ADVERTISEMENT

IPL: ಆರ್‌ಸಿಬಿಗೆ ರಜತ್ ಪಾಟೀದಾರ್ ಸರದಾರ

ಬೆಂಗಳೂರು ತಂಡಕ್ಕೆ ಯುವನಾಯಕನ ಸಾರಥ್ಯ; ಇಂದೋರ್ ಆಟಗಾರನ ಬೆನ್ನುತಟ್ಟಿದ ವಿರಾಟ್

ಗಿರೀಶ ದೊಡ್ಡಮನಿ
Published 13 ಫೆಬ್ರುವರಿ 2025, 19:42 IST
Last Updated 13 ಫೆಬ್ರುವರಿ 2025, 19:42 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನಾಗಿ ನೇಮಕವಾದ ರಜತ್ ಪಾಟೀದಾರ್ ಅವರಿಗೆ  ಫ್ರ್ಯಾಂಚೈಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್ ಮೆನನ್ ಅವರು ಕ್ಯಾಪ್ ಪ್ರದಾನ ಮಾಡಿದರು. ಮುಖ್ಯ ಕೋಚ್ ಆ್ಯಂಡಿ ಫ್ಲವರ್ (ಎಡದಿಂದ ಮೊದಲನೇಯವರು) ಹಾಗೂ ನಿರ್ದೇಶಕ ಮೊ ಬೊಬಾಟ್ ಹಾಜರಿದ್ದರು   –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನಾಗಿ ನೇಮಕವಾದ ರಜತ್ ಪಾಟೀದಾರ್ ಅವರಿಗೆ  ಫ್ರ್ಯಾಂಚೈಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್ ಮೆನನ್ ಅವರು ಕ್ಯಾಪ್ ಪ್ರದಾನ ಮಾಡಿದರು. ಮುಖ್ಯ ಕೋಚ್ ಆ್ಯಂಡಿ ಫ್ಲವರ್ (ಎಡದಿಂದ ಮೊದಲನೇಯವರು) ಹಾಗೂ ನಿರ್ದೇಶಕ ಮೊ ಬೊಬಾಟ್ ಹಾಜರಿದ್ದರು   –ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತ ಮತ್ತು ಬೇರೆ ಬೇರೆ ದೇಶಗಳ ದಿಗ್ಗಜ ಆಟಗಾರರು ನಾಯಕತ್ವ ವಹಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಯುವನಾಯಕ ಲಭಿಸಿದ್ದಾರೆ.  ಮಧ್ಯಪ್ರದೇಶದ ಇಂದೋರಿನ ರಜತ್ ಪಾಟೀದಾರ್ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)  ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವರು. 

ಗುರುವಾರ ಕೆಎಸ್‌ಸಿಎ ಸಭಾಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು ವಿಡಿಯೊ ಸಂದೇಶದ ಮೂಲಕ ರಜತ್ ಪಾಟೀದಾರ್ ನಾಯಕತ್ವವನ್ನು ಘೋಷಿಸಿದರು. 

‘ನಾನು ಮತ್ತು ತಂಡದ ಎಲ್ಲ ಸದಸ್ಯರೂ ನಿಮ್ಮ ಬೆಂಬಲಕ್ಕೆ ಇದ್ದಾರೆ ರಜತ್. ಈ ಫ್ರ್ಯಾಂಚೈಸಿಯಲ್ಲಿ ತಾವು ಬೆಳೆದ ರೀತಿಯು ಎಲ್ಲರ ಮನಗೆದ್ದಿದೆ. ನೀವು ಆರ್‌ಸಿಬಿ ಅಭಿಮಾನಿಗಳ ಹೃದಯಗಳಲ್ಲಿ ಇದ್ದೀರಿ. ಈ ಸ್ಥಾನಕ್ಕೆ ನೀವು ಅರ್ಹರು’ ಎಂದು ವಿರಾಟ್ ಅವರು ಕಳಿಸಿರುವ ವಿಡಿಯೋ ಸಂದೇಶದಲ್ಲಿ ಹೇಳಿದರು.

ADVERTISEMENT

ಆರ್‌ಸಿಬಿಯನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಅವರೇ ಮತ್ತೊಮ್ಮೆ ನಾಯಕರಾಗುವ ಕುರಿತ ಮಾತುಗಳೂ ಕೇಳಿಬಂದಿದ್ದವು. ಆದರೆ ಕೊಹ್ಲಿ ಒಪ್ಪದೇ ರಜತ್ ಅವರಿಗೆ ಬೆಂಬಲಿಸಿದ್ದಾರೆ.

31 ವರ್ಷದ ರಜತ್, 2021ರಲ್ಲಿ ಆರ್‌ಸಿಬಿ ಮೂಲಕವೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಆಟಗಾರನಾಗಿದ್ದಾರೆ. ಈ ವರ್ಷದ ಟೂರ್ನಿಗಾಗಿ ತಂಡದಲ್ಲಿ ರಿಟೇನ್ ಆದ ಮೂವರು ಆಟಗಾರರಲ್ಲಿ ರಜತ್ ಕೂಡ ಒಬ್ಬರು. ಅವರಿಗೆ ₹ 11 ಕೋಟಿ ನೀಡಿದ್ದ ತಂಡವು ಉಳಿಸಿಕೊಂಡಿತ್ತು.  ಅವರಲ್ಲದೇ ವಿರಾಟ್ ಕೊಹ್ಲಿ (₹ 21 ಕೋಟಿ) ಮತ್ತು ಬೌಲರ್ ಯಶ್ ದಯಾಳ್ (₹ 5 ಕೋಟಿ) ಅವರನ್ನೂ ಫ್ರ್ಯಾಂಚೈಸಿಯು ರಿಟೇನ್ ಮಾಡಿಕೊಂಡಿತ್ತು. ನಾಯಕ ಫಫ್ ಡುಪ್ಲೆಸಿ, ವೇಗಿ ಮೊಹಮ್ಮದ್ ಸಿರಾಜ್ ಸೇರಿದಂತೆ ಉಳಿದೆಲ್ಲರನ್ನೂ ಬಿಡುಗಡೆ ಮಾಡಿತ್ತು.  

ಆದರೆ 2025ರ ಟೂರ್ನಿಗಾಗಿ ನಡೆದಿದ್ದ ಮೆಗಾ ಹರಾಜಿನಲ್ಲಿ ನಾಯಕತ್ವದ ಅನುಭವ ಹೊಂದಿರುವ ರಿಷಭ್ ಪಂತ್, ಕೆ.ಎಲ್. ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಗಿತ್ತು.  ಆದ್ದರಿಂದ ಈಗ ನಾಯಕತ್ವದ ಹೊಣೆಯು ರಜತ್ ಅವರ ಹೆಗಲೇರಿದೆ. 

ತಂಡವು ಐಪಿಎಲ್‌ನಲ್ಲಿ 3 ಸಲ ರನ್ನರ್ಸ್ ಅಪ್ ಆಗಿದೆ. 2016ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದರ ನಂತರ ಈ ಪ್ರಶಸ್ತಿ ಸುತ್ತು ಪ್ರವೇಶಿಸಲು ತಂಡಕ್ಕೆ ಸಾಧ್ಯವಾಗಿಲ್ಲ.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್, ‘ಸರಳ ವ್ಯಕ್ತಿತ್ವದ ರಜತ್ ತಮ್ಮೊಂದಿಗೆ ಇರುವವರ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಮಧ್ಯಪ್ರದೇಶ ತಂಡವನ್ನು ಅವರು ಮುನ್ನಡೆಸಿದ ರೀತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅವರ ರೀತಿ, ನೀತಿಗಳು ನಮಗೆ ಇಷ್ಟವಾದವು. ಆದ್ದರಿಂದ ಅವರನ್ನು ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ’ ಎಂದರು. 

ರಜತ್ ಅವರು ಕಳೆದ ದೇಶಿ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ್ದರು. ತಂಡವು ರನ್ನರ್ಸ್ ಅಪ್ ಆಗಿತ್ತು. ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ನಲ್ಲಿಯೂ ಅವರು  ನಾಯಕತ್ವ ವಹಿಸಿದ್ದರು. 

‘ವಿರಾಟ್ ಅವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಆಡುತ್ತಿದ್ದೇನೆ. ಅವರು ಒಳ್ಳೆಯ ಮಾರ್ಗದರ್ಶಕರು. ಅವರ ಅನುಭವ ಮತ್ತು ಬೆಂಬಲವು ನನ್ನ ಹೊಣೆ ನಿಭಾಯಿಸಲು ನೆರವಾಗಲಿದೆ. ಎಲ್ಲ ಆಟಗಾರರೊಂದಿಗೂ ಸಮನ್ವಯ ಸಾಧಿಸಿಕೊಂಡು ಹೋಗುವ ಮೂಲಕ ತಂಡವನ್ನು ಒಟ್ಟಾಗಿ ಮುನ್ನಡೆಸುವುದು ನನ್ನ ಗುರಿ’ ಎಂದು ರಜತ್ ಹೇಳಿದರು. 

'ನಾನು ಹೆಚ್ಚು ಅಭಿವ್ಯಕ್ತಿಸುವ ವ್ಯಕ್ತಿ ಅಲ್ಲ. ಆದರೆ ಪಂದ್ಯಗಳಲ್ಲಿ ಅನುಕ್ಷಣವೂ ಆಳವಾಗಿ ತೊಡಗಿಕೊಂಡು ಪರಿಸ್ಥಿತಿಯನ್ನು ಚೆನ್ನಾಗಿ ಅರಿತು ಕ್ರಮ ವಹಿಸುವ ಸಾಮರ್ಥ್ಯ ಇದೆ. ನನ್ನ ತಂಡದ ಆಟಗಾರರಿಗೆ ಬೆಂಬಲವಾಗಿ ನಿಲ್ಲಬೇಕು. ಎಲ್ಲ ಸಂದರ್ಭಗಳಲ್ಲಿಯೂ ಅವರೊಂದಿಗಿರುತ್ತೇನೆ. ಅವರು ಆತ್ಮವಿಶ್ವಾಸ ಮತ್ತು ಒತ್ತಡರಹಿತವಾಗಿರುವಂತಹ ವಾತಾವರಣ ನಿರ್ಮಿಸುವೆ’ ಎಂದರು. 

ಈ ಸಂದರ್ಭದಲ್ಲಿ  ಫ್ರ್ಯಾಂಚೈಸಿಯ ಸಿಒಒ ರಾಜೇಶ್ ಮೆನನ್ ಅವರು ರಜತ್‌ ಅವರಿಗೆ ಕ್ಯಾಪ್ ಪ್ರದಾನ ಮಾಡಿದರು.  ತಂಡದ ನಿರ್ದೇಶಕ ಮೊ ಬೊಬಾಟ್ ಹಾಜರಿದ್ದರು. 

ರಜತ್ ಮುಂದಿರುವ  ಪ್ರಮುಖ ಸವಾಲುಗಳು

* 17 ವರ್ಷಗಳಿಂದ ಯಾವುದೇ ನಾಯಕರಿಗೂ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಿಲ್ಲ. ಟ್ರೋಫಿ ಗೆಲುವಿನತ್ತ ತಂಡವನ್ನು ಮುನ್ನಡೆಸುವುದು.

* ತಂಡದ ಮಾಜಿ ನಾಯಕ ಮತ್ತು ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಉತ್ತಮ ಸಮನ್ವಯತೆ ಸಾಧಿಸುವುದು. 

* ತಮಗಿಂತಲೂ ಹೆಚ್ಚು ಅನುಭವ ಮತ್ತು ವಯಸ್ಸಿನಲ್ಲಿ ಹಿರಿಯ ಆಟಗಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಂಡವನ್ನು ಮುನ್ನಡೆಸಬೇಕು. 

*  ಐಪಿಎಲ್‌ನಲ್ಲಿ ಅತ್ಯಂತ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ತಂಡದ ಬ್ರ್ಯಾಂಡ್ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಒತ್ತಡವನ್ನು ಮೀರಿ ನಿಲ್ಲಬೇಕು. ಅದಕ್ಕಾಗಿ ತಂಡ ಸಂಯೋಜನೆ ಮತ್ತು ಪ್ರತಿಭಾ ಸಂಪನ್ಮೂಲವನ್ನು ಸಮಯೋಚಿತವಾಗಿ ಬಳಸಿಕೊಳ್ಳಬೇಕು. 

* ನಾಯಕತ್ವದ ಹೊಣೆಯ ಒತ್ತಡದಲ್ಲಿ ತಮ್ಮ ಬ್ಯಾಟಿಂಗ್‌ ಲಯ ಕುಸಿಯದಂತೆ ನೋಡಿಕೊಳ್ಳಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.