ADVERTISEMENT

‘ತವರಿನ ಪರಿಸ್ಥಿತಿ ಕಠಿಣವಾಗಿದೆ’: ಕ್ರೀಡಾಂಗಣದಲ್ಲಿ ತಂದೆಯನ್ನು ನೆನೆದ ಸ್ಟೋಕ್ಸ್

ಏಜೆನ್ಸೀಸ್
Published 26 ಅಕ್ಟೋಬರ್ 2020, 12:22 IST
Last Updated 26 ಅಕ್ಟೋಬರ್ 2020, 12:22 IST
   

ಅಬುಧಾಬಿ: ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಭಾನುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನನೀಡಿದಬೆನ್‌ ಸ್ಟೋಕ್ಸ್‌, ತಾವು ಗಳಿಸಿದ ಶತಕವನ್ನು ತಮ್ಮ ತಂದೆಯವರಿಗೆ ಅರ್ಪಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಪಡೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 195 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ರಾಯಲ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಾಬಿನ್‌ ಉತ್ತಪ್ಪ (13) ಎರಡನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿಕೊಂಡರು. ನಂತರ ಕ್ರೀಸ್‌ಗೆ ಬಂದ ನಾಯಕ ಸ್ಟೀವ್‌ ಸ್ಮಿತ್‌ ಕೇವಲ 11 ರನ್‌ ಗಳಿಸಿ ಔಟಾದರು. ಹೀಗಾಗಿ ದೊಡ್ಡ ಅಂತರದ ಗೆಲುವಿನ ಲೆಕ್ಕಾಚಾರದಲ್ಲಿದ್ದ ಮುಂಬೈ ತಂಡಕ್ಕೆ ಸ್ಟೋಕ್ಸ್‌ ಆಘಾತ ನೀಡಿದರು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸಂಜು ಸ್ಯಾಮ್ಸನ್‌ (54) ಜೊತೆ ಸೇರಿ ಮೂರನೇ ವಿಕೆಟ್ ಜೊತೆಯಾಟದಲ್ಲಿ ಅಜೇಯ 152 ರನ್‌ ಕಲೆಹಾಕಿದ ಅವರು, ಕೇವಲ 60 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 107 ರನ್‌ ಗಳಿಸಿಕೊಂಡರು. ಇದರೊಂದಿಗೆ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಮೂರಂಕಿ ದಾಟಿದ ಸಾಧನೆ ಮಾಡಿದರು.

ADVERTISEMENT

ಸ್ಟೋಕ್ಸ್‌ ಆಟದ ಬಲದಿಂದ ರಾಯಲ್ಸ್‌ ಪಡೆ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 196 ರನ್‌ ಗಳಿಸಿ ಜಯದ ನಗೆ ಬೀರಿತು.

ಶತಕದ ರನ್‌ ಗಳಿಸಿಕೊಂಡ ಬಳಿಕ ಸ್ಟೋಕ್ಸ್‌, ತಮ್ಮ ಬಲಗೈ ಅನ್ನು ಮೇಲೆತ್ತಿ ಮಧ್ಯದ ಬೆರಳನ್ನು ಮಡಚಿ ಹಿಡಿದು ಸಂಭ್ರಮಿಸಿದರು. ಹೀಗೆ ಮಾಡುವ ಮೂಲಕ ಅವರು ಕ್ರೀಡಾಂಗಣದಲ್ಲಿ ತಮ್ಮ ತಂದೆಯವರನ್ನು ನೆನಪಿಸಿಕೊಂಡರು.

ಸ್ಟೋಕ್ಸ್‌ ಅವರ ತಂದೆ ಗೆರಾರ್ಡ್‌ ಸ್ಟೋಕ್ಸ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸ್ಟೋಕ್ಸ್‌ ಐಪಿಎಲ್‌ನ ಆರಂಭದ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಗೆರಾರ್ಡ್‌ ಮಾಜಿ ರಗ್ಬಿ ಆಟಗಾರರೂ ಹೌದು.

ಪಂದ್ಯದ ಬಳಿಕ ಮಾತನಾಡಿದ ಸ್ಟೋಕ್ಸ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿ ಸಂಗತಿ. ನಾನು ಟೂರ್ನಿಯಲ್ಲಿ ತಂಡಕ್ಕಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಆಡಲು ಎರಡು ಮೂರು ಪಂದ್ಯಗಳು ಬೇಕಾದವು. ನಿಜ ಹೇಳಬೇಕೆಂದರೆ, ನಿನ್ನೆ (ಶನಿವಾರ) ಪಡೆದುಕೊಂಡ ತರಬೇತಿಯು, ನಾನು ಇಲ್ಲಿ ಕಳೆದ ಅಷ್ಟೂ ಸಮಯದಲ್ಲೇ ಅತ್ಯುತ್ತಮವಾಗಿತ್ತು. ಹಾಗಾಗಿಯೇ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಆಡಿದೆ. ಫಾರ್ಮ್‌ಗೆ ಮರಳುವುದು ಯಾವಾಗಲೂ ಅತ್ಯುತ್ತಮ ವಿಚಾರ. ನಿನ್ನೆಯ ಫಲಿತಾಂಶ ನಮಗೆ ಅತ್ಯಂತ ಅಗತ್ಯವಾಗಿತ್ತು. ಹಾಗಾಗಿ ಇದು ಒಂದೊಳ್ಳೆಯ ಗೆಲುವಾಗಿದೆ’

‘ಮುಂಬೈ ತಂಡ ಆರಂಭದಲ್ಲಿಯೇ ವಿಕೆಟ್‌ ತೆಗೆದ ಕಾರಣ, ಬ್ಯಾಟಿಂಗ್‌ ಕಷ್ಟವಾಗಿತ್ತು. ಬಳಿಕ ನಾವು ಎಲ್ಲ ಬೌಲರ್‌ಗಳ ಮೇಲೆ ಒತ್ತಡ ಹೇರುವ ಮೂಲಕ ನಮ್ಮ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದೆವು. ಬೂಮ್ರಾ ಅವರ ಬೌಲಿಂಗ್‌ನಲ್ಲಿ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ರನ್‌ ಗಳಿಸಿದೆವು. ಮುಕ್ತವಾಗಿ ಬ್ಯಾಟಿಂಗ್‌ ಮಾಡಿದೆವು’ ಎಂದು ಹೇಳಿದರು. ತಮ್ಮ ಮನೆಯ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ಅವರು, ‘ತವರಿನಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಈ ಆಟವು ಅವರಿಗೂ ಚೂರು ಸಂತಸ ನೀಡಿರಬಹುದು ಎಂದುಕೊಂಡಿದ್ದೇನೆ’ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.