ADVERTISEMENT

IPL-2020 | RCB vs MI: ಅಗ್ರಸ್ಥಾನದ ಮೇಲೆ ವಿರಾಟ್ ಬಳಗದ ಕಣ್ಣು

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಮುಂಬೈ ಇಂಡಿಯನ್ಸ್‌ ಮುಖಾಮುಖಿ ಇಂದು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 12:18 IST
Last Updated 28 ಅಕ್ಟೋಬರ್ 2020, 12:18 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಅಬುಧಾಬಿ: ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ‘ಹಾಲಿ ಚಾಂಪಿಯನ್’ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.

ಈ ಸಲದ ಟೂರ್ನಿಯ ಮೊದಲ ಸುತ್ತಿನಲ್ಲಿ ಬೆಂಗಳೂರು ತಂಡವು ಸೂಪರ್ ಓವರ್‌ನಲ್ಲಿ ಮುಂಬೈ ಎದುರು ಗೆದ್ದಿತ್ತು. ಅದರ ನಂತರದ ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಬಳಗವು ತನ್ನ ಶಕ್ತಿವರ್ಧನೆ ಮಾಡಿಕೊಳ್ಳುತ್ತ ಬಂದಿದೆ. ಮುಂಬೈ ಕೂಡ ಅಗ್ರಪಟ್ಟದಲ್ಲಿದೆ. ಆದರೆ ನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವುದು ತಂಡದಲ್ಲಿ ತುಸು ಚಿಂತೆ ಮೂಡಿಸಿದೆ.

ಆದರೆ ಶರ್ಮಾ ಅನುಪಸ್ಥಿತಿಯಲ್ಲಿ ಕೀರನ್ ಪೊಲಾರ್ಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ADVERTISEMENT

ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್, ಪೊಲಾರ್ಡ್ ಮತ್ತು ಪಾಂಡ್ಯ ಸಹೋದರರು ತಂಡದ ಬ್ಯಾಟಿಂಗ್‌ಗೆ ಆಸರೆಯಾಗಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಪ್ಯಾಟಿನ್ಸನ್ ಮತ್ತು ರಾಹುಲ್ ಚಾಹರ್ ಮೇಲುಗೈ ಸಾಧಿಸುತ್ತಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಎದುರು ಮುಂಬೈ ಸೋತಿತ್ತು. ಆದ್ದರಿಂದ ಗೆಲುವಿನ ಹಳಿಗೆ ಮರಳುವ ಮತ್ತು ಆರ್‌ಸಿಬಿ ಎದುರು ಮುಯ್ಯಿ ತೀರಿಸಿಕೊಳ್ಳುವತ್ತ ಮುಂಬೈ ಚಿತ್ತ ಇದೆ. ಈ ಪಂದ್ಯದಲ್ಲಿಯೂ ರೋಹಿತ್ ಕಣಕ್ಕಿಳಿಯುವುದು ಅನುಮಾನ.

ವಿರಾಟ್ ಕೊಹ್ಲಿ ಬಳಗವು ಕೂಡ ತನ್ನ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ಆರಂಭಿಕ ಜೋಡಿ ಆ್ಯರನ್ ಫಿಂಚ್ ಮತ್ತು ದೇವದತ್ತ ಪಡಿಕ್ಕಲ್ ಅವರು ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ, ಕೊಹ್ಲಿ ಅರ್ಧಶತಕ ಮತ್ತು ಎಬಿ ಡಿವಿಲಿಯರ್ಸ್ ಬ್ಯಾಟಿಂಗ್‌ನಿಂದಾಗಿ ತಂಡವು ಗೌರವಯುತ ಮೊತ್ತ ಗಳಿಸಿತ್ತು. ಆದರೆ ಮಧ್ಯಮ ಕ್ರಮಾಂಕ ವೈಫಲ್ಯದಿಂದಾಗಿ ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ರನ್‌ ಗಳಿಕೆಯಾಗಿರಲಿಲ್ಲ.

ಆದರೆ ಈ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಕ್ರಿಸ್ ಮೊರಿಸ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿರುವ ಬೌಲಿಂಗ್ ಪಡೆಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಮುಂಬೈ ಎದುರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸುಧಾರಣೆಗಳೊಂದಿಗೆ ಕಣಕ್ಕಿಳಿಯುವ ಸವಾಲು ಬೆಂಗಳೂರಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.