
ಶರೀಫುಲ್ ಇಸ್ಲಾಮ್
ನ್ಯೂಯಾರ್ಕ್: ಭಾರತ ವಿರುದ್ಧ ಶನಿವಾರ ಇಲ್ಲಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ, ಬಾಂಗ್ಲಾದೇಶ ತಂಡದ ಎಡಗೈ ವೇಗಿ ಶರೀಫುಲ್ ಇಸ್ಲಾಮ್ ಅವರ ಕೈ ಬೆರಳುಗಳ ಮಧ್ಯೆ ಗಾಯವಾಗಿದ್ದು ಆರು ಹೊಲಿಗೆ ಹಾಕಲಾಗಿದೆ. ಇದು ಬಾಂಗ್ಲಾ ತಂಡಕ್ಕೆ ಕಳವಳ ಮೂಡಿಸಿದೆ.
ತಮ್ಮ ಕೊನೆಯ ಓವರ್ ಬೌಲ್ ಮಾಡುವಾಗ ಹಾರ್ದಿಕ್ ಪಾಂಡ್ಯ ಮಾಡಿದ ಬಿರುಸಿನ ಡ್ರೈವ್‌ನಲ್ಲಿ ಚೆಂಡು ತಡೆಯುವ ಯತ್ನದಲ್ಲಿ ಅವರ ಬೌಲಿಂಗ್ ಮಾಡುವ ಕೈಯ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯೆ ಗಾಯವಾಗಿತ್ತು. ನೋವಿನಿಂದ ಮೈದಾನ ತೊರೆದಿದ್ದರು.
ಹೀಗಾಗಿ ಓವರ್‌ನ ಕೊನೆಯ ಎಸೆತವನ್ನು ಅವರ ಬದಲು ತಾನ್ಜಿಮ್ ಹಸನ್ ಶಕೀಬ್ ಮಾಡಿದ್ದರು.
ಶರೀಫುಲ್ ಅವರನ್ನು ನಸೌ ಯುನಿವರ್ಸಿಟಿ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದ್ದು, ಸರ್ಜನ್ ಅವರು ಆರು ಹೊಲಿಗೆ ಹಾಕಿದ್ದಾರೆ. ಎರಡು ದಿನಗಳ ನಂತರ ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಚೇತರಿಕೆ ಬಗ್ಗೆ ತಿಳಿಯಲಾಗುವುದು ಎಂದು ಮುಖ್ಯ ಫಿಸೀಷಿಯನ್ ಡಾ.ದೇಬಾಶಿಶ್ ಚೌಧರಿ ಇಎಸ್‌ಪಿನ್‌ಕ್ರಿಕ್ ಇನ್ಫೋಗೆ ಖಚಿತಪಡಿಸಿದ್ದಾರೆ.
ಶರೀಫುಲ್ ಆ ಪಂದ್ಯದಲ್ಲಿ 3.5 ಓವರುಗಳಲ್ಲಿ 26 ರನ್ನಿಗೆ 1 ವಿಕೆಟ್ ಪಡೆದಿದ್ದರು.
ಬಾಂಗ್ಲಾ ತನ್ನ ಮೊದಲ ಪಂದ್ಯವನ್ನು ಜೂನ್ 7ರಂದು ಟೆಕ್ಸಾಸ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದು, ಆ ಪಂದ್ಯದ ವೇಳೆಗೆ ಶರೀಫುಲ್ ಫಿಟ್ ಆಗುವರೇ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನೊಬ್ಬ ವೇಗಿ ತಸ್ಕಿನ್ ಅಹ್ಮದ್ ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.