ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್–2020 ವೇಳೆಗೆತನ್ನ ಹೆಸರು ಬದಲಿಸಿಕೊಳ್ಳುವ ಸೂಚನೆ ನೀಡಿದೆ. ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಡಿಸ್ಪ್ಲೇ ಪಿಕ್ಚರ್ (ಡಿಪಿ) ತೆಗೆದು ಹಾಕಲಾಗಿದ್ದು, ಖಾತೆಯನ್ನು ‘ರಾಯಲ್ ಚಾಲೆಂಜರ್ಸ್’ ಎಂದಷ್ಟೇ ಉಳಿಸಿಕೊಂಡಿದೆ.
ಇನ್‌ಸ್ಟಾಗ್ರಾಂಹಾಗೂ ಫೇಸ್‌ಬುಕ್ ಪುಟಗಳಲ್ಲಿಯೂ ಡಿಪಿ ತೆಗೆದುಹಾಕಿದೆ.ಮೂಲಗಳ ಪ್ರಕಾರ‘Bangalore’ ಅನ್ನು‘Bengaluru’ ಎಂದು ಬದಲಿಸಿಕೊಳ್ಳುವ ಚಿಂತನೆಗಳು ನಡೆದಿವೆ.
ಹೊಸ ಹೆಸರು ಮತ್ತು ಹೊಸ ಲೋಗೊದೊಂದಿಗೆ ಹೊಸ ಸರಣಿಯಲ್ಲಿ ಕಾಣಿಸಿಕೊಳ್ಳುವ ಸೂಚನೆ ಇದಾಗಿದೆ. ಈ ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಿಸಿಕೊಂಡಿತ್ತು.
ಐಪಿಎಲ್ ಆರಂಭವಾದಾಗಿನಿಂದಲೂ (2008 ರಿಂದ)ಆರ್‌ಸಿಬಿ ಪರವಾಗಿಯೇ ಆಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಎಲ್ಲ (12) ಟೂರ್ನಿಗಳಲ್ಲೂಒಂದೇ ತಂಡದ ಪರ ಆಡಿದ ದಾಖಲೆ ಹೊಂದಿದ್ದಾರೆ.ಅವರು ಏಳು ಬಾರಿ ತಂಡವನ್ನು ಮುನ್ನಡೆಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಎಬಿ ಡಿ ವಿಲಿಯರ್ಸ್, ಕ್ರಿಸ್ ಗೇಲ್, ಕೆ.ಎಲ್.ರಾಹುಲ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಆಡಿದ್ದರೂ, ಒಂದೇಒಂದು ಸಲವೂ ಕಪ್ ಗೆದ್ದುಕೊಡಲು ಸಾಧ್ಯವಾಗಿಲ್ಲ. ಆದಾಗ್ಯೂ, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಂಡದ ಹೊಸ ನಿರ್ದೇಶಕ ಮೈಕ್ ಹಸನ್ ತಿಳಿಸಿದ್ದಾರೆ.
‘ಕೊಹ್ಲಿ ನಾಯಕತ್ವ ಬದಲಾವಣೆ ಕುರಿತು ನಾವು ಚಿಂತಿಸಿಲ್ಲ. ಆದರೆ, ಹಿಂದಿನ ಟೂರ್ನಿಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಅವರು ಮುನ್ನಡೆಯಲಿದ್ದಾರೆ’ ಎಂದು ಹೇಳಿದ್ದಾರೆ. ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯಕೋಚ್ ಸೈಮ್ ಕ್ಯಾಟಿಚ್, ‘ಕಳೆದ ಕೆಲವು ದಿನಗಳಿಂದ ನಡೆದ ಸಭೆಗಳಲ್ಲಿ ಕೊಹ್ಲಿ ನಾಯಕತ್ವದ ಕುರಿತು ಯಾವುದೇ ಪ್ರಶ್ನೆಗಳು ಮೂಡಿಲ್ಲ’ ಎಂದಿದ್ದಾರೆ.
ಹೆಸರು ಬದಲಾವಣೆ ವಿಚಾರ ನಾಯಕನಿಗೇ ಗೊತ್ತಿಲ್ಲ!
2020ರ ಟೂರ್ನಿಗೆ ಇನ್ನು ಎರಡು ತಿಂಗಳು ಬಾಕಿ ಇರುವಾಗಲೇ ಆರ್‌ಸಿಬಿ ತನ್ನ ಸಾಮಾಜಿಕ ತಾಣಗಳಲ್ಲಿ ಹೆಸರು ಬದಲಾವಣೆ ಮಾಡಿಕೊಂಡಿದೆ. ಆದರೆ ಈ ಬಗ್ಗೆ ನಾಯಕ ಕೊಹ್ಲಿಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಆರ್‌ಸಿಬಿಯ ಅಧಿಕೃತ ಟ್ವಟರ್ ಖಾತೆಯನ್ನು ಉಲ್ಲೇಖಿಸಿ, ‘ಪ್ರಕಟಣೆಗಳು ಕಾಣುತ್ತಿಲ್ಲ ಮತ್ತು ನಾಯಕನಿಗೂ ಮಾಹಿತಿ ಇಲ್ಲ. ನಿಮಗೇನಾದರೂ ಸಹಾಯ ಬೇಕಿದ್ದರೆ ನನಗೆ ತಿಳಿಸಿ’ ಎಂದು ಬರೆದುಕೊಂಡಿದ್ದಾರೆ.
ಮಾರ್ಚ್29ರಿಂದಐಪಿಎಲ್ 2020
ಈ ಬಾರಿಯ ಐಪಿಎಲ್ ಮಾರ್ಚ್29ರಿಂದ ಆರಂಭವಾಗಲಿದ್ದು, ಮೇ 24ರ ವರೆಗೆ ನಡೆಯಲಿದೆ. ಮೊದಲ ಪಂದ್ಯದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ ನಡುವೆ ಮುಂಬೈನಲ್ಲಿ ನಡೆಯಲಿದೆ.ಆರ್‌ಸಿಬಿ ಮೊದಲ ಪಂದ್ಯವನ್ನು ಏಪ್ರಿಲ್ 3ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.