ADVERTISEMENT

Ranji Trophy: ಶ್ರೇಯಸ್ 8 ವಿಕೆಟ್ ಉರುಳಿಸಿದರೂ ಮುನ್ನಡೆ ಬಿಟ್ಟುಕೊಡದ ಸೌರಾಷ್ಟ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2025, 9:07 IST
Last Updated 17 ಅಕ್ಟೋಬರ್ 2025, 9:07 IST
<div class="paragraphs"><p>ಸೌರಾಷ್ಟ್ರ ಹಾಗೂ ಕರ್ನಾಟಕ ನಡುವಣ&nbsp; ರಣಜಿ ಪಂದ್ಯ</p></div>

ಸೌರಾಷ್ಟ್ರ ಹಾಗೂ ಕರ್ನಾಟಕ ನಡುವಣ  ರಣಜಿ ಪಂದ್ಯ

   

ಕೃಪೆ: ಪಿಟಿಐ

ರಾಜ್‌ಕೋಟ್: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ತಂಡವು ಕರ್ನಾಟಕ ಎದುರು ಇನಿಂಗ್ಸ್‌ ಮುನ್ನಡೆ ಪಡೆದಿದೆ. ಅನುಭವಿ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಎಂಟು ವಿಕೆಟ್‌ ಪಡೆದು ತೀವ್ರ ಪೈಪೋಟಿ ನಡೆಸಿದರೂ, ಮೇಲುಗೈ ಸಾಧಿಸುವ ಅವಕಾಶ ಕರ್ನಾಟಕದ ಕೈಯಿಂದ ಸ್ವಲ್ಪದರಲ್ಲೇ ಜಾರಿತು.

ADVERTISEMENT

ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, 372 ರನ್‌ ಕಲೆಹಾಕಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ 376 ರನ್‌ ಗಳಿಸಿ ಸರ್ವಪತನ ಕಂಡಿದೆ.

ಚಿರಾಗ್‌ ಜಾನಿ (90) ಅಮೋಘ ಅರ್ಧಶತಕದ ಹೊರತಾಗಿಯೂ ಸೌರಾಷ್ಟ್ರ ತಂಡ 342 ರನ್‌ ಗಳಿಸುವಷ್ಟರಲ್ಲೇ 9 ವಿಕೆಟ್‌ ಕಳೆದುಕೊಂಡಿತ್ತು. ಹೀಗಾಗಿ, ಮುನ್ನಡೆ ಸಾಧಿಸಿರುವ ಅವಕಾಶ ಮಯಂಕ್‌ ಅಗರವಾಲ್‌ ಪಡೆಗೆ ಇತ್ತು. ಅದನ್ನು, ಚೇತನ್‌ ಸಕಾರಿಯಾ ಹಾಗೂ ಯುವರಾಜ್‌ ಸಿನ್ಹ ದೊಡಿಯಾ ಜೋಡಿ ತಪ್ಪಿಸಿತು. ಕೊನೇ ವಿಕೆಟ್‌ ಜೊತೆಯಾಟದಲ್ಲಿ ಛಲ ಬಿಡದೆ ಆಡಿದ ಈ ಇಬ್ಬರು, 10ನೇ ವಿಕೆಟ್‌ಗೆ 34 ರನ್‌ ಕಲೆಹಾಕುವ ಮೂಲಕ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

71 ಎಸೆತಗಳಲ್ಲಿ 29 ರನ್‌ ಗಳಿಸಿದ ಸಕಾರಿಯಾ, ಕೊನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರುವ ಮುನ್ನ ತಮ್ಮ ಜವಾಬ್ದಾರಿ ಪೂರೈಸಿದರು. ಅವರಿಗೆ ಸಹಕಾರ ನೀಡಿದ ಯುವರಾಜ್‌, 34 ಎಸೆತಗಳಲ್ಲಿ 13 ರನ್‌ ಗಳಿಸಿ ಅಜೇಯವಾಗಿ ಉಳಿದರು.

ಕರ್ನಾಟಕದ ಪರ ಅಮೋಘ ಬೌಲಿಂಗ್‌ ಮಾಡಿದ ಶ್ರೇಯಸ್‌ ಗೋಪಾಲ್‌, 39.3 ಓವರ್‌ಗಳಲ್ಲಿ 110 ರನ್‌ ನೀಡಿ ಎಂಟು ವಿಕೆಟ್‌ಗಳನ್ನು ಪಡೆದರು. ಶಿಖರ್‌ ಶೆಟ್ಟಿ ಹಾಗೂ ಮೊಹ್ಸಿನ್‌ ಖಾನ್‌ ಒಂದೊಂದು ವಿಕೆಟ್‌ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.