ADVERTISEMENT

ಬಾಂಗ್ಲಾ ಸರಣಿಗೆ ಮೊಹಮ್ಮದ್ ಶಮಿ ವಾಪಸ್‌ ನಿರೀಕ್ಷೆ

ಪಿಟಿಐ
Published 11 ಮಾರ್ಚ್ 2024, 16:25 IST
Last Updated 11 ಮಾರ್ಚ್ 2024, 16:25 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ಧರ್ಮಶಾಲಾ: ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

ಕಳೆದ ತಿಂಗಳು ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ ಅವರು ಇದೇ 22ರಂದು ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅಲಭ್ಯರಾಗಿದ್ದರು. ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಿಂದಲೂ ಅವರು ಹೊರಗುಳಿಯುವುದು ಖಚಿತವಾಗಿದೆ.

‘ಶಮಿ ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅವರು ಭಾರತಕ್ಕೆ ವಾಪಸಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಗೆ ಅವರು ತಂಡವನ್ನು ಸೇರುವ ಸಾಧ್ಯತೆಯಿದೆ’ ಎಂದು ಶಾ ಹೇಳಿದ್ದಾರೆ.

ADVERTISEMENT

ಶಮಿ ಅವರು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕಾಗಿ ನವೆಂಬರ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಭಾರತ ತಂಡವು ಮುಂದಿನ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

‘ಕೆ.ಎಲ್. ರಾಹುಲ್ ಅವರಿಗೆ ಚುಚ್ಚುಮದ್ದಿನ ಅಗತ್ಯವಿತ್ತು. ಅವರು ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರ ಆರಂಭಿಸಿದ್ದಾರೆ’ ಎಂದೂ ಶಾ ಮಾಹಿತಿ ನೀಡಿದರು.

ಐಪಿಎಲ್‌ಗೆ ಪಂತ್‌: 2022ರ ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡಿರುವ ರಿಷಭ್‌ ಪಂತ್‌ ಅವರು ಐಪಿಎಲ್‌ ಟೂರ್ನಿಗೆ ಪುನರಾಗಮನ ಮಾಡುವುದು ಖಚಿತವಾಗಿದೆ.

‘ಪಂತ್‌ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜತೆಗೆ ಉತ್ತಮವಾಗಿ ಕೀಪಿಂಗ್ ನಡೆಸುತ್ತಾರೆ. ಶೀಘ್ರದಲ್ಲೇ ನಾವು ಅವರನ್ನು ಫಿಟ್ ಎಂದು ಘೋಷಿಸುತ್ತೇವೆ. ಅವರು ನಮಗೆ ಟಿ20 ವಿಶ್ವಕಪ್ ಟೂರ್ನಿ ಆಡಿದರೆ ಅದು ನಮಗೆ ದೊಡ್ಡ ವಿಷಯ. ಅವರು ನಮಗೆ ದೊಡ್ಡ ಆಸ್ತಿಯೂ ಆಗಿದ್ದಾರೆ. ಅವರು ಐಪಿಎಲ್‌ನಲ್ಲಿ ಹೇಗೆ ಆಡುತ್ತಾರೆ ಎಂದು ನೋಡೋಣ’ ಎಂದು ಜಯ್‌ ಶಾ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು ರಿಷಭ್‌ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಈ ಮೊದಲೇ ಹೇಳಿದ್ದರು.

ಐಪಿಎಲ್‌ನಲ್ಲಿ ವಿದೇಶಿ ಹೂಡಿಕೆ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ಬಿಸಿಸಿಐ ಒಂದು ಸೊಸೈಟಿಯಾಗಿದೆ. ಅದು ಕಂಪನಿಯಲ್ಲ. ಇದರಲ್ಲಿ ಯಾರೂ ಹೂಡಿಕೆ ಮಾಡುವಂತಿಲ್ಲ’ ಎಂದು ಹೇಳಿದರು.

Highlights - null

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.