ಸಂಜು ಸ್ಯಾಮ್ಸನ್
ಚಿತ್ರ BCCI
ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಅವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸಂಜು ಸ್ಯಾಮ್ಸನ್ ಅವರು ವಿಂಡೀಸ್ ವಿರುದ್ಧ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿದರು. ಇನ್ನೂ ಅವರ ಈ ಇನಿಂಗ್ಸ್ ಕುರಿತು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಶಶಿ ತರೂರ್ ಮೆಚ್ಚುಗೆ
ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಂಜು ಸ್ಯಾಮ್ಸನ್ ಆಟವನ್ನು ಶ್ಲಾಘಿಸಿದ್ದಾರೆ. ‘ವೆಸ್ಟ್ ಇಂಡೀಸ್ ವಿರುದ್ಧದ ಅದ್ಭುತ ಇನಿಂಗ್ಸ್ ಮೂಲಕ ಭಾರತ ತಂಡವನ್ನು ಸೆಮಿಫೈನಲ್‌ಗೆ ಕರೆದುಕೊಂಡು ಹೋದ ಬಳಿಕ ಸಂಜು ಸ್ಯಾಮ್ಸನ್ ಅವರ ಬಗ್ಗೆ ಹೆಮ್ಮೆ ಮತ್ತು ನೆಮ್ಮದಿಯ ಅನುಭವವಾಗುತ್ತಿದೆ. ಈ ಹಿಂದೆ ಅವರು ವೈಫಲ್ಯ ಅನುಭವಿಸಿ, ತಂಡದಿಂದ ಸ್ಥಾನ ಕಳೆದುಕೊಂಡಿದ್ದಾಗಮ, ನಾನು ನೋವು ಅನುಭವಿಸಿದ್ದೆ. ಇಂದು ಅವರು ತಾವೊಬ್ಬ ಅಗ್ರ ಕ್ರಮಾಂಕದ ಬ್ಯಾಟರ್ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಅವರು ತಿರುವನಂತಪುರದ ಮಗ, ಭಾರತದ ಹೆಮ್ಮೆ, ನಮ್ಮ ಸಂಜು, ನಮ್ಮ ಹೆಮ್ಮೆ’ ಎಂದು ಬರೆದುಕೊಂಡಿದ್ದಾರೆ.
ಉತ್ತಮವಾಗಿ ಆಡಿದ್ದೀರಿ ಎಂದ ಸಚಿನ್
ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡವನ್ನು ಮತ್ತು ಅದ್ಭುತ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ಅವರನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಶ್ಲಾಘಿಸಿದ್ದಾರೆ.
‘ನಿರ್ಣಾಯಕ ಪಂದ್ಯದಲ್ಲಿ ನಮ್ಮ ಹುಡುಗರು ಅಮೋಘ ಪ್ರದರ್ಶನ ತೋರಿದ್ದಾರೆ. ಎರಡೂ ಇನಿಂಗ್ಸ್‌ಗಳಲ್ಲಿ ಅಂತಿಮ ಓವರ್‌ಗಳನ್ನು ಚೆನ್ನಾಗಿ ನಿರ್ವಹಿಸಿದ್ದು ನಮಗೆ ಮುನ್ನಡೆ ತಂದು ಕೊಟ್ಟಿತು. ಕ್ರೀಸ್‌ನಲ್ಲಿ ಸಂಜು ಸ್ಯಾಮ್ಸನ್ ಅವರ ತಾಳ್ಮೆಯ ಆಟ ನೋಡಲು ಅದ್ಭುತವಾಗಿತ್ತು. ಈ ರೀತಿಯ ಆಟ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತದೆ. ಎಲ್ಲರೂ ಉತ್ತಮವಾಗಿ ಆಡಿದ್ದೀರಿ, ಸೆಮಿಫೈನಲ್‌ನಿಂದ ಮುಂದೆ ಸಾಗಿ’ ಎಂದು ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.