ADVERTISEMENT

ಆ್ಯಷಸ್ ಟೆಸ್ಟ್‌ ಸರಣಿ: ಪ್ಯಾಟ್ ಕಮಿನ್ಸ್‌ ನಾಯಕತ್ವಕ್ಕೆ ಗೆಲುವಿನ ‘ಸ್ವೀಟ್‌’

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಗೆಲುವು

ಏಜೆನ್ಸೀಸ್
Published 11 ಡಿಸೆಂಬರ್ 2021, 12:56 IST
Last Updated 11 ಡಿಸೆಂಬರ್ 2021, 12:56 IST
ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದ ಖುಷಿಯಲ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ ಆಸ್ಟ್ರೇಲಿಯಾ ಆಟಗಾರರು –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದ ಖುಷಿಯಲ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ ಆಸ್ಟ್ರೇಲಿಯಾ ಆಟಗಾರರು –ಎಎಫ್‌ಪಿ ಚಿತ್ರ   

ಬ್ರಿಸ್ಬೇನ್: ಮೂರನೇ ದಿನದಾಟದ ಮುಕ್ತಾಯದ ವೇಳೆ ಡ್ರಾದ ಭರವಸೆ ಮೂಡಿದ್ದ ಇಂಗ್ಲೆಂಡ್ ಪಾಳಯ ನಾಲ್ಕನೇ ದಿನ ಬೆಳಿಗ್ಗೆ ಆಘಾತಕ್ಕೆ ಒಳಗಾಯಿತು. ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಆಸ್ಟ್ರೇಲಿಯಾ ತಂಡ ಗೆಲುವಿನ ಸಂಭ್ರಮದಲ್ಲಿ ಮಿಂದಿತು.

ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಒಂದು ದಿನ ಬಾಕಿ ಇರುವಾಗಲೇ ಒಂಬತ್ತು ವಿಕೆಟ್‌ಗಳಿಂದ ಜಯ ಗಳಿಸಿದ ಆತಿಥೇಯ ತಂಡ ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ ನಾಯಕರಾಗಿ ಮುನ್ನಡೆಸಿದ ಮೊದಲ ಪಂದ್ಯವಾಗಿತ್ತು ಇದು.

ಗಾಬಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 20 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 5.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ದಡ ಸೇರಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 278 ರನ್‌ಗಳ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಮೂರನೇ ದಿನವಾದ ಶುಕ್ರವಾರ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್‌ಗೆ ಡೇವಿಡ್ ಮಲಾನ್ ಮತ್ತು ನಾಯಕ ಜೋ ರೂಟ್ ಚೇತರಿಕೆ ತುಂಬಿದ್ದರು. ಶತಕದ ಜೊತೆಯಾಟವಾಡಿ ಡ್ರಾ ಮಾಡಿಕೊಳ್ಳುವ ಭರವಸೆ ಮೂಡಿಸಿದ್ದರು. ಆದರೆ ಶನಿವಾರ 77 ರನ್ ಸೇರಿಸುವಷ್ಟರಲ್ಲಿ ಉಳಿದ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು.

10 ವಿಕೆಟ್‌ಗಳ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದ ಆಸ್ಟ್ರೇಲಿಯಾ ನಾಲ್ಕು ರನ್‌ ಬೇಕಾಗಿದ್ದಾಗ ಅಲೆಕ್ಸ್ ಕ್ಯಾರಿ ಅವರ ವಿಕೆಟ್ ಕಳೆದುಕೊಂಡಿತು. ಪಕ್ಕೆಲುವಿನಲ್ಲಿ ನೋವು ಕಾಣಿಸಿಕೊಂಡಿರುವ ಕಾರಣಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಕಳಿಸಿರಲಿಲ್ಲ.

ಶುಕ್ರವಾರ ಎರಡು ವಿಕೆಟ್‌ಗಳಿಗೆ 220 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶನಿವಾರ ಭರವಸೆಯಿಂದಲೇ ಆಡಲಿಳಿದಿತ್ತು. ಮಿಡ್‌ ಆಫ್‌ನಲ್ಲಿದ್ದ ಮಾರ್ನಸ್ ಲಾಬುಶೇನ್‌ಗೆ ಕ್ಯಾಚ್ ನೀಡಿ ಡೇವಿಡ್ ಮಲಾನ್ ವಾಪಸಾಗುವುದರೊಂದಿಗೆ ತಂಡದ ಪತನ ಆರಂಭಗೊಂಡಿತು. ಆರು ರನ್ ಸೇರಿಸುವಷ್ಟರಲ್ಲಿ ಮುಂದಿನ ಓವರ್‌ನಲ್ಲಿ ರೂಟ್ ಕೂಡ ಮರಳಿದರು. ಅದರ ನಂತರದ ಓವರ್‌ನಲ್ಲಿ ಒಲಿ ಪೋಪ್ ಕೂಡ ವಾಸಪಾಸದರು.

ವೇಗದ ದಾಳಿಯ ಬಿಸಿ ಮುಟ್ಟಿಸಿದ ಕಮಿನ್ಸ್‌ ಅವರು ಬೆನ್‌ ಸ್ಟೋಕ್ಸ್‌ ವಿಕೆಟ್ ಕಬಳಿಸಿದರು. ಗಲಿಯಲ್ಲಿದ್ದ ಕ್ಯಾಮರೂನ್ ಗ್ರೀನ್‌ಗೆ ಸ್ಟೋಕ್ಸ್ ಕ್ಯಾಚ್ ನೀಡಿದರು. ಗಾಯದ ಸಮಸ್ಯೆಯಿಂದಾಗಿ ಶುಕ್ರವಾರ ಚಹಾ ವಿರಾಮದ ನಂತರ ಬೌಲಿಂಗ್ ಮಾಡದೇ ಇದ್ದ ಜೋಶ್‌ ಹ್ಯಾಜಲ್‌ವುಡ್, ಜೋಸ್‌ ಬಟ್ಲರ್‌ ವಿಕೆಟ್ ಉರುಳಿಸುವುದರೊಂದಿಗೆ ತಂಡದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದರು.

ಇನಿಂಗ್ಸ್ ಸೋಲಿನ ಆತಂಕದಲ್ಲಿದ್ದ ಇಂಗ್ಲೆಂಡ್ ಬಳಗ ಕ್ರಿಸ್ ವೋಕ್ಸ್ ಮತ್ತು ಒಲಿ ರಾಬಿನ್ಸನ್ ಅವರ ದಿಟ್ಟ ಆಟದಿಂದ ನಿಟ್ಟುಸಿರು ಬಿಟ್ಟಿತು. ಇವರಿಬ್ಬರ 18 ರನ್‌ಗಳ ಜೊತೆಯಾಟವು ಆಸ್ಟ್ರೇಲಿಯಾವನ್ನು ಮತ್ತೆ ಬ್ಯಾಟಿಂಗಿಗೆ ಇಳಿಯುವಂತೆ ಮಾಡಿತು. ಲಯನ್ ಎಸೆತದಲ್ಲಿ ರಿವರ್ಸ್‌ ಸ್ವೀಪ್‌ ಮಾಡಲು ಪ್ರಯತ್ನಿಸಿದ ರಾಬಿನ್ಸನ್ ಬ್ಯಾಕ್‌ವರ್ಡ್‌ ಸ್ಕ್ವೇರ್‌ಲೆಗ್‌ನಲ್ಲಿದ್ದ ಟ್ರಾವಿಸ್ ಹೆಡ್‌ಗೆ ಕ್ಯಾಚ್ ನೀಡಿದರು.

ಭೋಜನ ವಿರಾಮಕ್ಕೆ ನಿಗದಿಯಾಗಿದ್ದ ಸಮಯಕ್ಕೆ ಸ್ವಲ್ಪ ಮುನ್ನ ಮಾರ್ಕ್ ವುಡ್‌ ಅವರನ್ನು ಲಯನ್ ಪೆವಿಲಿಯನ್‌ಗೆ ಅಟ್ಟಿದರು. ಒಂಬತ್ತು ವಿಕೆಟ್ ಉರುಳಿದ್ದರಿಂದ ಅಂಪೈರ್‌ಗಳು ಭೋಜನ ವಿರಾಮಕ್ಕೆ ತೆರಳುವುದನ್ನು ಅರ್ಧ ತಾಸು ಮುಂದೂಡಿದರು. ವೋಕ್ಸ್ ವಿಕೆಟ್ ಪಡೆಯುವುದರಿಂದಿಗೆ ಕ್ಯಾಮರಾನ್ ಗ್ರೀನ್ ಎದುರಾಳಿಗಳ ಇನಿಂಗ್ಸ್‌ಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.