ADVERTISEMENT

ಪಂತ್‌ ಉತ್ತಮ ವಿಕೆಟ್ ಕೀಪರ್ ಆಗಿ ಬೆಳೆಯಲಿದ್ದಾರೆ: ಸಹಾ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 15:23 IST
Last Updated 22 ಜನವರಿ 2021, 15:23 IST
ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಮಾಡುತ್ತಿರುವುದು –ಎಎಫ್‌ಪಿ ಚಿತ್ರ
ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಮಾಡುತ್ತಿರುವುದು –ಎಎಫ್‌ಪಿ ಚಿತ್ರ   

ಕೋಲ್ಕತ್ತ/ಮುಂಬೈ: ‘ಒಂದನೇ ಕ್ಲಾಸ್‌ನಿಂದಲೇ ಎಲ್ಲವನ್ನು ಕಲಿಯುವವರು ಯಾರೂ ಇಲ್ಲ. ಕ್ರಿಕೆಟ್‌ನಲ್ಲೂ ಅಷ್ಟೇ, ಏಕಾಏಕಿ ಎಲ್ಲ ವಿಭಾಗದಲ್ಲಿ ಪಾರಮ್ಯ ಸಾಧಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ರಿಷಭ್ ಪಂತ್ ವಿಕೆಟ್ ಕೀಪಿಂಗ್‌ನಲ್ಲಿ ಪಳಗಲು ಇನ್ನಷ್ಟು ಸಮಯಾವಕಾಶ ನೀಡಬೇಕು. ಅವರ ಕೀಪಿಂಗ್ ಶೈಲಿಯನ್ನು ಈಗಲೇ ಟೀಕಿಸುವುದು ಸರಿಯಲ್ಲ...’

ಆಸ್ಟ್ರೇಲಿಯಾದಲ್ಲಿ ಈಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಅಮೋಘ ಆಟವಾಡಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ ಪಂತ್ ಬಗ್ಗೆ ಭಾರತದ ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹೇಳಿದ ಮಾತು ಇದು.

ರಿಷಭ್ ಪಂತ್ ಆಸ್ಟ್ರೇಲಿಯಾದಲ್ಲಿ ತೋರಿದ ಉತ್ತಮ ಸಾಮರ್ಥ್ಯದಿಂದಾಗಿ ಭಾರತ ತಂಡದಲ್ಲಿ ತಮಗೆ ಇನ್ನು ಮುಂದೆ ಸ್ಥಾನ ಸಿಗುವುದು ಅಸಾಧ್ಯವೇ ಎಂಬ ‍ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಹಾ ‘ನಾವಿಬ್ಬರು ಉತ್ತಮ ಗೆಳೆಯರು. ತಂಡದಲ್ಲಿ ಯಾರಿಗೇ ಸ್ಥಾನ ಸಿಕ್ಕಿದರೂ ಖುಷಿಪಡುತ್ತೇವೆ ಮತ್ತು ಪರಸ್ಪರ ಸಹಕರಿಸುತ್ತೇವೆ. ವೈಯಕ್ತಿಕವಾಗಿ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ’ ಎಂದರು.

ADVERTISEMENT

‘ಉತ್ತಮ ಆಟಗಾರರು ಯಾರು ಎಂಬುದನ್ನು ತಂಡದ ಆಡಳಿತ ನಿರ್ಧರಿಸುತ್ತದೆ. ತಂಡಕ್ಕೆ ಅಗತ್ಯ ಇರುವವರಿಗೆ ಅವಕಾಶ ನೀಡುತ್ತದೆ. ಆಯ್ಕೆ ವಿಷಯ ಯಾರ ಕೈಯಲ್ಲೂ ಇಲ್ಲ. ಪಂತ್‌ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿದ್ದಾರೆ. ಇದರಿಂದ ಭಾರತ ತಂಡಕ್ಕೆ ಅನುಕೂಲ ಆಗಲಿದೆ’ ಎಂದ ಸಹಾ, ಪಂತ್ ಅವರನ್ನು ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಹೋಲಿಕೆ ಮಾಡುವುದರ ಬಗ್ಗೆ ಪ್ರತಿಕ್ರಿಯಿಸಿ ‘ಪ್ರತಿಯೊಬ್ಬರಿಗೂ ಅವರದೇ ಆದ ವೈಶಿಷ್ಟ್ಯವಿದೆ. ಧೋನಿ ಎಂದಿಗೂ ಧೋನಿಯಾಗಿಯೇ ಇರುತ್ತಾರೆ’ ಎಂದಷ್ಟೇ ಹೇಳಿದರು.

ಆಸ್ಟ್ರೇಲಿಯಾ ಪ್ರವಾಸದ ಅಡಿಲೇಡ್ ಟೆಸ್ಟ್‌ನಲ್ಲಿ ಸಹಾ ಕ್ರಮವಾಗಿ ಒಂಬತ್ತು ಮತ್ತು ನಾಲ್ಕು ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ತಂಡ 36 ರನ್‌ಗಳಿಗೆ ಆಲೌಟಾಗಿ ಹೀನಾಯವಾಗಿ ಸೋತಿತ್ತು. ನಂತರದ ಮೂರು ಪಂದ್ಯಗಳಲ್ಲಿ ಸಹಾ ಆಡಲಿಲ್ಲ.

ಶಾರ್ದೂಲ್‌ಗೆ ಬೌಲಿಂಗ್ ಆಲ್‌ರೌಂಡರ್ ಆಗುವ ಬಯಕೆ

ಬ್ರಿಸ್ಬೇನ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದ ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ ಆಲ್‌ರೌಂಡರ್ ಆಗಿ ಗುರುತಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ಪಂದ್ಯದಲ್ಲಿ ಏಳು ವಿಕೆಟ್ ಉರುಳಿಸಿದ ಠಾಕೂರ್ ಮೊದಲ ಇನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರ ಆಗಿದ್ದರು. ವಾಷಿಂಗ್ಟನ್ ಸುಂದರ್ ಜೊತೆ ಅವರು ಶತಕದ ಜೊತೆಯಾಟ ಆಡಿದ್ದರು.

2018ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಠಾಕೂರ್ ಎರಡು ವರ್ಷಗಳ ನಂತರ ಎರಡನೇ ಟೆಸ್ಟ್ ಪಂದ್ಯ ಆಡಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಗಾಯಗೊಂಡ ಕಾರಣ ಕೇವಲ 10 ಎಸೆತಗಳಿಗೆ ಅವರ ಬೌಲಿಂಗ್ ಮುಕ್ತಾಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.