
ದುಬೈ: ವಿಶ್ವಕಪ್ ವಿಜೇತ ಭಾರತ ತಂಡದ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಅವರು ಐಸಿಸಿ ‘ನವೆಂಬರ್ ತಿಂಗಳ ಆಟಗಾರ್ತಿ’ ಪ್ರಶಸ್ತಿಗೆ ಶುಕ್ರವಾರ ನಾಮನಿರ್ದೇಶನಗೊಂಡಿದ್ದಾರೆ. ಯುಎಇ ತಂಡದ ಈಶಾ ಓಝಾ ಹಾಗೂ ಥಾಯ್ಲೆಂಡ್‌ನ ತಿಪಾಚಾ ಪುತ್ತವಾಂಗ್ ಸಹ ಈ ಗೌರವಕ್ಕೆ ನಾಮನಿರ್ದೇಶನ ಪಡೆದಿದ್ದಾರೆ.
ಶಫಾಲಿ ಅವರು ಮುಂಬೈನ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನವೆಂಬರ್ 2ರಂದು ನಡೆದ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 87 ರನ್ (78 ಎಸೆತ, 4x7, 6x2) ಗಳಿಸಿದ್ದರು. ಬೌಲಿಂಗ್‌ನಲ್ಲಿಯೂ ಕೈಚಳಕ ತೋರಿ 2 ವಿಕೆಟ್ ಪಡೆದಿದ್ದರು. ಪಂದ್ಯದ ಆಟಗಾರ್ತಿ ಗೌರವಕ್ಕೂ ಭಾಜನರಾಗಿದ್ದರು.
ಆಲ್‌ರೌಂಡರ್ ಓಝಾ ಅವರು ಬ್ಯಾಂಕಾಕ್‌ನಲ್ಲಿ ನಡೆದ ಚೊಚ್ಚಲ ‘ಐಸಿಸಿ ಮಹಿಳಾ ಎಮರ್ಜಿಂಗ್ ರಾಷ್ಟ್ರಗಳ ಟ್ರೋಫಿ’ ಟೂರ್ನಿಯಲ್ಲಿ 187 ರನ್ ಗಳಿಸಿ, 7 ವಿಕೆಟ್ ಪಡೆದಿದ್ದರು. ಪುತ್ತವಾಂಗ್ ಅವರು ಟೂರ್ನಿಯಲ್ಲಿ ಜಂಟಿ ಅತಿ ಹೆಚ್ಚು ವಿಕೆಟ್ (15) ಪಡೆದಿದ್ದರು.
ಪುರುಷರ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಸಿಮೊನ್ ಹಾರ್ಮರ್, ಬಾಂಗ್ಲಾದೇಶದ ತೈಜುಲ್ ಇಸ್ಲಾಂ ಹಾಗೂ ಪಾಕಿಸ್ತಾನ ತಂಡದ ಮೊಹಮ್ಮದ್ ನವಾಜ್ ನಾಮನಿರ್ದೇಶನಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.