ADVERTISEMENT

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ರಹಾನೆ ಫಾರ್ಮ್ ಪ್ರಶ್ನಿಸಿದ ಸಂಜಯ್ ಮಂಜ್ರೇಕರ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 9:58 IST
Last Updated 10 ಫೆಬ್ರುವರಿ 2021, 9:58 IST
   

ಚೆನ್ನೈ: ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 227 ರನ್‌ಗಳ ಹೀನಾಯ ಸೋಲನುಭವಿಸುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಉಪನಾಯಕ ಅಜಿಂಕ್ಯ ರಹಾನೆ ಅವರ ಫಾರ್ಮ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ರಹಾನೆ ಅವರು ನಿನ್ನೆ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಡಿಮೆ ಮೊತ್ತಕ್ಕೆ ನಿರ್ಗಮಿಸಿದ್ದು ಸೇರಿ ಅವರ ಕಳಪೆ ಪ್ರದರ್ಶನಗಳ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ನಾಯಕನಾಗಿ, ಒಬ್ಬ ಬ್ಯಾಟ್ಸ್‌ಮನ್ ಆಗಿ ರಹಾನೆ ಹೇಗೆ ಎಂಬುದು ನನ್ನ ಪ್ರಶ್ನೆಯಾಗಿದೆ.ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 112 ರನ್ ಗಳಿಸಿದಾಗಿನಿಂದ, ಭಾರತದ ಉಪನಾಯಕ ರಹಾನೆ, ಚೆನ್ನೈ ಟೆಸ್ಟ್ ಪಂದ್ಯ ಸೇರಿ ನಂತರದ ಪಂದ್ಯಗಳಲ್ಲಿ 27 *, 22, 4, 37, 24, 1 ಮತ್ತು 0 ರನ್ ಗಳಿಸಿದ್ದಾರೆ. ಕ್ಲಾಸ್ ಆಟಗಾರರು ತಮ್ಮ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಮತ್ತು ಇತರ ಫಾರ್ಮ್ ಕಳೆದುಕೊಂಡ ಆಟಗಾರರ ಹೊರೆಯನ್ನು ಹೊರುತ್ತಾರೆ ." ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಕಳೆದ ವರ್ಷಾಂತ್ಯದಲ್ಲಿ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತೆರಳಿದ್ಧಾಗ 3 ಟೆಸ್ಟ್ ಪಂದ್ಯಗಳಲ್ಲಿ ರಹಾನೆ ಭಾರತ ತಂಡವನ್ನು ಮುನ್ನಡೆಸಿದ್ದರು. ರಹಾನೆ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯ ಗೆದ್ದ ಭಾರತ ಬಾರ್ಡರ್–ಗವಾಸ್ಕರ್ ಟ್ರೋಫಿಯನ್ನು ಗೆದ್ದಿತ್ತು.

ಈ ಮಧ್ಯೆ, ಎಂಸಿಜಿ ಶತಕದ ಬಳಿಕ ರಹಾನೆ ಅವರ ಫಾರ್ಮ್ ಬಗ್ಗೆ ಕೇಳಿದಾಗ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಆಸಕ್ತಿ ತೋರಲಿಲ್ಲ.

ಚೆನ್ನೈ ಪಂದ್ಯದ 5ನೇ ದಿನದಾಟದಲ್ಲಿ ಜೇಮ್ಸ್ ಅಂಡರ್ಸನ್ ಎಸತದಲ್ಲಿ ರಹಾನೆ ಔಟ್ ಆದ ಪರಿ ಬಗ್ಗೆ ಪ್ರಶ್ನಿಸಿದಾಗ, ನಾನು ಕೂಡ ಕೂಡ ಔಟ್ ಆಗಿದ್ದೇನೆ. ಈ ರೀತಿ ಹುಡುಕುತ್ತಾ ಹೋದರೆ ಏನೂ ಸಿಗುವುದಿಲ್ಲ ಎಂದಿದ್ದಾರೆ.

"ಈ ಹಿಂದೆಯೂ ನಾನು ಹಲವು ಬಾರಿ ಹೇಳಿದ್ದೇನೆ. ಚೆತೇಶ್ವರ್ ಪೂಜಾರ ಜೊತೆಗೆ ಅಜಿಂಕ್ಯ ರಹಾನೆ ನಮ್ಮ ಅತ್ಯಂತ ಪ್ರಮುಖ ಟೆಸ್ಟ್ ಆಟಗಾರ. ಅವರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಅವರು ಪರಿಣಾಮಕಾರಿ ಆಟಗಾರ ಎಂದಿದ್ದಾರೆ.

"ನೀವು ಎಂಸಿಜಿ ಟೆಸ್ಟ್ ಬಗ್ಗೆ ಮಾತನಾಡುವುದಾದರೆ, ತಂಡಕ್ಕೆ ಹೆಚ್ಚು ಅಗತ್ಯವಿದ್ದ ಸಂದರ್ಭ ಗಟ್ಟಿಯಾಗಿ ನಿಂತು ಶತಕ ಗಳಿಸಿದರು. ನೀವು ಇನ್ನಿಂಗ್ಸ್ ಸಂಖ್ಯೆಯನ್ನು ನೋಡಿದರೆ ಅದರಿಂದ ಏನಾಗುತ್ತದೆ, ವಾಸ್ತವವೆಂದರೆ ನಾವು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದ್ದೇವೆ." ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.