ADVERTISEMENT

SA vs IND 2nd Test: ದಕ್ಷಿಣ ಆಫ್ರಿಕಾ ಮುನ್ನಡೆ, 2ನೇ ಇನಿಂಗ್ಸ್ ಆರಂಭಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2022, 16:10 IST
Last Updated 4 ಜನವರಿ 2022, 16:10 IST
ರನ್‌ಗಾಗಿ ಓಡುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಕೇಶವ್ ಮಹಾರಾಜ್‌  (ಎಡ) ಮತ್ತು ಮಾರ್ಕೊ ಜಾನ್ಸನ್‌ (ಬಲ) –ರಾಯಿಟರ್ಸ್‌ ಚಿತ್ರ
ರನ್‌ಗಾಗಿ ಓಡುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಕೇಶವ್ ಮಹಾರಾಜ್‌ (ಎಡ) ಮತ್ತು ಮಾರ್ಕೊ ಜಾನ್ಸನ್‌ (ಬಲ) –ರಾಯಿಟರ್ಸ್‌ ಚಿತ್ರ   

ಜೊಹಾನ್ಸ್‌ಬರ್ಗ್‌:ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 113 ರನ್ ಅಂತರದಿಂದ ಸೋಲು ಕಂಡಿದ್ದ ಆತಿಥೇಯ ದಕ್ಷಿಣ ಆಫ್ರಿಕಾ, ಹೊಸ ವರ್ಷದಲ್ಲಿ (2022ರಲ್ಲಿ) ಆಡುತ್ತಿರುವ ಮೊದಲ ಹಾಗೂ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 27 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಈ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಅವರ ಬದಲು ಕನ್ನಡಿಗ ಕೆ.ಎಲ್‌.ರಾಹುಲ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇಲ್ಲಿನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಪಂದ್ಯದಲ್ಲಿ ಭಾರತ ತಂಡ 202 ರನ್ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು229 ರನ್ ಗಳಿಸಿದೆ.

ADVERTISEMENT

ಆಫ್ರಿಕಾ ಪರ, ಕೀಗನ್‌ ಪೀಟರ್‌ಸನ್‌ ಮತ್ತು ತೆಂಬಾ ಬವುಮಾ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ತೋರಿದರು.ಕೀಗನ್118 ಎಸೆತಗಳಲ್ಲಿ 62 ರನ್‌ ಗಳಿಸಿದರೆ, ತೆಂಬಾ51 ರನ್ ಬಾರಿಸಿದರು.

ಹೀಗಾಗಿ ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿಕೊಳ್ಳಲು ಸಾಧ್ಯವಾಯಿತು.

ಭಾರತ ಪರ ಶಾರ್ದೂಲ್‌ ಠಾಕೂರ್‌ 61 ರನ್ ನೀಡಿ 7ವಿಕೆಟ್‌ಗಳನ್ನು ಪಡೆದುಕೊಂಡರು. ಅನುಭವಿ ಮೊಹಮ್ಮದ್ ಶಮಿ 2 ಮತ್ತು ಜಸ್‌ಪ್ರಿತ್‌ ಬೂಮ್ರಾ 1 ವಿಕೆಟ್ ಪಡೆದರು. ಆದರೂ, ಭಾರತಕ್ಕೆ ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತಕ್ಕೆ ಆರಂಭಿಕ ಆಘಾತ
ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಮಾರ್ಕೊ ಜಾನ್ಸನ್ ಮತ್ತುಡುವಾನೆ ಒಲಿವಿಯರ್ ಆರಂಭಿಕ ಆಘಾತ ನೀಡಿದರು.ಜಾನ್ಸನ್, ನಾಯಕ ರಾಹುಲ್ (8) ವಿಕೆಟ್ ಪಡೆದರೆ, ಡುವಾನೆ, ಮಯಂಕ್‌ ಅಗರವಾಲ್‌ಗೆ (23)ಪೆವಿಲಿಯನ್ ದಾರಿ ತೋರಿದರು.

ಸದ್ಯ ಚೇತೇಶ್ವರ ಪೂಜಾರ (35) ಮತ್ತು ಅಜಿಂಕ್ಯ ರಹಾನೆ (11) ಕ್ರೀಸ್‌ನಲ್ಲಿದ್ದು, ಭಾರತ ಎರಡು ವಿಕೆಟ್‌ಗೆ 85 ರನ್ ಗಳಿಸಿದೆ. ಹೀಗಾಗಿ, ಆತಿಥೇಯರ ಬಾಕಿ ಚುಕ್ತಾ ಮಾಡಿ 58 ರನ್‌ಗಳ ಮುನ್ನಡೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.