ಆ್ಯಂಡ್ರೆ ರಸೆಲ್
ಕಿಂಗ್‌ಸ್ಟನ್: ವೆಸ್ಟ್ ಇಂಡೀಸ್‌ನ ಕ್ರಿಕೆಟ್ ತಂಡದ ಹಿರಿಯ ಆಲ್‌ರೌಂಡ್ ಆಟಗಾರ ಆ್ಯಂಡ್ರೆ ರಸೆಲ್ 15 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಇದೇ 22ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಎರಡನೇ ಟಿ20 ಪಂದ್ಯದ ಮೂಲಕ 37 ವರ್ಷದ ರಸೆಲ್ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಎಳೆಯಲಿದ್ದಾರೆ.
ಟಿ20 ಮಾದರಿಯಲ್ಲೇ ಹೆಚ್ಚು ಯಶಸ್ಸು ಗಳಿಸಿರುವ ರಸೆಲ್, ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಕೇವಲ ಏಳು ತಿಂಗಳು ಇರುವಂತೆ ಈ ನಿರ್ಧಾರ ಪ್ರಕಟಿಸಿದ್ದಾರೆ.
2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಅವರು ಮೂರು ಮಾದರಿಗಳಲ್ಲಿ ಒಟ್ಟು 141 ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿರುವ ಅವರು, 2019ರ ಬಳಿಕ ಕೇವಲ ಟಿ20 ಮಾದರಿಯಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ರಸೆಲ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ತಮ್ಮ ತವರು ಜಮೈಕಾದ ಸಬೀನಾ ಪಾರ್ಕ್‌ನ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಎರಡು ಪಂದ್ಯಗಳ ಬಳಿಕ ಅವರು ವಿದಾಯ ಹೇಳಲಿದ್ದಾರೆ.
‘ನಿವೃತ್ತಿಯ ಅರ್ಥವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳು’ ಎಂದು ರಸೆಲ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.