ADVERTISEMENT

ಮತ್ತೆ ಸುರಿಯುವುದೇ ರನ್‌ ಮಳೆ?

ಈಡನ್‌ ಪಾರ್ಕ್‌ನಲ್ಲಿ ಎರಡನೇ ಟ್ವೆಂಟಿ–20 ಪಂದ್ಯ ಇಂದು: ಮತ್ತೊಂದು ಜಯದ ಮೇಲೆ ಕೊಹ್ಲಿ ಪಡೆಯ ಕಣ್ಣು

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 2:55 IST
Last Updated 26 ಜನವರಿ 2020, 2:55 IST
ಶ್ರೇಯಸ್ ಅಯ್ಯರ್ –ಎಎಫ್‌ಪಿ ಚಿತ್ರ
ಶ್ರೇಯಸ್ ಅಯ್ಯರ್ –ಎಎಫ್‌ಪಿ ಚಿತ್ರ   

ಆಕ್ಲೆಂಡ್‌: ಎರಡು ದಿನಗಳ ಹಿಂದಷ್ಟೇ ರನ್‌ ಹೊಳೆ ಹರಿದಿದ್ದ ಈಡನ್‌ ಪಾರ್ಕ್‌ ಮೈದಾನದಲ್ಲಿ ಈಗ ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ. ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಎರಡನೇ ಟ್ವೆಂಟಿ–20 ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ಈ ಹಣಾಹಣಿಯಲ್ಲೂ ರನ್‌ ಮಳೆ ಸುರಿಯುವ ನಿರೀಕ್ಷೆ ಇದೆ.

ಬ್ಯಾಟ್ಸ್‌ಮನ್‌ಗಳ ಪಾಲಿನ ‘ಸ್ವರ್ಗ’ ಎನಿಸಿರುವ ಈಡನ್‌ ಅಂಗಳದಲ್ಲಿ ಶುಕ್ರವಾರ ಒಟ್ಟು 407ರನ್‌ಗಳು ದಾಖಲಾಗಿದ್ದವು. 204ರನ್‌ಗಳ ಸವಾಲಿನ ಗುರಿಯನ್ನು ಭಾರತ ಸುಲಭವಾಗಿ ಬೆನ್ನಟ್ಟಿತ್ತು. ಈ ಗೆಲುವಿ ನಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ವಿರಾಟ್‌ ಕೊಹ್ಲಿ ಬಳಗವನ್ನು ಕಟ್ಟಿಹಾಕುವ ಸವಾಲು ಆತಿಥೇಯರಿಗೆ ಎದುರಾಗಿದೆ.

ಮೊದಲ ಪಂದ್ಯದಲ್ಲಿ ಮಧ್ಯಮ ವೇಗಿ ಜಸ್‌ಪ್ರೀತ್‌ ಬೂಮ್ರಾ ‘ಡೆತ್‌ ಓವರ್‌ಗಳಲ್ಲಿ’ ಪರಿಣಾಮಕಾರಿ ದಾಳಿ ನಡೆಸಿ ನ್ಯೂಜಿಲೆಂಡ್‌ ತಂಡದ ರನ್‌ ವೇಗಕ್ಕೆ ಬ್ರೇಕ್‌ ಹಾಕಿದ್ದರು. 18 ಮತ್ತು 20ನೇ ಓವರ್‌ ಮಾಡಿದ ಅವರು ಕೇವಲ16 ರನ್‌ ಬಿಟ್ಟುಕೊಟ್ಟಿದ್ದರು. ಹೀಗಾಗಿ ಕಿವೀಸ್‌ ಬಳಗ, ಪ್ರಬಲ ಪ್ರವಾಸಿಗರಿಗೆ ಅಂದುಕೊಂಡಿದ್ದಕ್ಕಿಂತ 15 ರಿಂದ 20 ರನ್‌ ಕಡಿಮೆ ಮೊತ್ತದ ಗುರಿ ನಿಗದಿಮಾಡಿತ್ತು.

ADVERTISEMENT

ಅಧಿಕಾರಯುತವಾಗಿ ಗೆದ್ದ ಭಾರತ ತಂಡದಲ್ಲಿ ಬದಲಾವಣೆಯ ಸಾಧ್ಯತೆಯಿಲ್ಲ. ಇದ್ದರೂ ಅದು ಬೌಲಿಂಗ್‌ ವಿಭಾಗದಲ್ಲಿ ಮಾತ್ರ ಆಗಬಹುದು. ಮೊಹಮ್ಮದ್‌ಶಮಿ (4 ಓವರುಗಳಲ್ಲಿ 53) ಮತ್ತು ಶಾರ್ದೂಲ್‌ ಠಾಕೂರ್‌ ಅವರನ್ನು ನ್ಯೂಜಿಲೆಂಡ್‌ ಆಟಗಾರರು ಹಿಗ್ಗಾಮುಗ್ಗಾ ದಂಡಿಸಿದ್ದರು. ಅನುಭವಿ ಶಮಿ ಸ್ಥಾನ ಉಳಿಸಿಕೊಂಡರೂ, ಠಾಕೂರ್‌ ಬದಲು ನವದೀಪ್‌ ಸೈನಿಗೆ ಅವಕಾಶ ಸಿಗಬಹುದು.

ಹೀಗಾಗಿ ಎರಡನೇ ಪಂದ್ಯದಲ್ಲೂ ಪ್ರವಾಸಿ ತಂಡ, ಮೂರು ವೇಗದ ಬೌಲರ್‌, ಇಬ್ಬರು ಸ್ಪಿನ್ನರ್‌ಗಳ ಸಂಯೋ ಜನೆಯೊಂದಿಗೆ ಕಣಕ್ಕೆ ಇಳಿಯುವ ಸಂಭವ ಹೆಚ್ಚು. ಯಜುವೇಂದ್ರ ಚಾಹಲ್‌, ರವೀಂದ್ರ ಜಡೇಜ ಒಟ್ಟು 36 ಎಸೆತಗಳಲ್ಲಿ 50 ರನ್‌ ನೀಡಿದ್ದು, ಒಂದೊಂದು ವಿಕೆಟ್ ಪಡೆದಿದ್ದು ಕಡಿಮೆ ಸಾಧನೆಯೇನಲ್ಲ. ಕುಲದೀಪ್‌ ಯಾದವ್‌ ಸ್ಪಿನ್ನರ್‌ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ.

ಮೊದಲ ಪಂದ್ಯದಲ್ಲಿ ಬ್ಯಾಟ್ಸ್‌ಮನ್ನರು ತೋರಿದ ನಿರ್ವಹಣೆ ವಿರಾಟ್‌ ಕೊಹ್ಲಿ ಮೆಚ್ಚುವಂತೆ ಇತ್ತು. ದೇಶದಿಂದ ಹೊರಗೆ ಟಿ–20ಯಲ್ಲಿ ಇದು (202) ಭಾರತದ ಅತೀ ಹೆಚ್ಚಿನ ರನ್‌ ಚೇಸ್‌ ಎನಿಸಿತ್ತು.

ಶ್ರೇಯಸ್‌ ಅಯ್ಯರ್‌ 29 ಎಸೆತಗಳಲ್ಲಿ ಅಜೇಯ 58 ರನ್ ಹೊಡೆದು ನಾಲ್ಕನೇ ಕ್ರಮಾಂಕದಲ್ಲಿ ಬೇರೂರುವಂತೆ ಕಾಣುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ನಿಂದೀಚೆ ಭಾರತ ಆಡಿರುವ ಎಲ್ಲ 12 ಟಿ–20 ಪಂದ್ಯಗಳಲ್ಲಿ ಆಡಿರುವ ಅವರು 11 ಇನಿಂಗ್ಸ್‌ಗಳಿಂದ 34.14ರ ಸರಾಸರಿ (ಸ್ಟ್ರೈಕ್‌ ರೇಟ್‌ 154.19) ದಾಖಲಿಸಿದ್ದಾರೆ.

ವಿಕೆಟ್‌ ಕೀಪಿಂಗ್‌ ನಿರ್ವಹಣೆಯ ಜೊತೆ ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ನಲ್ಲೂ ಒಳ್ಳೆಯ ಲಯದಲ್ಲಿದ್ದಾರೆ. ಇನ್ನೊಬ್ಬ ಕನ್ನಡಿಗ ಮನೀಷ್‌ ಪಾಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಾಣುತ್ತಿಲ್ಲ.

ಆತಿಥೇಯರಿಗೆ ಒತ್ತಡ: ಶುಕ್ರವಾರದ ಪಂದ್ಯದಲ್ಲಿ ಬ್ಯಾಟಿಂಗ್‌ ವೇಳೆ ಕೊನೆಯಲ್ಲಿ ನ್ಯೂಜಿಲೆಂಡ್‌ಗೆ ಭಾರತ ಕೊಂಚ ಕಡಿವಾಣ ಹಾಕಿತ್ತು. ಹೀಗಾಗಿ ಒಂದು ಹಂತದಲ್ಲಿ ಅಂದುಕೊಂಡ ರೀತಿ 220ರ ಗಡಿಯ ಬಳಿ ಸಾಗಲು ಸಾಧ್ಯವಾಗಲಿಲ್ಲ. ಜೊತೆಗೆ ಕ್ಷೇತ್ರ ರಕ್ಷಣೆಯಲ್ಲೂ ಕೆಲವು ತಪ್ಪುಗಳಾದ ಪರಿಣಾಮ ಭಾರತದ ಬ್ಯಾಟ್ಸಮನ್ನರು ನಾಗಾಲೋಟದಲ್ಲಿ ಗುರಿಯತ್ತ ಸಾಗಲು ದಾರಿಮಾಡಿಕೊಟ್ಟಿತು. ಭಾರತ ಆಕ್ಲೆಂಡ್‌ ಪರಿಸ್ಥಿತಿಗೆ ಒಗ್ಗಿಕೊಂಡ ರೀತಿ ಆತಿಥೇಯರಿಗೆ ಅಚ್ಚರಿಗೆ ಕಾರಣ ವಾಗಿತ್ತು.

ಭಾರತ 2019ರ ಫೆಬ್ರುವರಿಯಲ್ಲೂ ಇಲ್ಲಿ ನಡೆದ (ಆಗ ಮೂರು ಪಂದ್ಯಗಳ ಟಿ–20) ಸರಣಿಯನ್ನು 2–1 ರಿಂದ ಗೆದ್ದುಕೊಂಡಿತ್ತು.ಹೀಗಾಗಿ ನ್ಯೂಜಿಲೆಂಡ್‌ ಮೇಲೆ ಹೆಚ್ಚು ಒತ್ತಡವಿದೆ.

ಇಷ್ಟಾದರೂ ತಂಡದಲ್ಲಿ ಬದಲಾ ವಣೆಯ ಸಾಧ್ಯತೆ ಕಡಿಮೆ.ಹಿರಿಯ ಆಟಗಾರರಾದ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಆಕ್ರಮಣಕಾರಿಯಾಗಿ ಆಡಿ ಅರ್ಧ ಶತಕಗಳನ್ನು ಬಾರಿಸಿ ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ. ಕಾಲಿನ್‌ ಮನ್ರೊ ಮತ್ತು ಗಪ್ಟಿಲ್‌ ತಂಡಕ್ಕೆ ಮಿಂಚಿನ ಆರಂಭ ಒದಗಿಸಿದ್ದಾರೆ. ಆತಿಥೇಯರು, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ ಮತ್ತು ಟಿಮ್‌ ಸೀಫರ್ಟ್‌ ಅವರಿಂದಲೂ ಉತ್ತಮ ಆಟ ನಿರೀಕ್ಷಿಸುತ್ತಿದ್ದಾರೆ.

ತಂಡಗಳು

ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌ (ವಿಕೆಟ್‌ ಕೀಪರ್‌), ಮನೀಷ್‌ ಪಾಂಡೆ, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬೂಮ್ರಾ, ಶಾರ್ದೂಲ್‌ ಠಾಕೂರ್‌, ನವದೀಪ್‌ ಸೈನಿ ಮತ್ತು ವಾಷಿಂಗ್ಟನ್‌ ಸುಂದರ್.

ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಮಾರ್ಟಿನ್‌ ಗಪ್ಟಿಲ್‌, ರಾಸ್‌ ಟೇಲರ್‌, ಸ್ಕಾಟ್‌ ಕುಗ್ಗಲೀನ್‌, ಕಾಲಿನ್‌ ಮನ್ರೊ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌, ಟಾಮ್‌ ಬ್ರೂಸ್‌, ಡೇರಿಲ್‌ ಮಿಷೆಲ್, ಮಿಷೆಲ್‌ ಸ್ಯಾಂಟನರ್‌, ಟಿಮ್‌ ಸೀಫರ್ಟ್‌ (ವಿಕೆಟ್‌ ಕೀಪರ್‌), ಹಮಿಶ್‌ ಬೆನೆಟ್‌, ಈಶ್‌ ಸೋಧಿ, ಟಿಮ್‌ ಸೌಥೀ, ಬ್ಲೇರ್ ಟಿಕ್ನರ್‌.

ಪಂದ್ಯ ಆರಂಭ: ಮಧ್ಯಾಹ್ನ 12.20 ರಿಂದ.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.