ಯಾಗಕ್ಕಾಗಿ ಅವರು ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನನ್ನ ಕುಟುಂಬ ಸದಸ್ಯರು, ಪೋಷಕರು, ಸೋದರ, ಪತ್ನಿ ಎಲ್ಲರೂ ಇದ್ದಾರೆ. ಅವರು ನನಗೆ ಮಾಡಿದ ತ್ಯಾಗಕ್ಕಾಗಿ ಕೃತಜ್ಞನಾಗಿದ್ದೇನೆ’ ಎಂದರು.

ದಿವೇಚಾ ಪೆವಿಲಿಯನ್ ಲೆವೆಲ್‌ 3ಗೆ ರೋಹಿತ್ ಹೆಸರು ಇಡಲಾಗಿದೆ. ‘ರೋಹಿತ್‌ ವಾಂಖೆಡೆಯ ನೆಚ್ಚಿನ ಪುತ್ರರಲ್ಲಿ ಒಬ್ಬರು. ಇದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯ ಹೆಗ್ಗುರುತು’ ಎಂದು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.