ADVERTISEMENT

ರಣಜಿ ಟ್ರೋಫಿ ಫೈನಲ್ | ಶುಭಂ ಶತಕ; ಕಾಶ್ಮೀರ ಶುಭಾರಂಭ

ಗಿರೀಶ ದೊಡ್ಡಮನಿ
Published 24 ಫೆಬ್ರುವರಿ 2026, 17:30 IST
Last Updated 24 ಫೆಬ್ರುವರಿ 2026, 17:30 IST
<div class="paragraphs"><p>ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ&nbsp; &nbsp;ಜಮ್ಮು ಮತ್ತು ಕಾಶ್ಮೀರ ತಂಡದ ಶುಭಂ ಪುಂದೀರ ಅವರ ಬ್ಯಾಟಿಂಗ್ ವೈಖರಿ </p></div>

ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ   ಜಮ್ಮು ಮತ್ತು ಕಾಶ್ಮೀರ ತಂಡದ ಶುಭಂ ಪುಂದೀರ ಅವರ ಬ್ಯಾಟಿಂಗ್ ವೈಖರಿ

   

ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಹುಬ್ಬಳ್ಳಿ: ಮೊದಲ ಬಾರಿ ರಣಜಿ ಟ್ರೋಫಿ ಫೈನಲ್ ಪಂದ್ಯ ಕಣ್ತುಂಬಿಕೊಳ್ಳುವ ಹುಬ್ಬಳ್ಳಿಗರ ಉತ್ಸಾಹಕ್ಕೆ ಬಿರುಬಿಸಿಲು ಅಡ್ಡಿಯಾಗಲಿಲ್ಲ. ಪ್ರಥಮ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ಜಮ್ಮು–ಕಾಶ್ಮೀರದ ಆಟಗಾರರು ಕರ್ನಾಟಕ ಬೌಲರ್‌ಗಳ ದಾಳಿಯ ‘ಕಾವು’ ಮೀರಿ ನಿಂತರು. 

ADVERTISEMENT

ಶುಭಂ ಪುಂದಿರ ಅವರ ಅಮೋಘ ಶತಕದ ಬಲದಿಂದ ಕಣಿವೆ ರಾಜ್ಯದ ತಂಡವು ಮಂಗಳವಾರ ಶುರುವಾದ  ಫೈನಲ್ ಪಂದ್ಯದಲ್ಲಿ ಶುಭಾರಂಭ ಮಾಡಿತು. ದಿನದಾಟದ ಮುಕ್ತಾಯಕ್ಕೆ 87 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 284 ರನ್ ಗಳಿಸಿತು. ಆ ಮೂಲಕ ದೊಡ್ಡ ಮೊತ್ತ ಕಲೆಹಾಕಲು ಅಡಿಪಾಯ ನಿರ್ಮಿಸಿಕೊಂಡಿತು. ಕ್ರೀಸ್‌ನಲ್ಲಿ ಎಡಗೈ ಬ್ಯಾಟರ್ ಶುಭಂ (ಬ್ಯಾಟಿಂಗ್ 117; 221ಎ) ಮತ್ತು ಸಮದ್ (ಬ್ಯಾಟಿಂಗ್ 52; 67ಎ) ಕ್ರೀಸ್‌ನಲ್ಲಿದ್ದಾರೆ. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ  105 ರನ್ ಸೇರಿಸಿದ್ದಾರೆ. 

ಅನುಭವಿ ವೇಗಿ ಪ್ರಸಿದ್ಧ ಕೃಷ್ಣ (16–5–36–2) ಅವರನ್ನು ಬಿಟ್ಟರೆ ಉಳಿದ ಬೌಲರ್‌ಗಳು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. 

ಟಾಸ್ ಗೆದ್ದ ಪ್ರವಾಸಿ ಬಳಗವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಕಮ್ರನ್ ಇಕ್ಬಾಲ್ ಮತ್ತು ಯಾವೆರ್ ಹಸನ್  ಅವರಿಬ್ಬರೂ ಮೊದಲ ಹತ್ತು ಓವರ್‌ಗಳಲ್ಲಿ ಎಚ್ಚರಿಕೆಯಿಂದ ಆಡಿದರು. ಈ ಅವಧಿಯಲ್ಲಿ ಕೇವಲ 18 ರನ್‌ಗಳು ಮಾತ್ರ ಸೇರಿದ್ದವು. 

ಇದೇ ಸಂದರ್ಭದಲ್ಲಿ ಪ್ರಸಿದ್ಧ ಹಾಕಿದ ಎಸೆತವನ್ನು ಕಟ್ ಮಾಡಲು ಯತ್ನಿಸಿದ ಕಮ್ರನ್ (6 ರನ್) ಮೊದಲ ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್‌ ಅವರಿಗೆ ಕ್ಯಾಚ್ ಕೊಟ್ಟರು. ಆಗ ಕ್ರೀಸ್‌ಗೆ ಬಂದ 27 ವರ್ಷದ ಶುಭಂ ದಿನವಿಡೀ ತಮ್ಮ ತಾಳ್ಮೆ ಹಾಗೂ ಏಕಾಗ್ರಚಿತ್ತದ ಆಟದ ಮೂಲಕ ಬೌಲರ್‌ಗಳನ್ನು ಕಾಡಿದರು. ಎರಡು ದೊಡ್ಡ ಜೊತೆಯಾಟಗಳಿಗೆ ಕಾರಣರಾದರು. 

ಎರಡನೇ ವಿಕೆಟ್ ಜೊತೆಯಾಟದಲ್ಲಿ ಹಸನ್ (88;150ಎ) ಜೊತೆಗೆ 139 ರನ್ (244 ಎಸೆತ) ಸೇರಿಸಿದರು.   ಊಟದ ವಿರಾಮದ ನಂತರದ 17ನೇ ಓವರ್‌ನಲ್ಲಿ ಪ್ರಸಿದ್ಧ ಹಾಕಿದ ಎಸೆತವನ್ನು ಆಡಲು ಹಸನ್ ಪ್ರಯತ್ನಿಸಿದರು. ಚೆಂಡು ಅವರ ಬ್ಯಾಟ್ ಅಂಚು ಸವರಿ ಮೊದಲ ಸ್ಲಿಪ್‌ನಲ್ಲಿದ್ದ ರಾಹುಲ್ ಅವರಿಗೆ ಕ್ಯಾಚ್ ಆಯಿತು. ಕೆಳಮಟ್ಟದಲ್ಲಿ ಸಾಗಿಬಂದ ಚೆಂಡನ್ನು ಚಾಕಚಕ್ಕತೆಯಿಂದ ರಾಹುಲ್ ಬೊಗಸೆ ತುಂಬಿಕೊಂಡಿದ್ದು ಬ್ಯಾಟರ್ ಪಡೆದ ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಮನವಿಯಲ್ಲಿ ಸ್ಪಷ್ಟವಾಗಿತ್ತು. 

ಮೂಲತಃ ಡೆಹ್ರಾಡೂನ್‌ನವರಾದ ಶುಭಂ ಕ್ರೀಸ್‌ಗೆ ಬಂದ ನಾಯಕ ಪಾರಸ್ ಡೋಗ್ರಾ ಅವರೊಂದಿಗೂ ಉತ್ತಮ ಜೊತೆಯಾಟವಾಡುವ ಲಕ್ಷಣ ತೋರಿದರು. ಡೋಗ್ರಾ ಕೂಡ ನಿಧಾನವಾಗಿಯೇ ರನ್‌ ಗಳಿಸಿದರು. 

ಈ  ಅವಧಿಯಲ್ಲಿ ಪ್ರಸಿದ್ಧ, ವೈಶಾಖ, ವಿದ್ಯಾಧರ್ ಅವರ ದಾಳಿಯು ಚುರುಕಾಗಿತ್ತು. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ಶಿಖರ್ ಶೆಟ್ಟಿಯವರ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿಲ್ಲ. ಡೋಗ್ರಾ ಅವರ ಕ್ಯಾಚ್‌ ಕೈಚೆಲ್ಲಿದ ಅನೀಶ್ ಒಂದು ಜೀವದಾನ ಕೂಡ ನೀಡಿದರು.

ಈ ನಡುವೆ ಪ್ರಸಿದ್ಧ ಹಾಕಿದ ಬೌನ್ಸರ್‌ ಡೋಗ್ರಾ ಅವರ ಭುಜಕ್ಕೆ ಬಡಿಯಿತು. ಕೆಲವು ಓವರ್‌ಗಳ ನಂತರ ವೈಶಾಖ ಬೌಲಿಂಗ್‌ನಲ್ಲಿ ಡೋಗ್ರಾ ಬಲಗೈ ಹೆಬ್ಬೆರಳಿಗೆ ಚೆಂಡು ಅಪ್ಪಳಿಸಿ ನೋವುಂಡರು. ಕೈಗವಸು ಹಾಕಿಕೊಳ್ಳಲೂ ಕಷ್ಟಪಟ್ಟರು. ಅದರಿಂದಾಗಿ ಅವರು ಪೆವಿಲಿಯನ್‌ಗೆ ಮರಳಿದರು. 

ಇದೆಲ್ಲದರ ನಡುವೆ ತಣ್ಣಗೆ ಆಡುತ್ತಿದ್ದ ಶುಭಂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕನೇ ಹಾಗೂ ಈ ಋತುವಿನಲ್ಲಿ  ಎರಡನೇ ಶತಕ ದಾಖಲಿಸಿದರು. ಶಿಖರ್  ಹಾಕಿದ 70ನೇ ಓವರ್‌ನಲ್ಲಿ ಸಿಕ್ಸರ್ ಎತ್ತಿದ ಅವರು ನೂರರ ಗಡಿ ದಾಟಿದರು. 

ಇನ್ನೊಂದೆಡೆ ಸಮದ್  ತಮ್ಮ ಎಂದಿನ ಶೈಲಿಯ ಬೀಸಾಟವಾಡಿದರು. 62 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಇದರಿಂದಾಗಿ ತಂಡದ ಮೊತ್ತವು ಹೆಚ್ಚಿತು. 

ಟಿಕೆಟ್ ಖರೀದಿಸಿ ಬಂದ ಪ್ರೇಕ್ಷಕರು

ಮೊದಲ ಬಾರಿ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ಐದು ಸಾವಿರ ಪ್ರೇಕ್ಷಕರು ಸೇರಿದ್ದರು. ₹ 100 ಮತ್ತು ₹ 200 ದರದ ಟಿಕೆಟ್‌ಗಳನ್ನು ಖರೀದಿಸಿ ಪಂದ್ಯ ವೀಕ್ಷಿಸಿದರು.  ಈ ಹಿಂದೆ ಇಲ್ಲಿ ನಡೆದಿದ್ದ ಯಾವುದೇ ರಣಜಿ ಪಂದ್ಯಗಳಿಗೆ ಈ ರೀತಿ ಟಿಕೆಟ್‌ ನಿಗದಿಪಡಿಸಿರಲಿಲ್ಲ. ಆದರೆ ಮೊದಲ ಸಲ ನಡೆಯುತ್ತಿರುವ ಫೈನಲ್ ಪಂದ್ಯಕ್ಕೆ ಟಿಕೆಟ್ ಮಾಡಿರುವುದರ ಕುರಿತು ಹಲವು ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದರು. 

‘ಕರ್ನಾಟಕ ತಂಡದಲ್ಲಿ ಅಂತರರಾಷ್ಟ್ರೀಯ ಆಟಗಾರರು ಇದ್ದಾರೆ. ಅವರನ್ನು ನೋಡಲು ನಾವೆಲ್ಲ ಬಂದಿದ್ದೇವೆ’ ಎಂದು ಟಿಕೆಟ್ ಪಡೆಯುವ ಸಾಲಿನಲ್ಲಿದ್ದ ಶಿವಕುಮಾರ್ ಹೇಳಿದರು.  ‘ಫೈನಲ್ ಆಯೋಜನೆಯ ದಿನಾಂಕ ಪ್ರಕಟವಾದಾಗ ನಮಗೆ ಸಿದ್ಧತೆಗಾಗಿ ಉಳಿದಿದ್ದು ಮೂರ್ನಾಲ್ಕು ದಿನಗಳು ಮಾತ್ರ. ಪೂರ್ಣ ಉಚಿತವಾಗಿ ಪ್ರವೇಶ ಇಟ್ಟರೆ ಜನಜಂಗುಳಿ ನಿಯಂತ್ರಿಸುವುದು ಕಷ್ಟ. ಆದ್ದರಿಂದ ಹೆಚ್ಚು ದುಬಾರಿಯಲ್ಲದ ದರವನ್ನು ನಿಗದಿ ಮಾಡಿದ್ದೇವೆ. ಇದರಿಂದ ನಿಯಮಿತ ಸಂಖ್ಯೆಯ ಆಸನಗಳನ್ನು ಒದಗಿಸಲು ಸಾಧ್ಯವಾಗಲಿದೆ. ಸುರಕ್ಷತೆ ಒದಗಿಸಲೂ ಸಾಧ್ಯವಾಗುತ್ತದೆ’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.