
ಲಂಡನ್: ಸರ್ರೆ ಪರ ಇಂಗ್ಲೆಂಡ್‌ನ ಕೌಂಟಿ ಪಂದ್ಯದಲ್ಲಿ ಆಡುವಾಗ ಸುಸ್ತಾಗಿದ್ದ ಕಾರಣ ಬೌಲಿಂಗ್ ಮಾಡುವಾಗ ಕೆಲ ಸಂದರ್ಭಗಳಲ್ಲಿ ಚೆಂಡನ್ನು ಉದ್ದೇಶಪೂರ್ವಕವಾಗಿ ‘ಎಸೆಯುತ್ತಿದ್ದೆ’ ಎಂದು ಬಾಂಗ್ಲಾದೇಶ ತಂಡದಿಂದ ಹೊರಬಿದ್ದಿರುವ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಒಪ್ಪಿಕೊಂಡಿದ್ದಾರೆ.
ಶಕೀಬ್ ಅವರ ಬೌಲಿಂಗ್ ಶೈಲಿ ನಿಯಮಬದ್ಧವಾಗಿಲ್ಲ ಎಂದು ಖಚಿತವಾದ ನಂತರ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಯೋಜಿಸುವ ಟೂರ್ನಿಗಳಿಂದ 2024ರ ಡಿಸೆಂಬರ್‌ನಲ್ಲಿ ಅಮಾನತು ಮಾಡಲಾಗಿತ್ತು.
ಟಾಂಟನ್‌ನಲ್ಲಿ ಸಾಮರ್ಸೆಟ್ ವಿರುದ್ಧ ಪಂದ್ಯದ ವೇಳೆ ಅಂಪೈರ್‌ಗಳು ಅವರ ಬೌಲಿಂಗ್ ಶೈಲಿ ಶಂಕಾಸ್ಪದವಾಗಿದೆ ಎಂದು ವರದಿ ಮಾಡಿದ್ದರು. ‘ನಾಲ್ಕು ದಿನಗಳ ಆ ಪಂದ್ಯದಲ್ಲಿ ನಾನು 70 ಓವರುಗಳನ್ನು ಮಾಡಿದ್ದೆ. ಆಯಾಸವಾಗಿತ್ತು. ಉದ್ದೇಶಪೂರ್ವಕವಾಗಿ ಕೆಲವು ಎಸೆತಗಳನ್ನು ‘ಥ್ರೊ’ ಮಾಡಿದ್ದೆ’ ಎಂದು ಅವರು ಭಾನುವಾರ ‘ಬಿಯರ್ಡ್ ಬಿಫೋರ್ ವಿಕೆಟ್ ಪೋಡ್‌ಕಾಸ್ಟ್’ನಲ್ಲಿ ಬಹಿರಂಗಪಡಿಸಿದ್ದಾರೆ.
‘ನಾನು ಟೆಸ್ಟ್ ಪಂದ್ಯದಲ್ಲಿ ಸಹ 70 ಓವರುಗಳನ್ನು ಮಾಡಿರಲಿಲ್ಲ. ಸಾಲದ್ದಕ್ಕೆ ಆಗಷ್ಟೇ ಪಾಕಿಸ್ತಾನ ಪ್ರವಾಸ ಮುಗಿಸಿದ್ದೆ. ಅಲ್ಲಿ ನಮ್ಮ ತಂಡ ಸರಣಿ ಗೆದ್ದಿತ್ತು. ನಂತರ ಈ ಕೌಂಟಿ ಪಂದ್ಯಕ್ಕೆ ಬಂದಿದ್ದೆ’ ಎಂದಿದ್ದಾರೆ 38 ವರ್ಷ ವಯಸ್ಸಿನ ಶಕೀಬ್. ಕೆಲ ಸಮಯದ ನಂತರ ಅವರು ಬೌಲಿಂಗ್ ಆ್ಯಕ್ಷನ್ ಸರಿಪಡಿಸಿಕೊಂಡಿದ್ದರು.
ತವರಿನಲ್ಲಿ ವಿದಾಯದ ಆಸೆ:
ತವರಿಗೆ ಮರಳಿ ಮೂರೂ ಮಾದರಿಯ ಪಂದ್ಯಗಳಲ್ಲಿ ಆಡಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬೇಕೆಂಬ ಬಯಕೆಯಿದೆ ಎಂದು ಶಕೀಬ್ ಹೇಳಿದ್ದಾರೆ. ಬಾಂಗ್ಲಾದೇಶ ಕಂಡ ಮಹಾನ್ ಆಟಗಾರ ಎಂಬ ಶ್ರೇಯ ಅವರದು.
ಶೇಕ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ, ಶಕೀಬ್ ದೇಶ ತೊರೆದಿದ್ದರು. ಅವರು ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಸಂಸದರಾಗಿದ್ದರು.
‘ನಾನು ಯಾವುದೇ ಮಾದರಿಗೆ ಅಧಿಕೃತವಾಗಿ ಇನ್ನೂ ನಿವೃತ್ತಿ ಹೇಳಿಲ್ಲ’ ಎಂದು ಶಕೀಬ್ ಅವರು ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.