ADVERTISEMENT

ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌: ಮಾಜಿ ನಾಯಕಿ ಸನಾ ಮಿರ್‌ ಕೈ ಬಿಟ್ಟ ಪಾಕ್

ಪಿಟಿಐ
Published 20 ಜನವರಿ 2020, 15:50 IST
Last Updated 20 ಜನವರಿ 2020, 15:50 IST
ಸನಾ ಮಿರ್‌
ಸನಾ ಮಿರ್‌   

ಕರಾಚಿ: ಅನುಭವಿ ಆಫ್‌ ಸ್ಪಿನ್ನರ್ ಮತ್ತು ಮಾಜಿ ನಾಯಕಿ ಸನಾ ಮಿರ್‌ ಅವರನ್ನು ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಗಾಗಿ ಪ್ರಕಟಿಸಿರುವ ಪಾಕಿಸ್ತಾನ ತಂಡದಿಂದ ಕೈಬಿಡಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಟೂರ್ನಿಗಾಗಿ 15 ಮಂದಿಯ ತಂಡವನ್ನು ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿತು. ಬಿಸ್ಮಾ ಮರೂಫ್ ಅವರಿಗೆ ನಾಯಕತ್ವವನ್ನು ವಹಿಸಲಾಗಿದೆ. 15 ವರ್ಷದ ಆಯೆಷಾ ನಸೀಮ್ ಮತ್ತು 16 ವರ್ಷದ ಅರೂಬ್ ಶಾ ಅವರನ್ನು ತಂಡಕ್ಕೆ ಸೇರಿಸಲಾಗಿದ್ದು ಮುನೀಬಾ ಅಲಿ ಮತ್ತು ಅಯ್ಮೆನ್ ಅನ್ವರ್‌ ಅವರಿಗೆ ಎರಡು ವರ್ಷಗಳ ನಂತರ ಅವಕಾಶ ನೀಡಲಾಗಿದೆ.

34 ವರ್ಷದ ಸನಾ ಏಕದಿನ ಮತ್ತು ಟ್ವೆಂಟಿ–20 ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು. 120 ಏಕದಿನ ಪಂದ್ಯ ಮತ್ತು 102 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. 2005ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು ಒಟ್ಟು 240 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನ ಪರವಾಗಿ ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆ ಅವರ ಹೆಸರಿನಲ್ಲಿದೆ.

ADVERTISEMENT

‘ಅಂತರರಾಷ್ಟ್ರೀಯ ಮತ್ತು ದೇಶಿ ಟೂರ್ನಿಗಳಲ್ಲಿ ಇತ್ತೀಚೆಗೆ ತೋರಿದ ಸಾಮರ್ಥ್ಯ ಪರಿಗಣಿಸಿ ಮತ್ತು ತಂಡದ ಯೋಜನೆಗಳಿಗೆ ಅನುಸಾರವಾಗಿ ಸನಾ ಅವರನ್ನು ಕೈಬಿಡಲಾಗಿದೆ. ಆಯೆಷಾ ನಸೀಮ್ ಮತ್ತು ಅರೂಬ್ ಶಾ ಅವರನ್ನು ತಂಡಕ್ಕೆ ಸೇರಿಸುವ ಮೂಲಕ ಯುವ ಆಟಗಾರ್ತಿಯರಿಗೆ ಅವಕಾಶ ನೀಡುವ ಪ್ರಯತ್ನ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥೆ ಉರೂಜ್ ಮುಮ್ತಾಜ್ ತಿಳಿಸಿದರು.

ತಂಡ: ಬಿಸ್ಮಾ ಮರೂಫ್ (ನಾಯಕಿ), ಅಯ್ಮನ್ ಅನ್ವರ್‌, ಅಲಿಯಾ ರಿಯಾಜ್, ಅನಾಮ್ ಅಮೀನ್, ಆಯೆಷಾ ನಸೀಮ್‌, ಡಯಾನ ಬೇಗ್‌, ಫಾತಿಮಾ ಸನಾ, ಇರಮ್ ಜಾವೇದ್‌, ಜವೇರಿಯಾ ಖಾನ್, ಮುನೀಬಾ ಅಲಿ, ನೀದಾ ದರ್‌, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ಸೈಯದ್ ಅರೂಬ್ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.