ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ವಿಜೃಂಭಿಸಿದ ಸೌರಾಷ್ಟ್ರ ಬ್ಯಾಟಿಂಗ್ ವೈಭವ

ಋತುವಿನ ಮೊದಲ ಶತಕ ಸಿಡಿಸಿದ ಸ್ನೆಲ್ ಪಟೇಲ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 15:58 IST
Last Updated 5 ಫೆಬ್ರುವರಿ 2019, 15:58 IST
ಶತಕ ಸಿಡಿಸಿದ ಸ್ನೆಲ್ ಪಟೇಲ್ ಸಂಭ್ರಮಿಸಿದ ರೀತಿ –ಪಿಟಿಐ ಚಿತ್ರ
ಶತಕ ಸಿಡಿಸಿದ ಸ್ನೆಲ್ ಪಟೇಲ್ ಸಂಭ್ರಮಿಸಿದ ರೀತಿ –ಪಿಟಿಐ ಚಿತ್ರ   

ನಾಗಪುರ: ಕರ್ನಾಟಕದ ಎದುರು ಅಮೋಘ ಬ್ಯಾಟಿಂಗ್ ಸಾಮರ್ಥ್ಯ ತೋರಿ ಗೆದ್ದಿದ್ದ ಸೌರಾಷ್ಟ್ರ ತಂಡ ಮತ್ತೊಮ್ಮೆ ತನ್ನ ಬ್ಯಾಟಿಂಗ್ ವೈಭವವನ್ನು ಜಾಹೀರು ಮಾಡಿತು.

ಇಲ್ಲಿನ ಜಾಮ್ತ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಮೂರನೇ ದಿನ ಎದುರಾಳಿ ವಿದರ್ಭದ ಬೌಲರ್‌ಗಳನ್ನು ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳು ಕಾಡಿದರು.

ಬಾಲಂಗೋಚಿಗಳ ಕೆಚ್ಚೆದೆಯ ಹೋರಾಟದ ಫಲವಾಗಿ ಜಯದೇವ ಉನದ್ಕತ್ ಬಳಗ ಕೇವಲ ಐದು ರನ್‌ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ವಿದರ್ಭ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡಿದ್ದು 60 ರನ್‌ಗಳ ಮುನ್ನಡೆಯಲ್ಲಿದೆ.

ADVERTISEMENT

ಆತಿಥೇಯರ 312 ರನ್‌ಗಳಿಗೆ ಉತ್ತರಿಸಿದ ಸೌರಾಷ್ಟ್ರ ಎರಡನೇ ದಿನವಾದ ಸೋಮವಾರ ಐದು ವಿಕೆಟ್ ಕಳೆದುಕೊಂಡು 158 ರನ್‌ ಗಳಿಸಿತ್ತು. ಆದ್ದರಿಂದ ತೀವ್ರ ಹಿನ್ನಡೆ ಅನುಭವಿಸುವ ಆತಂಕ ಎದುರಾಗಿತ್ತು.

ಆರಂಭಿಕ ಬ್ಯಾಟ್ಸ್‌ಮನ್ ಸ್ನೆಲ್ ಪಟೇಲ್‌ 87 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅವರು ಬೆಳಿಗ್ಗೆ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಅವರ ಈ ಋತುವಿನ ಮೊದಲ ಶತಕವಾಗಿದೆ. 102 (209 ಎಸೆತ, 15 ಬೌಂಡರಿ) ರನ್‌ ಗಳಿಸಿದ್ದಾಗ ಅವರನ್ನು ಉಮೇಶ್ ಯಾದವ್‌ ವಾಪಸ್ ಕಳುಹಿಸಿದರು. ಈ ಸಂದರ್ಭದಲ್ಲಿ ಸೌರಾಷ್ಟ್ರ 128 ರನ್‌ಗಳಿಂದ ಹಿಂದೆ ಉಳಿದಿತ್ತು. ಪ್ರೇರಕ್ ಮಂಕಡ್‌, ಕಮಲೇಶ್ ಮಕ್ವಾನ ಮತ್ತು ಧರ್ಮೇಂದ್ರ ಸಿಂಗ್ ಜಡೇಜ ಉಪಯುಕ್ತ ಬ್ಯಾಟಿಂಗ್ ಮಾಡಿದರು. ಆದರೆ 247 ರನ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡಿದ್ದಾಗ ತಂಡ ನಿರಾಸೆಗೆ ಒಳಗಾಯಿತು.

ಈ ಸಂದರ್ಭದಲ್ಲಿ ಜೊತೆಗೂಡಿದ ನಾಯಕ ಜಯದೇವ ಉನದ್ಕತ್ (46; 101 ಎಸೆತ, 4 ಬೌಂಡರಿ) ಮತ್ತು ಚೇತನ್ ಸಕಾರಿಯ (28; 82 ಎಸೆತ, 4 ಬೌಂಡರಿ) 60 ರನ್ ಸೇರಿಸಿದರು. ಇನಿಂಗ್ಸ್ ಮುನ್ನಡೆಯ ಸನಿಹದಲ್ಲಿದ್ದಾಗ ಅಕ್ಷಯ್‌ ವಾಖರೆ ಅವರ ಎಸೆತವನ್ನು ಸ್ವೀಪ್ ಮಾಡಿ ಬೌಂಡರಿ ಗಳಿಸಲು ಪ್ರಯತ್ನಿಸಿದ ಉನದ್ಕತ್ ಎಡವಿದರು. ಸ್ಕ್ವೇರ್‌ ಲೆಗ್‌ನಲ್ಲಿದ್ದ ಸಂಜಯ್ ರಾಮಸ್ವಾಮಿ ಸುಲಭ ಕ್ಯಾಚ್‌ ಪಡೆದರು.

ನೀರಸ ಆರಂಭ: ವಿದರ್ಭ ತಂಡದ ಆರಂಭ ನೀರಸವಾಗಿತ್ತು. ನಾಯಕ ಫೈಜ್ ಫಜಲ್‌ ಔಟಾದಾಗ ತಂಡದ ಮೊತ್ತ ಕೇವಲ 16 ರನ್‌ ಆಗಿತ್ತು. ಸಂಜಯ್ ರಾಮಸ್ವಾಮಿ 16 ರನ್‌ ಗಳಿಸಿ ಮರಳಿದರು. ಗಣೇಶ್ ಸತೀಶ್‌ ಮತ್ತು ವಾಸಿಂ ಜಾಫರ್ ತಂಡಕ್ಕೆ ಭರವಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.