ADVERTISEMENT

ಐಸಿಸಿ ಮಹಿಳಾ ಟಿ–20 ರ‍್ಯಾಂಕಿಂಗ್ | ಅಗ್ರಸ್ಥಾನಕ್ಕೆ ಜಿಗಿದ ಶಫಾಲಿ ವರ್ಮಾ

ದೀಪ್ತಿ ಸ್ಥಾನ ಏರಿಕೆ

ಪಿಟಿಐ
Published 4 ಮಾರ್ಚ್ 2020, 17:23 IST
Last Updated 4 ಮಾರ್ಚ್ 2020, 17:23 IST
ಶಫಾಲಿ ವರ್ಮಾ– ಪಿಟಿಐ ಚಿತ್ರ
ಶಫಾಲಿ ವರ್ಮಾ– ಪಿಟಿಐ ಚಿತ್ರ   

ಸಿಡ್ನಿ: ಭಾರತದ ಯುವ ಆಟಗಾರ್ತಿ ಶಫಾಲಿ ವರ್ಮಾ ಐಸಿಸಿ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಬ್ಯಾಟ್ಸ್‌ವುಮೆನ್‌ ರ‍್ಯಾಂಕಿಂಗ್‌ನಲ್ಲಿ ಬುಧವಾರ ಅಗ್ರಸ್ಥಾನಕ್ಕೆ ಏರಿದ್ದಾರೆ. ಸದ್ಯ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿನ ಸೊಗಸಾದ ಆಟ ಅವರ ಈ ಸಾಧನೆಗೆ ಕಾರಣವಾಗಿದೆ.

16 ವರ್ಷದ ಶಫಾಲಿ, ನ್ಯೂಜಿಲೆಂಡ್‌ನ ಸುಜಿ ಬೇಟ್ಸ್‌ ಅವರನ್ನು ಹಿಂದಿಕ್ಕಿದ್ದಾರೆ. ಬೇಟ್ಸ್‌ 2018ರ ಅಕ್ಟೋಬರ್‌ನಿಂದ ನಂ.1 ಸ್ಥಾನದಲ್ಲಿದ್ದರು. ಅವರಿಗಿಂತ ಮೊದಲು ವೆಸ್ಟ್‌ ಇಂಡೀಸ್‌ನ ಸ್ಟೆಫಾನಿ ಟೇಲರ್‌ ಈ ಜಾಗದಲ್ಲಿದ್ದರು.

ಆರಂಭಿಕ ಆಟಗಾರ್ತಿಯಾಗಿರುವ ಶಫಾಲಿ, ಈ ವಿಶ್ವಕಪ್‌ ಟೂರ್ನಿಯಲ್ಲಿ ನಾಲ್ಕು ಇನಿಂಗ್ಸ್‌ಗಳಿಂದ 161 ರನ್‌ ಕಲೆ ಹಾಕಿದ್ದಾರೆ. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ಎದುರಿನ ಪಂದ್ಯಗಳಲ್ಲಿ ಕ್ರಮವಾಗಿ ಅವರು 47 ಹಾಗೂ 46 ರನ್‌ ಹೊಡೆದಿದ್ದರು. ಮಿಥಾಲಿ ರಾಜ್‌ ಬಳಿಕ ಈ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಬ್ಯಾಟ್ಸ್‌ವುಮನ್‌ ಶಫಾಲಿ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಎರಡು ಸ್ಥಾನ ಕೆಳಗಿಳಿದಿರುವ ಸ್ಮೃತಿ ಮಂದಾನ ಆರನೇ ಸ್ಥಾನಕ್ಕೆ ಜಾರಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್‌ ಮೊದಲ ಸ್ಥಾನ ಆಕ್ರಮಿಸಿದ್ದಾರೆ. ವಿಶ್ವಕ‍ಪ್‌ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಿಂದ ಅವರು ಗಳಿಸಿದ್ದು ಎಂಟು ವಿಕೆಟ್‌. ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ (7ಕ್ಕೆ 3) ಅವರದ್ದು ಗರಿಷ್ಠ ವಿಕೆಟ್‌ ಸಾಧನೆ.

2016ರ ಏಪ್ರಿಲ್‌ನಲ್ಲಿ ಅನ್ಯಾ ಶ್ರಬ್‌ಸೋಲ್‌ ಈ ಸ್ಥಾನ ಅಲಂಕರಿಸಿದ್ದರು. ಅವರ ಬಳಿಕ ಈ ಸ್ಥಾನಕ್ಕೇರಿದ ಇಂಗ್ಲೆಂಡ್‌ನ ಮೊದಲ ಬೌಲರ್‌ ಎಕ್ಲೆಸ್ಟೋನ್‌.

ಭಾರತದ ಬೌಲರ್‌ಗಳ ಪೈಕಿ ಪೂನಮ್‌ ಯಾದವ್‌ ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕಿ ಸೋಫಿ ಡಿವೈನ್‌ ಪಾರಮ್ಯ (ಅಗ್ರಸ್ಥಾನ) ಮೆರೆದಿದ್ದಾರೆ. ವಿಶ್ವಕಪ್‌ ಟೂರ್ನಿಗಿಂತಲೂ ಮೊದಲು ಅವರು ಆಸ್ಟ್ರೇಲಿಯಾದ ಎಲಿಸ್‌ ಪೆರಿ ಅವರೊಂದಿಗೆ ಈ ಸ್ಥಾನ ಹಂಚಿಕೊಂಚಿದ್ದರು.

ಭಾರತದ ದೀಪ್ತಿ ಶರ್ಮಾ ಒಂಬತ್ತು ಸ್ಥಾನಗಳ ಜಿಗಿತ ಕಂಡಿದ್ದಾರೆ. ಮೊದಲ ಬಾರಿಗೆ ಅಗ್ರ 10ರ ಗಡಿ (ಏಳನೇ ಸ್ಥಾನ) ಪ್ರವೇಶಿಸಿದ್ದಾರೆ.

ತಂಡಗಳ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ (290 ರೇಟಿಂಗ್‌ ಪಾಯಿಂಟ್ಸ್‌) ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಇಂಗ್ಲೆಂಡ್‌ (278) ಎರಡನೇ ಸ್ಥಾನದಲ್ಲಿದ್ದರೆ, ಭಾರತದ ಸ್ಥಾನ ನಾಲ್ಕು (266).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.