ADVERTISEMENT

ಐಪಿಎಲ್‌: ಹೈದರಾಬಾದ್‌ ‘ಚಾಲೆಂಜ್‌’ ಮೀರಿದ ವಿರಾಟ್ ಕೊಹ್ಲಿ ಬಳಗ

ಕಣಕ್ಕೆ ಇಳಿದ ದೇವದತ್ತ; ಜೇಸನ್ ಹೋಲ್ಡರ್‌ಗೆ 3 ವಿಕೆಟ್‌; 100ನೇ ಟಿ20 ಪಂದ್ಯ ಆಡಿದ ವಿಜಯಶಂಕರ್

ಪಿಟಿಐ
Published 15 ಏಪ್ರಿಲ್ 2021, 6:48 IST
Last Updated 15 ಏಪ್ರಿಲ್ 2021, 6:48 IST
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ಶೈಲಿ –ಪಿಟಿಐ ಚಿತ್ರ
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ಶೈಲಿ –ಪಿಟಿಐ ಚಿತ್ರ   

ಚೆನ್ನೈ (ಪಿಟಿಐ‌): ಸಾಧಾರಣ ಮೊತ್ತ ಕಲೆ ಹಾಕಿದರೂ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಂಗೆಡಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿತು. ಬುಧವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಆರು ರನ್‌ಗಳಿಂದ ಮಣಿಸಿದ ಆರ್‌ಸಿಬಿ ಸತತ ಎರಡು ಜಯದೊಂದಿಗೆ ಲೀಗ್‌ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್‌ಸಿಬಿಯ ಪ್ರಮುಖ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್(59; 41 ಎಸೆತ, 5 ಬೌಂಡರಿ, 3 ಸಿಕ್ಸರ್‌) ಏಕಾಂಗಿ ಹೋರಾಟದ ಮೂಲಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ನಾಯಕ ವಿರಾಟ್ ಕೊಹ್ಲಿ (33; 29 ಎಸೆತ, 4 ಬೌಂಡರಿ) ಹೊರತುಪಡಿಸಿದರೆ ಉಳಿದವರೆಲ್ಲರೂ ನಿರೀಕ್ಷೆ ಹುಸಿಗೊಳಿಸಿದರು.

150 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಾಯಕ ಡೇವಿಡ್‌ ವಾರ್ನರ್ (54; 37 ಎ, 7 ಬೌಂ, 1 ಸಿ) ಮತ್ತು ಮೂರನೇ ಕ್ರಮಾಂಕದ ಮನೀಷ್ ಪಾಂಡೆ (38; 39 ಎ, 2 ಬೌಂ, 2 ಸಿ) 83 ರನ್‌ಗಳ ಜೊತೆಯಾಟವಾಡಿ ಭರವಸೆ ಮೂಡಿಸಿದರು. ಇವರಿಬ್ಬರ ವಿಕೆಟ್ ಕಳೆದುಕೊಂಡ ನಂತರ ತಂಡ ಸೋಲಿನತ್ತ ಸಾಗಿತು.

ADVERTISEMENT

ಕೊನೆಯ ಓವರ್‌ಗಳಲ್ಲಿ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ ಆರ್‌ಸಿಬಿ ಬೌಲರ್‌ಗಳು ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿ ಗೆಲುವಿನ ತೋರಣ ಕಟ್ಟಿದರು. ಒಂಬತ್ತು ವಿಕೆಟ್‌ಗಳಿಗೆ 143 ರನ್‌ ಗಳಿಸಿ ವಾರ್ನರ್ ಬಳಗ ಸೋಲೊಪ್ಪಿಕೊಂಡಿತು.

ಕೋವಿಡ್ ಸೋಂಕಿನಿಂದ ಗುಣಮುಖರಾಗಿ ತಂಡ ಸೇರಿಕೊಂಡಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್ ನಾಯಕ ವಿರಾಟ್ ಕೊಹ್ಲಿ ಜೊತೆ ಬೆಂಗಳೂರು ತಂಡದ ಇನಿಂಗ್ಸ್ ಆರಂಭಿಸಿದರು. ಮೊದಲ ಪಂದ್ಯದಲ್ಲಿ ಕೊಹ್ಲಿ ಜೊತೆ ಕಣಕ್ಕೆ ಇಳಿದಿದ್ದ ವಾಷಿಂಗ್ಟನ್ ಸುಂದರ್‌ ಅವರನ್ನು ಕೆಳಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಪಿಂಚ್ ಹಿಟ್ಟರ್ ರೂಪದಲ್ಲಿ ಶಹಬಾಜ್‌ ಅಹಮ್ಮದ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳುಹಿಸಲು ನಿರ್ಧರಿಸಲಾಗಿತ್ತು.

ಮೂರನೇ ಓವರ್‌ನಲ್ಲಿ ದೇವದತ್ತ ವಿಕೆಟ್ ಗಳಿಸಿದ ಭುವನೇಶ್ವರ್‌ ಕುಮಾರ್ ಹೈದರಾಬಾದ್ ತಂಡದಲ್ಲಿ ಸಂಭ್ರಮ ಮೂಡಿಸಿದರು. ಆರ್‌ಸಿಬಿಯ ಮೊದಲ ಸಿಕ್ಸರ್ ಐದನೇ ಓವರ್‌ನಲ್ಲಿ ಶಹಬಾಜ್ ಅವರ ಬ್ಯಾಟಿನಿಂದ ಬಂತು. ಆದರೆ ಏಳನೇ ಓವರ್‌ನಲ್ಲಿ ಡೀಪ್‌ ಸ್ಕ್ವೇರ್‌ನಲ್ಲಿದ್ದ ರಶೀದ್ ಖಾನ್ ಪಡೆದ ಮೋಹಕ ಕ್ಯಾಚ್‌ಗೆ ಶಹಬಾಜ್ ಬಲಿಯಾದರು. ಮ್ಯಾಕ್ಸ್‌ವೆಲ್ ಕ್ರೀಸ್‌ಗೆ ಬಂದ ನಂತರ ರನ್‌ ಗಳಿಕೆಯ ವೇಗ ಹೆಚ್ಚಿತು. ನದೀಮ್ ಹಾಕಿದ 11ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಮತ್ತು ಕೊಹ್ಲಿ 22 ರನ್ ಕಲೆ ಹಾಕಿದರು.

100ನೇ ಟಿ20 ಪಂದ್ಯ ಆಡಿದ ವಿಜಯಶಂಕರ್ ಪಡೆದ ಮೋಹಕ ಕ್ಯಾಚ್‌ಗೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಡಿವಿಲಿಯರ್ಸ್ ಮತ್ತು ವಾಷಿಂಗ್ಟನ್‌ ಕೂಡ ಬೇಗನೇ ಮರಳಿದರು. ಜೆಮೀಸನ್ ಜೊತೆಗೂಡಿ ಮ್ಯಾಕ್ಸ್‌ವೆಲ್‌ ಇನಿಂಗ್ಸ್ ಕಟ್ಟಿದರು. ಒಂಬತ್ತು ಎಸೆತಗಳಲ್ಲಿ 12 ರನ್‌ ಗಳಿಸಿದ ಜೆಮೀಸನ್ ಔಟಾದ ಬೆನ್ನಲ್ಲೇ ಮ್ಯಾಕ್ಸ್‌ವೆಲ್‌ ಅರ್ಧಶತಕ ಪೂರೈಸಿದರು. ಐದು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಅವರು ಗಳಿಸಿದ ಮೊದಲ ಅರ್ಧಶತಕ ಆಗಿತ್ತು ಇದು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅವರು ವಿಕೆಟ್ ಕಳೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.