
ನವದೆಹಲಿ: ಬಾಲಿವುಡ್ ನಟ ಶಾರುಕ್ ಖಾನ್ ಅವರು ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ತಮ್ಮ ಕೆಕೆಆರ್ ಐಪಿಎಲ್ ತಂಡಕ್ಕೆ ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಮತ್ತು ಶಿವಸೇನಾ (ಶಿಂಧೆ ಬಣ) ಪಕ್ಷಗಳು ಶಾರುಖ್ ಅವರ ವಿರುದ್ಧ ಕಿಡಿಕಾರಿದರೆ, ಮುಸ್ಲಿಂ ಎನ್ನುವ ಕಾರಣಕ್ಕೆ ಶಾರುಕ್ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ನಟನ ಪರ ನಿಂತಿದೆ.
‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ರೆಹಮಾನ್ ಅವರು ಭಾರತದಲ್ಲಿ ಐಪಿಎಲ್ ತಂಡವೊಂದರ ಭಾಗವಾಗಿ ಆಟವಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಬಿಜೆಪಿ ಮತ್ತು ಶಿವಸೇನಾ (ಶಿಂಧೆ ಬಣ) ಆಕ್ರೋಶ ವ್ಯಕ್ತಪಡಿಸಿವೆ.
‘ಬಾಂಗ್ಲಾದಲ್ಲಿ ಹಿಂದೂಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ, ಮನೆಯಿಂದ ಹೊರಹಾಕಿ ಥಳಿಸಲಾಗುತ್ತಿದೆ. ಆದರೆ ಅಲ್ಲಿನ ಕ್ರಿಕೆಟಿಗನನ್ನು ಐಪಿಎಲ್ ತಂಡವೊಂದಕ್ಕೆ ಖರೀದಿಸುವುದು ದೇಶದ್ರೋಹ. ಶಾರುಕ್ ಖಾನ್ ಅಂಥವರು ದೇಶದ್ರೋಹಿಗಳು’ ಎಂದು ಬಿಜೆಪಿಯ ಸಂಗೀತ್ ಸೋಮ್ ಅವರು ಆರೋಪಿಸಿದ್ದಾರೆ.
ಶಿವಸೇನಾ ನಾಯಕ ಕೃಷ್ಣ ಹೆಗ್ಡೆ, ‘ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗುವವರು ಅಥವಾ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವರಿಗೆ ಭಾರತದಲ್ಲಿ ಆಟವಾಡಲು ಅವಕಾಶವಿಲ್ಲ. ಬಿಸಿಸಿಐ ಈ ಆಟಗಾರರನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯ ಬಾಯಿ ಜಗತಾಪ್ ಅವರು, ‘‘ಆಪರೇಷನ್ ಸಿಂಧೂರ’ದ ನಂತರವೂ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಟವಾಡುತ್ತಿದೆ. ಬಿಜೆಪಿ–ಆರ್‌ಎಸ್‌ಎಸ್‌ನ ಇಬ್ಬಗೆಯ ನೀತಿಗೆ ಈ ವಿವಾದವೇ ಸಾಕ್ಷಿ’ ಎಂದು ಹೇಳಿದ್ದಾರೆ.
‘ಶಾರುಕ್ ಅವರೊಬ್ಬರೇ ತಂಡವನ್ನು ಆಯ್ಕೆ ಮಾಡಿಲ್ಲ. ಎಲ್ಲದಕ್ಕೂ ಪ್ರಕ್ರಿಯೆ ಎಂದಿರುತ್ತದೆ. ಶಾರುಕ್ ಖಾನ್ ಅವರು ಬಾಂಗ್ಲಾ ಅಥವಾ ಪಾಕಿಸ್ತಾನಕ್ಕೆ ತೆರಳಿ ಆಟಗಾರರನ್ನು ಆಯ್ಕೆ ಮಾಡುವುದಿಲ್ಲ. ಐಸಿಸಿ ಒಪ್ಪಿಗೆ ಮತ್ತು ನಿಯಮಾನುಸಾರವೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ’ ತಿಳಿಸಿದ್ದಾರೆ.
ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ‘ಎಲ್ಲ ವಿಷಯಕ್ಕೂ ರಾಜಕೀಯ ಲೇಪ ಅಂಟಿಸುವ ಅಗತ್ಯವಿಲ್ಲ’ ಎಂದಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಬೂ ಆಜ್ಮಿ ಅವರು, ‘ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿರುವ ಆಟಗಾರ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ್ದಾರೆಯೇ? ಸರ್ಕಾರಗಳು ದ್ವೇಷವನ್ನು ಹರಡುತ್ತಿವೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣ ದಂಡಣೆ ಶಿಕ್ಷೆಯಾಗಿದೆ. ಆದರೆ ಅವರೀಗ ಎಲ್ಲಿದ್ದಾರೆ? ನಮ್ಮ ದೇಶದಲ್ಲಿ ನೆಲಸಲು ಅವರಿಗೆ ಅವಕಾಶ ನೀಡಲಾಗಿದೆ. ತಸ್ಲೀಮಾ ನಸ್ರೀನ್ ಅವರೂ ಇಲ್ಲಿದ್ದಾರೆ. ಈ ಪ್ರಕರಣಗಳನ್ನು ಗಮನಿಸಿದಾಗ ಜನರ ಮಧ್ಯೆ ದ್ವೇಷ ಹರಡುವ ಯತ್ನ ಇದು ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.
ದ್ವೇಷ ಹರಡುವ ಯತ್ನ
ಸಮಾಜವಾದಿ ಪಕ್ಷದ ನಾಯಕ ಅಬೂ ಆಜ್ಮಿ ಅವರು, ‘ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿರುವ ಆಟಗಾರ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ್ದಾರೆಯೇ? ಸರ್ಕಾರಗಳು ದ್ವೇಷವನ್ನು ಹರಡುತ್ತಿವೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆಯಾಗಿದೆ. ಆದರೆ ಅವರೀಗ ಎಲ್ಲಿದ್ದಾರೆ? ನಮ್ಮ ದೇಶದಲ್ಲಿ ನೆಲಸಲು ಅವರಿಗೆ ಅವಕಾಶ ನೀಡಲಾಗಿದೆ. ತಸ್ಲೀಮಾ ನಸ್ರೀನ್ ಅವರೂ ಇಲ್ಲಿದ್ದಾರೆ. ಈ ಪ್ರಕರಣಗಳನ್ನು ಗಮನಿಸಿದಾಗ ಜನರ ಮಧ್ಯೆ ದ್ವೇಷ ಹರಡುವ ಯತ್ನ ಇದು ಎಂಬುದು
ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.