ADVERTISEMENT

ಇಂಗ್ಲೆಂಡ್‌ಗೆ ಶಾ, ಸೂರ್ಯಕುಮಾರ್

ಏಜೆನ್ಸೀಸ್
Published 26 ಜುಲೈ 2021, 14:13 IST
Last Updated 26 ಜುಲೈ 2021, 14:13 IST
ಪೃಥ್ವಿ ಶಾ –ಎಎಫ್‌ಪಿ ಚಿತ್ರ
ಪೃಥ್ವಿ ಶಾ –ಎಎಫ್‌ಪಿ ಚಿತ್ರ   

ನವದೆಹಲಿ: ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಸೂರ್ಯಕುಮಾರ್ ಯಾದವ್ ಅವರು ಇಂಗ್ಲೆಂಡ್‌ನಲ್ಲಿರುವ ಭಾರತ ಟೆಸ್ಟ್‌ ತಂಡವನ್ನು ಸೇರಲು ವೇದಿಕೆ ಸಜ್ಜಾಗಿದೆ. ಗಾಯಗೊಂಡಿರುವ ಆಟಗಾರರ ಬದಲು ಅವರಿಬ್ಬರನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ.

ಸದ್ಯ ಪೃಥ್ವಿ ಮತ್ತು ಸೂರ್ಯಕುಮಾರ್ ಶ್ರೀಲಂಕಾದಲ್ಲಿ ನಿಗದಿತ ಓವರ್‌ಗಳ ಸರಣಿಗಳನ್ನು ಆಡಲು ತೆರಳಿರುವ ತಂಡದ ಜೊತೆ ಇದ್ದಾರೆ. ಟೆಸ್ಟ್‌ ತಂಡದಲ್ಲಿದ್ದ ಶುಭಮನ್ ಗಿಲ್‌, ಆವೇಶ್ ಖಾನ್ ಮತ್ತು ವಾಷಿಂಗ್ಟನ್‌ ಸುಂದರ್ ಗಾಯಗೊಂಡಿರುವ ಕಾರಣ ಇವರಿಬ್ಬರಿಗೆ ಅವಕಾಶ ನೀಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ತಿಳಿಸಿದೆ.

ಶ್ರೀಲಂಕಾ ಎದುರಿನ ಏಕದಿನ ಸರಣಿಯನ್ನು 2–1ರಲ್ಲಿ ಗೆದ್ದಿರುವ ಶಿಖರ್ ಧವನ್ ನೇತೃತ್ವದ ಭಾರತ ತಂಡ ಭಾನುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 38 ರನ್‌ಗಳಿಂದ ಜಯ ಗಳಿಸಿತ್ತು. ಎರಡನೇ ಪಂದ್ಯ ಮಂಗಳವಾರ ನಡೆಯಲಿದೆ. ಪೃಥ್ವಿ ಮತ್ತು ಸೂರ್ಯಕುಮಾರ್ ಮೂರನೇ ಟಿ20 ಪಂದ್ಯಕ್ಕೆ ಲಭ್ಯ ಇರುತ್ತಾರೆಯೇ ಇಲ್ಲವೇ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿಲ್ಲ.

ADVERTISEMENT

ಕೋವಿಡ್ ಸೋಂಕಿಗೆ ಒಳಗಾಗಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಚೇತರಿಸಿಕೊಂಡಿದ್ದು ಎರಡು ಪರೀಕ್ಷಾ ವರದಿಗಳ ವರದಿಯೂ ನೆಗೆಟಿವ್ ಆಗಿದೆ. ಆಗಸ್ಟ್ ನಾಲ್ಕರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅವರು ಅಭ್ಯಾಸ ಆರಂಭಿಸಿದ್ದಾರೆ.

ಬೌಲಿಂಗ್ ಕೋಚ್ ಬಿ.ಅರುಣ್‌, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮತ್ತು ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ಅವರ ಪ್ರತ್ಯೇಕವಾಸ ಮುಗಿದಿದ್ದು ತಂಡವನ್ನು ಸೇರಿಕೊಂಡಿದ್ದಾರೆ.

ಸೌತಾಂಪ್ಟನ್‌ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ನಂತರ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ವಿರಾಮ ನೀಡಲಾಗಿತ್ತು. ಆದರೆ ಆಟಗಾರರು ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದರು. ಪಂತ್‌ ಅವರಿಗೆ ಕೋವಿಡ್ ಇರುವುದು ಜುಲೈ ಎಂಟರಂದು ಖಾತರಿಯಾಗಿತ್ತು. ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ದಯಾನಂದ್ ಗರಾನಿ ಅವರಿಗೂ ಸೋಂಕು ತಗುಲಿತ್ತು. ಅವರ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ ಅರುಣ್‌, ಸಹಾ ಮತ್ತು ಈಶ್ವರನ್ ಅವರನ್ನು 10 ದಿನ ಪ್ರತ್ಯೇಕವಾಸದಲ್ಲಿ ಇರುವಂತೆ ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.