ADVERTISEMENT

ಜೀವನದಲ್ಲಿ ಯಾವುದೂ ಶಾಶ್ವತವಲ್ಲ: ವಾರ್ನ್ ನಿಧನದ ಬಗ್ಗೆ ಜಡೇಜ ಬೇಸರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 17:32 IST
Last Updated 5 ಮಾರ್ಚ್ 2022, 17:32 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ಮೊಹಾಲಿ: ಲೆಗ್‌ ಸ್ಪಿನ್ ಮಾಂತ್ರಿಕ, ಆಸ್ಟ್ರೇಲಿಯಾದ ಶೇನ್ ವಾರ್ನ್‌ ನಿಧನದ ಕುರಿತು ಮಾತನಾಡಿರುವ ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ,ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

52 ವರ್ಷದ ವಾರ್ನ್ ಅವರು ಥಾಯ್ಲೆಂಡ್‌ನ ಕೋ ಸೆಮೈನಲ್ಲಿಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಐಪಿಎಲ್‌ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮೊದಲ ನಾಲ್ಕು (2008–2011) ಆವೃತ್ತಿಗಳಲ್ಲಿ ವಾರ್ನ್‌ ಮುನ್ನಡೆಸಿದ್ದರು.ಜಡೇಜ ಐಪಿಎಲ್‌ ಟೂರ್ನಿಯ ಮೊದಲೆರಡು ಆವೃತ್ತಿಗಳಲ್ಲಿ ರಾಯಲ್ಸ್‌ ತಂಡದಲ್ಲಿ ಆಡಿದ್ದರು.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ಜಡೇಜ, 'ವಾರ್ನ್‌ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಆ ಕ್ಷಣ ತುಂಬಾ ದುಃಖಿತನಾಗಿದ್ದೆ. ಇದು ಸತ್ಯವೆಂದು ನಂಬುವುದಕ್ಕೆ ಬಹಳ ಕಷ್ಟವಾಯಿತು' ಎಂದು ಹೇಳಿದ್ದಾರೆ.

'ನಾನು 2008ರಲ್ಲಿ ಮೊದಲ ಸಲ ಅವರನ್ನು ಭೇಟಿ ಮಾಡಿದ್ದೆ. ಅವರು ಆಗಲೇ ದಂತಕತೆಯಾಗಿದ್ದರು. ವಾರ್ನ್‌ ಬಳಗದಲ್ಲಿ ಆಡುತ್ತೇನೆ ಎಂಬುದನ್ನು ನಂಬಲು ಸಾಧ್ಯಾಗಿರಲಿಲ್ಲ' ಎಂದಿದ್ದಾರೆ.

ಮುಂದುವರಿದು, 'ನಾನು ಆಗಸ್ಟೇ 19 ವರ್ಷದೊಳಗಿನವರ ಕ್ರಿಕೆಟ್‌ನಿಂದ ಬಂದಿದ್ದೆ. ವಾರ್ನ್‌ ಅವರಂತಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದು ನನ್ನಂತಹ ಯುವಕರ ಪಾಲಿಗೆ ದೊಡ್ಡ ವಿಚಾರವಾಗಿತ್ತು. ಅವರು (ವಾರ್ನ್‌) ನನಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟರು' ಎಂದು ಹೇಳಿಕೊಂಡಿದ್ದಾರೆ.

'ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ವಾರ್ನ್‌ ಸಾವು ತೋರಿಸಿಕೊಟ್ಟಿದೆ. ಯಾವಾಗ ಏನು ಬೇಕಾದರೂ ಆಗಬಹುದು. ಇಂತಹ ಸುದ್ದಿಗಳು ಬೆಚ್ಚಬೀಳಿಸುತ್ತವೆ. ಎಂಥಾ ಘೋರ ನಡೆಯುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.